alex Certify ಅಡಿಲೇಡ್ ಅವಾಂತರಕ್ಕಿಂದು ವರ್ಷ: ಪಾತಾಳಕ್ಕಿಳಿದು ʼಫೀನಿಕ್ಸ್‌ʼನಂತೆ ಮೇಲೆದ್ದು ಬಂದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಡಿಲೇಡ್ ಅವಾಂತರಕ್ಕಿಂದು ವರ್ಷ: ಪಾತಾಳಕ್ಕಿಳಿದು ʼಫೀನಿಕ್ಸ್‌ʼನಂತೆ ಮೇಲೆದ್ದು ಬಂದ ಭಾರತ

ಕಳೆದ ವರ್ಷದ ಇದೇ ದಿನದಂದು ಆಸ್ಟ್ರೇಲಿಯಾ ವಿರುದ್ಧದ ಅಡಿಲೇಡ್‌ ಟೆಸ್ಟ್ ಪಂದ್ಯದ ಮೂರನೇ ಇನಿಂಗ್ಸ್‌ನಲ್ಲಿ ಭಾರತವು 36 ರನ್‌‌ಗಳಿಗೆ ಸರ್ವಪತನ ಕಂಡು ಭಾರೀ ಮುಖಭಂಗ ಅನುಭವಿಸಿದ ದಿನ ಇಂದು.

2020-21ರ ಆಸ್ಟ್ರೇಲಿಯಾ ಪ್ರವಾಸದ ವೇಳೆ ಅಡಿಲೇಡ್ ಟೆಸ್ಟ್‌ನಲ್ಲಿ 36 ರನ್‌ಗೆ ಟೀಂ ಇಂಡಿಯಾ ಆಲೌಟ್ ಆಗಿದ್ದು ತಂಡದ ಕೋಚ್‌ ಆಗಿ ತಾವು ಕಂಡ ಅತ್ಯಂತ ಕೆಟ್ಟ ಅನುಭವ ಎಂದಿದ್ದರು ಟೀಂ ಇಂಡಿಯಾದ ಅಂದಿನ ಕೋಚ್‌ ರವಿ ಶಾಸ್ತ್ರಿ.

ಪಂದ್ಯದ ಮೂರನೇ ದಿನದಂದು ನಾಟಕೀಯ ಕುಸಿತ ಕಂಡ ಟೀಂ ಇಂಡಿಯಾ, ಆಸೀಸ್ ವೇಗಿಗಳ ಎದುರು ನಿರುತ್ತರನಾಗಿ 36 ರನ್‌ಗೆ ಸರ್ವಪತನ ಕಂಡು, ಮೊದಲ ಇನಿಂಗ್ಸ್‌ನಲ್ಲಿ ಲೀಡ್ ಪಡೆದಿದ್ದರೂ ಸಹ ಹೀನಾಯವಾಗಿ ಆತಿಥೇಯರ ಎದುರು ಸೋಲುಂಡಿತ್ತು.

ಟೆಸ್ಟ್ ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಭಾರತದ ಅತ್ಯಂತ ಕಡಿಮೆ ಸ್ಕೋರ್‌ ಇದಾಗಿದೆ. ಇದಕ್ಕೂ ಮುನ್ನ 1974ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ 42ರನ್‌ಗೆ ಆಲೌಟ್ ಆಗಿದ್ದು ಅತ್ಯಂತ ಕಡಿಮೆ ಸ್ಕೋರ್‌ ಆಗಿತ್ತು.

ಬ್ರಿಟನ್ ನಲ್ಲಿ ತೀವ್ರವಾಗಿ ಹಬ್ಬುತ್ತಿರುವ ಓಮಿಕ್ರಾನ್ ಸೋಂಕು…! ಹೆಚ್ಚಿದ ಆತಂಕ

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ, ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 244ರನ್‌ಗೆ ಸರ್ವಪತನ ಕಂಡಿತು. ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ವೇಗಿ ಭಾರತದ ಬೌಲರ್‌ಗಳಾದ ಜಸ್ಪ್ರೀತ್‌ ಬುಮ್ರಾ, ರವಿಚಂದ್ರನ್ ಅಶ್ವಿನ್ ಹಾಗೂ ಉಮೇಶ್ ಯಾದವ್‌ ದಾಳಿಗೆ ಪರದಾಡಿ 191ರನ್‌ಗೆ ಕುಸಿಯಿತು.

53 ರನ್‌ ಮುನ್ನಡೆಯೊಂದಿಗೆ ಪಂದ್ಯದಲ್ಲಿ ತನ್ನ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಭಾರತ ಮೂರನೇ ದಿನದ ಅಂತ್ಯಕ್ಕೆ ಒಂದು ವಿಕೆಟ್ ಕಳೆದುಕೊಂಡು 9 ರನ್‌ ಗಳಿಸಿ 62ರನ್‌ ಮುನ್ನಡೆ ಸಾಧಿಸಿತ್ತು. ಆದರೆ ನಾಲ್ಕನೇ ದಿನದ ಬೆಳಿಗ್ಗೆ ಆಸೀಸ್ ವೇಗಿಗಳು ಅಕ್ಷರಶಃ ಬೆಂಕಿಯುಂಡೆಗಳನ್ನು ಎಸೆಯಲು ಆರಂಭಿಸಿ, ಹಾಕಿದ ಎಸೆತಗಳೆಲ್ಲಾ ಪರಿಪೂರ್ಣವಾದ ಲೈನ್ & ಲೆಂಗ್ತ್‌ ಕಂಡುಕೊಳ್ಳುವಂತೆ ಆಗಿಬಿಟ್ಟಿತ್ತು.

ಇಂಥ ಅದ್ಭುತ ಬೌಲಿಂಗ್‌ ಎದುರು ನಿರುತ್ತರರಾದ ಭಾರತೀಯ ಬ್ಯಾಟ್ಸ್‌ಮನ್‌ಗಳು ನೋಡ ನೋಡುತ್ತಲೇ 15 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದರು. ವಿಕೆಟ್ ಮೇಲೆ ವಿಕಟ್ ಸಿಗುತ್ತಲೇ ಇನ್ನಷ್ಟು ಹುಮ್ಮಸ್ಸು ಕಂಡುಕೊಂಡ ಆತಿಥೇಯ ಬೌಲರ್‌ಗಳು ಪ್ರವಾಸಿಗಳ ಇನ್ನುಳಿದ ಬ್ಯಾಟ್ಸ್‌ಮನ್‌ಗಳನ್ನು 36 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ಗೆ ಅಟ್ಟಿಬಿಟ್ಟಿದ್ದರು. ಆಸೀಸ್ ಪರ ಜೋಶ್ ಹೇಜ಼ಲ್‌ವುಡ್ (5/8) ಮತ್ತು ಕಮಿನ್ಸ್ (4/21) ಬೌಲಿಂಗ್‌ನಲ್ಲಿ ಮಿಂಚಿದ್ದರು.

ಗೆಲ್ಲಲು ಬರೀ 90ರನ್‌ ಗುರಿ ಪಡೆದ ಆತಿಥೇಯರು ಎರಡು ವಿಕೆಟ್ ಕಳೆದುಕೊಂಡು ಯಾವುದೇ ಪರದಾಟವಿಲ್ಲದೇ ಗೆಲುವಿನ ತೀರ ಸೇರಿದರು. ಸರಣಿಯಲ್ಲಿ 1-0 ಮುನ್ನಡೆ ಪಡೆದ ಆಸ್ಟ್ರೇಲಿಯಾ ಭಾರೀ ಉತ್ಸಾಹದೊಂದಿಗೆ ಮೆಲ್ಬರ್ನ್ ಅಂಗಳಕ್ಕೆ ಕಾಲಿಟ್ಟಿದ್ದರು.

ಭಾರತದ ಈ ಹೀನಾಯ ಸೋಲಿಗೆ ಆಸೀಸ್ ಮಾಧ್ಯಮಗಳು ಹಾಗೂ ಮಾಜಿ ಆಟಗಾರರು ಭಾರೀ ಲೇವಡಿ ಮಾಡುವ ಮೂಲಕ ಟೀಂ ಇಂಡಿಯಾ ಆಟಗಾರರ ಮನಸ್ಸಿಗೆ ಆಗಿದ್ದ ಗಾಯದ ಮೇಲೆ ಉಪ್ಪು ಸವರಿದ್ದರು. ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್ ಅಂತೂ ಆತಿಥೇಯರು ಸರಣಿಯನ್ನು 4-0 ಅಂತರದಲ್ಲಿ ಗೆಲ್ಲಲಿದ್ದಾರೆ ಎಂದುಬಿಟ್ಟಿದ್ದರು.

ಇಷ್ಟೆಲ್ಲದರ ನಡುವೆಯೂ ಅದ್ಭುತವಾಗಿ ತಂಡವನ್ನು ಸಂಘಟಿಸಿದ ನಾಯಕ ಅಜಿಂಕ್ಯಾ ರಹಾನೆ, ಮುಂದಿನ ಮೂರೂ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋಲದಂತೆ ನೋಡಿಕೊಂಡರು. ಮೆಲ್ಬರ್ನ್ ಮತ್ತು ಬ್ರಿಸ್ಬೇನ್ ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಸಿಡ್ನಿ ಪಂದ್ಯವನ್ನು ಡ್ರಾ ಮಾಡಿಕೊಂಡ ಭಾರತ, 2-1ರ ಅಂತರದಲ್ಲಿ ಆಸೀಸ್ ನೆಲದಲ್ಲಿ ಸತತ ಎರಡನೇ ಬಾರಿಗೆ ಟೆಸ್ಟ್ ಸರಣಿ ಗೆದ್ದು ಬೀಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...