alex Certify ಲಂಕಾ ಧೂಳೀಪಟ ಮಾಡಿದ ಭಾರತ, ಮೊಹಮ್ಮದ್ ಸಿರಾಜ್ ದಾಖಲೆಗಳ ಸುರಿಮಳೆ: ಇಲ್ಲಿದೆ ದಾಖಲೆಗಳ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಕಾ ಧೂಳೀಪಟ ಮಾಡಿದ ಭಾರತ, ಮೊಹಮ್ಮದ್ ಸಿರಾಜ್ ದಾಖಲೆಗಳ ಸುರಿಮಳೆ: ಇಲ್ಲಿದೆ ದಾಖಲೆಗಳ ವಿವರ

ಕೊಲಂಬೊ: ಶ್ರೀಲಂಕಾ ವಿರುದ್ಧ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಭಾರತ 10 ವಿಕೆಟ್ ಗಳ ಭರ್ಜರಿ ಜಯ ಗಳಿಸಿದ್ದು, 8ನೇ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದಿದೆ.

7 ಸಲ ಏಕದಿನ, 1 ಟಿ20 ಏಷ್ಯಾಕಪ್ ಜಯಿಸಿದೆ. ಭಾನುವಾರದ ಪಂದ್ಯ ಮಳೆ ಕಾರಣ 40 ನಿಮಿಷ ತಡವಾಗಿ ಆರಂಭವಾಗಿದ್ದು, ಶ್ರೀಲಂಕಾ 15.2 ಓವರ್ ಗಳಲ್ಲಿ ಕೇವಲ 50 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತ 6.1 ಓವರ್ ನಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿದ್ದು, ಏಕದಿನದಲ್ಲಿ ಬಾಕಿ ಉಳಿದ ಎಸೆತಗಳ ಆಧಾರದಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದೆ.

ದಾಖಲೆಗಳ ಸುರಿಮಳೆ

ಏಕದಿನದಲ್ಲಿ ಇದು ಶ್ರೀಲಂಕಾದ ಎರಡನೇ ಕನಿಷ್ಠ ಮೊತ್ತವಾಗಿದೆ. 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 42 ರನ್ ಗೆ ಆಲ್ ಔಟ್ ಆಗಿತ್ತು.

ಏಕದಿನದಲ್ಲಿ ತಂಡವೊಂದು 50 ಅಥವಾ ಅದಕ್ಕಿಂತ ಕಡಿಮೆ ಮೊತ್ತಕ್ಕೆ ಎಲ್ಲಾ ವಿಕೆಟ್ ಕಳೆದುಕೊಂಡಿರುವುದು ಇದು 10ನೇ ಬಾರಿಯಾಗಿದೆ.

ಶ್ರೀಲಂಕಾದ ಇನ್ನಿಂಗ್ಸ್ 15.2 ಓವರ್ ನಲ್ಲಿ 92 ಎಸೆತಗಳಿಗೆ ಮುಕ್ತಾಯಗೊಂಡಿತು. ತಂಡವೊಂದು ಒಟ್ಟು ಎದುರಿಸಿದ ಎಸೆತಗಳ ಆಧಾರದಲ್ಲಿ ಇದು ನಾಲ್ಕನೇ ಅತಿ ಸಣ್ಣ ಇನಿಂಗ್ಸ್ ಆಗಿದೆ.

ಭಾರತ ಈ ಪಂದ್ಯವನ್ನು 263 ಎಸೆತಗಳು ಬಾಕಿ ಇರುವಾಗಲೇ ಜಯಿಸಿದೆ. ಇದು ತಂಡದ ಅತಿ ದೊಡ್ಡ ಗೆಲುವು. 2001ರಲ್ಲಿ ಕೀನ್ಯಾ ವಿರುದ್ಧ 231 ಎಸೆತ ಬಾಕಿ ಇರುವಾಗಲೇ ಜಯಗಳಿಸಿದ್ದು ಈ ಹಿಂದಿನ ದಾಖಲೆಯಾಗಿತ್ತು.

ಭಾರತ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ತಂಡ ಒಂದರ ಕನಿಷ್ಠ ಮೊತ್ತ ಇದಾಗಿದೆ(50ರನ್). 2014ರಲ್ಲಿ ಬಾಂಗ್ಲಾ 58 ರನ್ ಗೆ ಎಲ್ಲ ವಿಕೆಟ್ ಕಳೆದುಕೊಂಡಿತ್ತು.

ಏಕದಿನ ಟೂರ್ನಿಯ ಫೈನಲ್ ನಲ್ಲಿ ದಾಖಲಾದ ಕನಿಷ್ಠ ಮೊತ್ತ ಇದಾಗಿದೆ.

ಸಿರಾಜ್ ದಾಖಲೆ

ಮೊಹಮ್ಮದ್ ಸಿರಾಜ್ 7 ಓವರ್ ಬೌಲಿಂಗ್ ಮಾಡಿ ಒಂದು ಮೇಡನ್ ಸಹಿತ 21 ರನ್ ನೀಡಿ 6 ವಿಕೆಟ್ ಪಡೆದರು. ಒಂದೇ ಓವರ್ ನಲ್ಲಿ 4 ವಿಕೆಟ್ ಕಬಳಿಸಿದ ಭಾರತದ ಮೊದಲ ಬೌಲರ್ ಎನ್ನುವ ಕೀರ್ತಿಗೆ ಸಿರಾಜ್ ಪಾತ್ರರಾಗಿದ್ದಾರೆ.

ಮೊಹಮ್ಮದ್ ಸಿರಾಜ್ ಎಸೆದ ಎರಡನೇ ಓವರ್ ನಲ್ಲಿ 4 ವಿಕೆಟ್ ಪಡೆದರು. ಏಕದಿನ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಮತ್ತು ವಿಶ್ವದ ಐದನೇ ಬೌಲರ್ ಆಗಿದ್ದಾರೆ. ಈ ಮೊದಲು ಶ್ರೀಲಂಕಾದ ಲಸಿತ್ ಮಾಲಿಂಗ, ಚಾಮಿಂಡ ವಾಸ್, ಪಾಕಿಸ್ತಾನದ ಮಹಮದ್ ಸಮಿ, ಇಂಗ್ಲೆಂಡ್ ನ ಆದಿಲ್ ರಶೀದ್ ಈ ಸಾಧನೆ ಮಾಡಿದ್ದಾರೆ.

ಸಿರಾಜ್ ಮೊದಲ 16 ಎಸೆತಗಳಲ್ಲಿ 5 ವಿಕೆಟ್ ಪಡೆದು ಏಕದಿನದಲ್ಲಿ ಅತಿ ವೇಗದ 5 ವಿಕೆಟ್ ಗೊಂಚಲು ಪಡೆದ ಚಾಮಿಂಡ ವಾಸ್ ಅವರ ದಾಖಲೆ ಸರಿಗಟಿದ್ದಾರೆ. 2013ರ ವಿಶ್ವಕಪ್ ನಲ್ಲಿ ಬಾಂಗ್ಲಾ ವಿರುದ್ಧ ವಾಸ್ 16 ಎಸೆತಗಳಲ್ಲಿ 5 ವಿಕೆಟ್ ಪಡೆದಿದ್ದರು.

ಸಿರಾಜ್ ಏಷ್ಯಾ ಕಪ್ ಇತಿಹಾಸದಲ್ಲಿ ಆರು ವಿಕೆಟ್ ಗೊಂಚಲು ಪಡೆದ ಎರಡನೇ ಬೌಲರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2008ರಲ್ಲಿ ಭಾರತದ ವಿರುದ್ಧ ಶ್ರೀಲಂಕಾದ ಸ್ಪಿನ್ನರ್ ಅಜಂತ ಮೆಂಡಿಸ್ 13 ರನ್ ಗೆ ಆರು ವಿಕೆಟ್ ಪಡೆದಿದ್ದರು.

ಸಿರಾಜ್ ಏಕದಿನ ಕ್ರಿಕೆಟ್ ನಲ್ಲಿ 6 ವಿಕೆಟ್ ಪಡೆದ ಭಾರತದ 11ನೇ ಬೌಲರ್ ಆಗಿದ್ದಾರೆ. ರೋಜರ್ ಬಿನ್ನಿ, ಅನಿಲ್ ಕುಂಬ್ಳೆ, ಬೂಮ್ರ, ಆಶಿಶ್ ನೆಹ್ರಾ(2 ಸಲ), ಕುಲದೀಪ್, ಮುರಳಿ ಕಾರ್ತಿಕ್, ಆಗರ್ಕರ್ ಚಾಹಲ್, ಅಮಿತ್ ಮಿಶ್ರಾ, ಶ್ರೀಶಾಂತ್ ಇತರ ಸಾಧಕರಾಗಿದ್ದಾರೆ.

2002ರ ನಂತರ ಇನಿಂಗ್ಸ್ ನ 10 ಓವರ್ ಒಳಗೆ 5 ವಿಕೆಟ್ ಪಡೆದ ಭಾರತದ ಬೌಲರ್ ಸಿರಾಜ್ ಆಗಿದ್ದಾರೆ.

ಸಿರಾಜ್ ಏಕದಿನ ಕ್ರಿಕೆಟ್ ನಲ್ಲಿ 50 ವಿಕೆಟ್ ಪಡೆದಿದ್ದಾರೆ. 29ನೇ ಪಂದ್ಯದಲ್ಲಿ 1002 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಎಸೆತಗಳ ಆಧಾರದಲ್ಲಿ ವೇಗವಾಗಿ 50 ವಿಕೆಟ್ ಪಡೆದ ಸಾಧಕರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. 847 ಎಸೆತಗಳಲ್ಲಿ 50 ವಿಕೆಟ್ ಪಡೆದ ಶ್ರೀಲಂಕಾದ ಅಜಂತ ಮೆಂಡಿಸ್ ಮೊದಲ ಸ್ಥಾನದಲ್ಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...