ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಅವಧಿ ಮುಕ್ತಾಯವಾಗಲು ಇನ್ನೂ 11 ದಿನಗಳು ಬಾಕಿ ಉಳಿದಿದೆ. ಈ ನಡುವೆ ಉತ್ತರ ಪ್ರದೇಶ ಕ್ರೀಡಾ ಸಚಿವ ಉಪೇಂದ್ರ ತಿವಾರಿ ಶುಕ್ರವಾರದಂದು ಬಲ್ಲಿಯಾ ಕಲೆಕ್ಟರೇಟ್ನಲ್ಲಿರುವ ಚುನಾವಣಾಧಿಕಾರಿ ಕಚೇರಿಯತ್ತ ನಾಮಪತ್ರ ಸಲ್ಲಿಸಲು ಧಾವಿಸುತ್ತಿದ್ದ ದೃಶ್ಯವು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.
ಉಪೇಂದ್ರ ತಿವಾರಿಯವರನ್ನು ಬಿಜೆಪಿಯು ಫೆಫ್ನಾ ವಿಧಾನಸಭಾ ಕ್ಷೇತ್ರಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವಿಡಿಯೋದಲ್ಲಿ ಕೇಸರಿ ಪೇಟ ಹಾಗೂ ಹಾರವನ್ನು ಧರಿಸಿದ್ದ ಉಪೇಂದ್ರ ತಿವಾರಿಯು ಬಲ್ಲಿಯಾ ಕಲೆಕ್ಟರೇಟ್ ಕಚೇರಿಯ ಮುಖ್ಯದ್ವಾರದಿಂದ ನಾಮಪತ್ರ ಸಲ್ಲಿಸುವ ವಿಭಾಗಕ್ಕೆ ಧಾವಿಸುತ್ತಿರುವುದನ್ನು ಕಾಣಬಹುದಾಗಿದೆ.
ನಾಮಪತ್ರ ಸಲ್ಲಿಕೆ ಮಾಡಲು ಫೆಬ್ರವರಿ 11ರವರೆಗೆ ಅವಕಾಶ ಇದ್ದರೂ ಸಹ ಉಪೇಂದ್ರ ತಿವಾರಿಯು ಶುಕ್ರವಾರ ಮಧ್ಯಾಹ್ನ ಮೂರು ಗಂಟೆ ಒಳಗಾಗಿ ನಾಮಪತ್ರ ಸಲ್ಲಿಸಲು ಬಯಸಿದ್ದರು ಎನ್ನಲಾಗಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದೆ.