alex Certify SHOCKING: ಅಮೆರಿಕದಲ್ಲಿ ನಿಲ್ಲದ ಜನಾಂಗೀಯ ನಿಂದನೆ; ಮತ್ತೋರ್ವ ಭಾರತೀಯನಿಗಾಯ್ತು ಕಹಿ ಅನುಭವ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಅಮೆರಿಕದಲ್ಲಿ ನಿಲ್ಲದ ಜನಾಂಗೀಯ ನಿಂದನೆ; ಮತ್ತೋರ್ವ ಭಾರತೀಯನಿಗಾಯ್ತು ಕಹಿ ಅನುಭವ….!

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬರು  ಜನಾಂಗೀಯ ನಿಂದನೆಗೆ ಒಳಗಾಗಿದ್ದಾರೆ. ಕೃಷ್ಣನ್‌ ಜಯರಾಮನ್‌ ಎಂಬುವವರನ್ನು “ಕೊಳಕು ಹಿಂದೂ” ಮತ್ತು “ಅಸಹ್ಯಕರ ನಾಯಿ” ಎಂದೆಲ್ಲ ಸಿಂಗ್‌ ತೇಜಿಂದರ್‌ ಎಂಬಾತ ನಿಂದಿಸಿದ್ದಾನೆ. ಇತ್ತೀಚೆಗಷ್ಟೆ ಟೆಕ್ಸಾಸ್‌ನಲ್ಲಿ ಇದೇ ರೀತಿ ನಾಲ್ವರು ಮಹಿಳೆಯರು ಕೂಡ ಜನಾಂಗೀಯ ನಿಂದನೆಗೆ ಒಳಗಾಗಿದ್ದರು.

ಆಗಸ್ಟ್ 21 ರಂದು ಕ್ಯಾಲಿಫೋರ್ನಿಯಾದ ಗ್ರಿಮ್ಮರ್ ಬೌಲೆವಾರ್ಡ್‌ನಲ್ಲಿರುವ ಟ್ಯಾಕೋ ಬೆಲ್‌ನಲ್ಲಿ 37 ವರ್ಷದ ಸಿಂಗ್ ತೇಜಿಂದರ್ ಎಂಬಾತ ಕೃಷ್ಣನ್‌ ವಿರುದ್ಧ ಆಕ್ಷೇಪಾರ್ಹ ಭಾಷೆಗಳನ್ನು ಬಳಸಿದ್ದಾನೆ. ಈತನ ವಿರುದ್ಧ ನಾಗರಿಕ ಹಕ್ಕುಗಳ ಉಲ್ಲಂಘನೆ, ಹಲ್ಲೆ ಮತ್ತು ಆಕ್ಷೇಪಾರ್ಹ ಭಾಷೆಯಿಂದ ಶಾಂತಿ ಕದಡುವ ದ್ವೇಷದ ಅಪರಾಧದ ಆರೋಪ ಹೊರಿಸಲಾಗಿದೆ ಎಂದು ಫ್ರೀಮಾಂಟ್ ಪೊಲೀಸ್ ಇಲಾಖೆ ತಿಳಿಸಿದೆ. ಸುಮಾರು 8 ನಿಮಿಷಗಳ ಕಾಲ ಆತ ಜಯರಾಮನ್‌ರನ್ನು ನಿಂದಿಸಿದ್ದಾನೆ. ಅದು ಮೊಬೈಲ್‌ನಲ್ಲಿ ಸೆರೆಯಾಗಿದೆ.

“ನೀವೊಬ್ಬ ಅಸಹ್ಯಕರ ನಾಯಿ, ಇನ್ನು ಮುಂದೆ ಈ ರೀತಿ ಸಾರ್ವಜನಿಕವಾಗಿ ಬರಬೇಡಿ ಎಂದೆಲ್ಲ ಅಶ್ಲೀಲವಾಗಿ ಮಾತನಾಡಿರುವ ತೇಜಿಂದರ್‌, ಅವರನ್ನು “ಕೊಳಕು ಹಿಂದೂ” ಎಂದು ಕರೆದಿದ್ದಾನೆ. ಪದೇ ಪದೇ ಕೆಟ್ಟ ಪದವನ್ನು ಬಳಸಿದ್ದಾನೆ. ಜಯರಾಮನ್‌ ದನದ ಮಾಂಸ ತಿನ್ನುವುದಿಲ್ಲ ಎಂದಿದ್ದಕ್ಕೆ, ಎರಡು ಬಾರಿ ಆತ ಜಯರಾಮನ್ ಮೇಲೆ ಉಗುಳಿದ್ದಾನೆ. ಪುಂಖಾನುಪುಂಖವಾಗಿ ಜಯರಾಮನ್‌ರನ್ನು ನಿಂದಿಸುತ್ತಲೇ ಹೋಗಿದ್ದಾನೆ. ಈ ಘಟನೆಯಿಂದ ಜಯರಾಮನ್‌ ಭಯಭೀತರಾಗಿದ್ದರಂತೆ. ಅಷ್ಟೇ ಅಲ್ಲ ಈ ರೀತಿ ವರ್ತಿಸಿರುವ ವ್ಯಕ್ತಿ ಕೂಡ ಭಾರತೀಯ ಮೂಲದವನೆಂದು ತಿಳಿದಾಗ ಇನ್ನಷ್ಟು ಬೇಸರವಾಯಿತು ಅಂತಾ ಜಯರಾಮನ್‌ ಹೇಳಿದ್ದಾರೆ.

ಜಯರಾಮನ್ ರೆಸ್ಟೋರೆಂಟ್‌ ಒಂದರಲ್ಲಿ ಕೆಲಸ ಮಾಡುತ್ತಾರೆ. ತೇಜಿಂದರ್‌ ಎಂಬಾತ ಈ ರೀತಿ ವರ್ತಿಸಲು ಆರಂಭಿಸುತ್ತಿದ್ದಂತೆ ಅವರಯ ಫ್ರೀಮಾಂಟ್ ಪೋಲೀಸರಿಗೆ ಕರೆ ಮಾಡಿದರು. ಆದರೂ ಸುಮ್ಮನಾಗದ ಆತ ಸುಮಾರು 8 ನಿಮಿಷಗಳ ಕಾಲ ಕೂಗಾಡುತ್ತಲೇ ಇದ್ದ. ಪೊಲೀಸರು ಬಂದ ಬಳಿಕ ಆತ ಸುಮ್ಮನಾಗಿದ್ದಾನೆ. ಘಟನೆಯ ಕುರಿತು ಫ್ರೀಮಾಂಟ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಘಟನೆಯನ್ನು ಅಮೆರಿಕದ ಪೊಲೀಸರು ಸಹ ಖಂಡಿಸಿದ್ದಾರೆ. ನಾವು ದ್ವೇಷದ ಘಟನೆಗಳು ಮತ್ತು ದ್ವೇಷದ ಅಪರಾಧಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಎಲ್ಲಾ ಸಮುದಾಯದ ಸದಸ್ಯರನ್ನು ಅವರ ಲಿಂಗ, ಜನಾಂಗ, ರಾಷ್ಟ್ರೀಯತೆ, ಧರ್ಮ ಮತ್ತು ಇತರ ವ್ಯತ್ಯಾಸಗಳನ್ನು ಲೆಕ್ಕಿಸದೆ ರಕ್ಷಿಸಲು ನಾವು ಇಲ್ಲಿದ್ದೇವೆ ಅಂತಾ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಹಿಂದೆ ಟೆಕ್ಸಾಸ್‌ನಲ್ಲಿ ನಾಲ್ವರು ಭಾರತೀಯ ಮಹಿಳೆಯರು ಜನಾಂಗೀಯ ನಿಂದನೆಗೆ ತುತ್ತಾಗಿದ್ದರು. ನೀವು ಅಮೆರಿಕಾ ಬಿಟ್ಟು ಹೊರಟು ಹೋಗಿ ಅಂತೆಲ್ಲ ಮಹಿಳೆಯೊಬ್ಬಳು ಕಿರುಚಾಡಿದ್ದಳು. ಆಕೆಯನ್ನು ಈಗಾಗ್ಲೇ ಬಂಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...