ನವದೆಹಲಿ: NVS-03 ಉಪಗ್ರಹವನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರದಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಅನ್ನು ಅಭಿನಂದಿಸಿದ್ದು, ಬಾಹ್ಯಾಕಾಶ ವಿಜ್ಞಾನಿಗಳು ದೇಶಕ್ಕೆ ನಿರಂತರವಾಗಿ ಹೆಮ್ಮೆ ತರುತ್ತಿದ್ದಾರೆ ಎಂದು ಅವರು ಬಣ್ಣಿಸಿದ್ದಾರೆ.
ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ‘X’ (ಹಿಂದಿನ ಟ್ವಿಟರ್) ನಲ್ಲಿ ಶನಿವಾರ ಮುಂಜಾನೆ ಪೋಸ್ಟ್ ಮಾಡಿರುವ ಪ್ರಧಾನಿ, ಈ ಸಾಧನೆಯನ್ನು ಭಾರತದ ಸ್ವದೇಶಿ ಉಪಗ್ರಹ ನ್ಯಾವಿಗೇಷನ್ ವ್ಯವಸ್ಥೆಯಾದ ‘NavIC'(ನಾವಿಕ್) ಅನ್ನು ಬಲಪಡಿಸುವಲ್ಲಿನ ‘ಪ್ರಮುಖ ಹೆಜ್ಜೆ’ ಎಂದು ಕರೆದರು. ಜೊತೆಗೆ, ದೇಶವನ್ನು ‘ಆತ್ಮನಿರ್ಭರ'(ಸ್ವಾವಲಂಬಿ) ಮಾಡುವ ತಮ್ಮ ಸಂಕಲ್ಪವನ್ನೂ ಪುನರುಚ್ಚರಿಸಿದರು.
“NVS-03 ಉಪಗ್ರಹವನ್ನು ಹೊತ್ತ GSLV-F18 ನ ಯಶಸ್ವಿ ಉಡಾವಣೆಗಾಗಿ ಇಸ್ರೋದ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳಿಗೆ ಅಭಿನಂದನೆಗಳು,” ಎಂದು ಪ್ರಧಾನಿ ಮೋದಿ ಹೇಳಿದರು. “ಸುಧಾರಿತ ಸಾಮರ್ಥ್ಯಗಳನ್ನು ಹೊಂದಿರುವ NVS-03, ನಿರ್ಣಾಯಕ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆ ಸಾಧಿಸುವ ನಮ್ಮ ಪ್ರಯತ್ನಕ್ಕೆ ಉತ್ತೇಜನ ನೀಡುತ್ತದೆ ಮತ್ತು ನಮ್ಮ ಜನರಿಗೆ ಪ್ರಯೋಜನಕಾರಿಯಾಗುವ ನ್ಯಾವಿಗೇಷನ್ ಸೇವೆಗಳನ್ನು ಬೆಂಬಲಿಸುತ್ತದೆ. ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಸಮರ್ಪಣಾ ಭಾವ ಮತ್ತು ಸೃಜನಶೀಲತೆಯು ನಮ್ಮ ರಾಷ್ಟ್ರಕ್ಕೆ ನಿರಂತರವಾಗಿ ಹೆಮ್ಮೆ ತರುತ್ತಿದೆ” ಎಂದು ಅವರು ಹೇಳಿದ್ದಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಸಚಿವಾಲಯದ ಕೇಂದ್ರ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಕೂಡ ಇಸ್ರೋಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಯಶಸ್ಸಿಗೆ ಕಾರಣವಾದ ಸುಧಾರಣೆಗಳನ್ನು ಜಾರಿಗೆ ತಂದಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಅವರು, ಈ ಯಶಸ್ಸು ವಿಕ್ರಮ್ ಸಾರಾಭಾಯಿ ಮತ್ತು ಸತೀಶ್ ಧವನ್ ಅವರ ಕನಸನ್ನು ಸಾಕಾರಗೊಳಿಸಿದೆ ಎಂದು ಹೇಳಿದ್ದಾರೆ.
“GSLV-F18/NVS-03 ಮಿಷನ್‌ನ ಯಶಸ್ವಿ ಉಡಾವಣೆಗಾಗಿ #ISRO ತಂಡಕ್ಕೆ ಅಭಿನಂದನೆಗಳು! ಈ ಗಮನಾರ್ಹ ಸಾಧನೆಯು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯವನ್ನು ಮತ್ತು ಸ್ವದೇಶಿ ನ್ಯಾವಿಗೇಷನ್ ವ್ಯವಸ್ಥೆಯನ್ನು ಬಲಪಡಿಸುವ ನಮ್ಮ ದೃಢ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ,” ಎಂದು ಅವರು ‘X’ ನಲ್ಲಿ ಬರೆದಿದ್ದಾರೆ.
ಏತನ್ಮಧ್ಯೆ, NVS-03 ಉಪಗ್ರಹವು ನಿಗದಿತ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿರುವುದರಿಂದ, ‘NavIC’ ವ್ಯವಸ್ಥೆಯು ಕನಿಷ್ಠ ಕಾರ್ಯಾಚರಣಾ ಅಗತ್ಯವಾದ ನಾಲ್ಕು ಉಪಗ್ರಹಗಳ ಸ್ಥಿತಿಗೆ ಮರಳಿದೆ. ಇಸ್ರೋ ಮುಖ್ಯಸ್ಥ ವಿ. ನಾರಾಯಣನ್ ಅವರು, ‘ಒಂದು ರಾಷ್ಟ್ರ, ಒಂದು ಸಮಯ’ (one nation, one time) ಯೋಜನೆಯಲ್ಲಿ ‘NavIC’ ಒಂದು ಪ್ರಮುಖ ಭಾಗವಾಗಿದೆ ಎಂದು ವಿವರಿಸಿದ್ದಾರೆ.
NVS-01 ಸೇರಿದಂತೆ ಮೂರು ಉಪಗ್ರಹಗಳು ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗ NVS-03 ಸೇರ್ಪಡೆಯೊಂದಿಗೆ ‘ಸ್ಥಾನ, ನ್ಯಾವಿಗೇಷನ್ ಮತ್ತು ಸಮಯ’ (Position, Navigation and Timing – PNT) ಸೇವೆಗಳು ಪುನಃಸ್ಥಾಪನೆಗೊಂಡಿವೆ ಎಂದು ಅವರು ತಿಳಿಸಿದರು.
“NavIC (Navigation with Indian Constellation) ವ್ಯವಸ್ಥೆಯು ಒಂದು ಪ್ರಮುಖ ರಾಷ್ಟ್ರೀಯ ಆಸ್ತಿಯಾಗಿದೆ. ಇದು ಸ್ಥಾನ(Position), ಸಂಚರಣೆ(Navigation) ಮತ್ತು ಸಮಯ(Timing) ಸೇವೆಗಳಿಗೆ ಸ್ವತಂತ್ರ ಪ್ರವೇಶವನ್ನು ಒದಗಿಸುತ್ತದೆ. ಅಲ್ಲದೆ, ರೈಲುಗಳು, ವಾಹನಗಳು ಮತ್ತು ಹಡಗುಗಳಂತಹ ಸಾರಿಗೆ ಸಾಧನಗಳನ್ನು ನೈಜ ಸಮಯದಲ್ಲಿ(real-time) ಪತ್ತೆಹಚ್ಚುವಂತಹ ನಾಗರಿಕ ಉದ್ದೇಶಗಳಿಗೂ ಇದನ್ನು ಬಳಸಲಾಗುತ್ತದೆ,” ಎಂದು ಅವರು ತಂಡವನ್ನು ಅಭಿನಂದಿಸುವಾಗ ಹೇಳಿದ್ದಾರೆ.
“ಸತತ GSLV ಉಡಾವಣೆಗಳ ನಡುವೆ ಕೇವಲ 56 ದಿನಗಳ ಅಲ್ಪಾವಧಿಯಲ್ಲಿಯೇ NVS-03 ಉಪಗ್ರಹ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ,” ಎಂದು ಈ ಕಾರ್ಯಾಚರಣೆಯ ಯಶಸ್ಸಿನ ನಂತರ ಮಾತನಾಡುತ್ತಾ ಅವರು ತಿಳಿಸಿದ್ದಾರೆ.

