HomeKarnatakaತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ: ಬೆಳಗಾವಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಗಳನ್ನು ತಡೆದು...

ತೀವ್ರಗೊಂಡ ಕಬ್ಬು ಬೆಳೆಗಾರರ ಪ್ರತಿಭಟನೆ: ಬೆಳಗಾವಿ ಬಸ್ ನಿಲ್ದಾಣದಲ್ಲಿ ಸಾರಿಗೆ ಬಸ್ ಗಳನ್ನು ತಡೆದು ಆಕ್ರೋಶ: ರಸ್ತೆಯಲ್ಲಿಯೇ ಧರಣಿ

ಬೆಳಗಾವಿ: ರಾಜ್ಯದಲ್ಲಿ ಕಬ್ಬು ಬೆಳೆಗಾರರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಇಂದು ಏಳನೇ ದಿನಕ್ಕೆ ಕಾಲಿಟ್ಟಿದೆ. ಕಬ್ಬು ಬೆಳೆಗಾರರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರ ತಾಳ್ಮೆ ಕಟ್ಟೆಯೊಡೆದಿದ್ದು, ಬಸ್ ಗಳನ್ನು ತದೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸಬೇಕೆಂದು ಆಗ್ರಹಿಸಿ ಕಬ್ಬುಬೆಳೆಗಾರರು ಇಂದು ಬಂದ್ ಗೆ ಕರೆ ನೀಡಿದ್ದು, ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ರೈತರ ಹೋರಾಟಕ್ಕೆ ಹಲವು ಸಂಘಟನೆಗಳು, ಮಠಾಧೀಶರು ಬೆಂಬಲ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂದ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಬೆಳಗಾವಿ ನಗರದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ನಗರದ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ ರೈತ ಮುಖಂಡರು ಹಾಗೂ ಪ್ರತಿಭಟನಾಕಾರರು ಬಸ್ ಸಂಚಾರವನ್ನು ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣದಿಂದ ಹೊರಡಲು ಸಿದ್ಧವಾಗಿದ್ದ ಬಸ್‌ಗಳನ್ನು ತಡೆದಿದ್ದಾರೆ. ಬಸ್‌ಗಳ ಮುಂದೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಕಬ್ಬು ಬೆಳೆಗೆ ಸೂಕ್ತ ಬೆಲೆ ನಿಗದಿ ಮಾಡದಿದ್ದರೆ ಹೋರಾಅಟ ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದ್ದಾರೆ.

ಕಬ್ಬು ಬೆಳೆಗಾರರು ಹಗಲಿರುಳು ಶ್ರಮಪಟ್ಟು ಬೆಳೆ ಬೆಳೆದರೂ ಸೂಕ್ತ ಬೆಲೆ ದೊರೆಯುತ್ತಿಲ್ಲ. ಉತ್ಪಾದನಾ ವೆಚ್ಚ, ಕಾರ್ಮಿಕರ ಕೂಲಿ, ಗೊಬ್ಬರ, ಸಾಗಣೆ ವೆಚ್ಚ ಸೇರಿದಂತೆ ಕೃಷಿ ವೆಚ್ಚಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಆದರೆ ರೈತರಿಗೆ ದೊರೆಯುವ ಕಬ್ಬಿನ ಬೆಲೆ ಮಾತ್ರ ಸಮರ್ಪಕವಾಗಿಲ್ಲ ಎಂಬುದು ರೈತರ ಪ್ರಮುಖ ಆಕ್ಷೇಪವಾಗಿದೆ.

ಪ್ರತಿ ಟನ್ ಕಬ್ಬಿಗೆ ₹5,500 ದರ ನಿಗದಿಪಡಿಸುವುದರ ಜೊತೆಗೆ ರೈತರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು. ನ್ಯಾಯಯುತ ಬೆಲೆ ಘೋಷಣೆಯಾಗುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಬಸ್ ನಿಲ್ದಾಣದಲ್ಲಿ ರೈತರು ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಬಸ್ ಸಂಚಾರಕ್ಕೆ ಅಡ್ಡಿಯುಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಬಸ್‌ಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಪ್ರಯಾಣಿಕರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪರಿಸ್ಥಿತಿಯನ್ನು ಪೊಲೀಸರು ಗಮನಿಸುತ್ತಿದ್ದಾರೆ.

ಇನ್ನೊಂದೆಡೆ ಜಿಲ್ಲೆಯ ಅಥಣಿ ಪಟ್ಟಣದ ಅಂಬೇಡ್ಕರ್ ವೃತ್ತ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿಯೂ ರೈತರ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಕಬ್ಬಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ರೈತರು ನಡೆಸುತ್ತಿರುವ ಹೋರಾಟ ಇದೀಗ ಬಂದ್ ಸ್ವರೂಪ ಪಡೆದುಕೊಂಡಿದೆ. ರೈತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ರೈತರ ಹೋರಾಟ ಇನ್ನಷ್ಟು ಗಂಭೀರ ಸ್ವರೂಪ ಪಡೆಯುವ ಸಾಧ್ಯತೆ ಇದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular