VAHAN 4.0 ವ್ಯವಸ್ಥೆಯ ಬ್ಯಾಕ್ ಎಂಡ್ ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ, ತಾಂತ್ರಿಕ ದೋಷನಿವಾರಣಾ ಕಾರ್ಯಕ್ಕಾಗಿ ಆನ್ಲೈನ್ ವಾಹನ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.
ದಿನಾಂಕ: 15.05.2026 ರಿಂದ 18.05.2026 ರವರೆಗಿನ ಅವಧಿಯಲ್ಲಿ ವಾಹನ ಸಂಬಂಧಿತ ಆನ್ಲೈನ್ ಸೇವೆಗಳು ಲಭ್ಯವಿರುವುದಿಲ್ಲ ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಸಾರ್ವಜನಿಕರು ಸಹಕರಿಸುವಂತೆ ವಿನಂತಿ
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸೇರಿ ಸಾರಿಗೆ ಇಲಾಖೆಯಲ್ಲಿ ಬಳಸಲಾಗುತ್ತಿರುವ ವಾಹನ-04 ತಂತ್ರಾಂಶವು ತಾಂತ್ರಿಕ ನಿರ್ವಹಣೆಯಲ್ಲಿರುವ ಹಿನ್ನೆಲೆ ಕಚೇರಿಯ ವಿವಿಧ ಸೇವೆಗಳಲ್ಲಿ ತಾತ್ಕಾಲಿಕ ವಿಳಂಬ ಉಂಟಾಗುತ್ತಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ತಂತ್ರಾಂಶ ನಿರ್ವಹಣೆ ಕಾರ್ಯ ನಡೆಯುತ್ತಿರುವುದರಿಂದ ಮಾಲೀಕತ್ವ ವರ್ಗಾವಣೆ, ಕಂತು ಕರಾರು ನಮೂದು ಹಾಗೂ ರದ್ದತಿ, ತಿರುವಳಿ ಪತ್ರ ನೀಡಿಕೆ, ಹೊಸ ವಾಹನ ನೊಂದಣಿ, ರಹದಾರಿ ಸೇರಿದಂತೆ ಇತರ ವಾಹನ ಸಂಬಂಧಿತ ಸೇವೆಗಳ ಕಾರ್ಯನಿರ್ವಹಣೆಯಲ್ಲಿ ವಿಳಂಬವಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ವಾಹನ ಮಾಲೀಕರು ಅನಗತ್ಯ ಗೊಂದಲಕ್ಕೆ ಒಳಗಾಗದೇ ಕಚೇರಿಯೊಂದಿಗೆ ಸಹಕಾರ ನೀಡುವಂತೆ ಈ ಮೂಲಕ ಕೋರಲಾಗಿದೆ.
ತಂತ್ರಾಂಶದ ನಿರ್ವಹಣೆ ಪೂರ್ಣಗೊಂಡ ಬಳಿಕ ಸೇವೆಗಳು ಎಂದಿನಂತೆ ಸುಗಮವಾಗಿ ಆರಂಭವಾಗಲಿವೆ ಎಂದು ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

