HomeLatest Newsಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಅರ್ಷದೀಪ್ ಸಿಂಗ್: 150 ವಿಕೆಟ್ ಪಡೆದ ಭಾರತದ ಮೊದಲ ಬೌಲರ್!

ಟಿ20 ಕ್ರಿಕೆಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಅರ್ಷದೀಪ್ ಸಿಂಗ್: 150 ವಿಕೆಟ್ ಪಡೆದ ಭಾರತದ ಮೊದಲ ಬೌಲರ್!

ಭಾರತ ಕ್ರಿಕೆಟ್ ತಂಡದ ಯುವ ಹಾಗೂ ಪ್ರತಿಭಾವಂತ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಆಕ್ಲೆಂಡ್‌ನ ಈಡನ್ ಪಾರ್ಕ್ ಮೈದಾನದಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ಕಿವೀಸ್ ನಾಯಕ ಮಿಚೆಲ್ ಸ್ಯಾಂಟನರ್ ಅವರ ವಿಕೆಟ್ ಕಬಳಿಸುವ ಮೂಲಕ, ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್‌ಗಳನ್ನು ಪೂರ್ಣಗೊಳಿಸಿದ ಭಾರತದ ಮೊಟ್ಟಮೊದಲ ಬೌಲರ್ ಎಂಬ ಮಹತ್ವದ ಹೆಗ್ಗಳಿಗೆ ಪಾತ್ರರಾಗಿದ್ದಾರೆ.

ಪಂದ್ಯದ 19ನೇ ಓವರ್ ಅಂದರೆ ಇನಿಂಗ್ಸ್‌ನ ನಿರ್ಣಾಯಕ ಹಂತದಲ್ಲಿ ಬೌಲಿಂಗ್ ಮಾಡಲು ಬಂದ ಅರ್ಷದೀಪ್ ಸಿಂಗ್, ತಮ್ಮ ತೀಕ್ಷ್ಣವಾದ ದಾಳಿಯಿಂದ ಎದುರಾಳಿ ಬ್ಯಾಟರ್‌ಗಳಿಗೆ ಕಡಿವಾಣ ಹಾಕಿದರು. ತಮ್ಮ ಸ್ಪೆಲ್‌ನ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟನರ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಐತಿಹಾಸಿಕ 150ನೇ ವಿಕೆಟ್ ಪಡೆದರು. ಸ್ಯಾಂಟನರ್ ಬಾರಿಸಿದ ಚೆಂಡನ್ನು ಬೌಂಡರಿ ಬಳಿ ನಿತೀಶ್ ರೆಡ್ಡಿ ಅದ್ಭುತವಾಗಿ ಕ್ಯಾಚ್ ಹಿಡಿಯುವ ಮೂಲಕ ಅರ್ಷದೀಪ್ ಈ ಮೈಲಿಗಲ್ಲು ತಲುಪಲು ಕಾರಣರಾದರು. ಈ ಮೂಲಕ ಅಂತರರಾಷ್ಟ್ರೀಯ ಟಿ20 ಅಂಗಳದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಭಾರತದ ನಂಬರ್ ವನ್ ಬೌಲರ್ ಎಂಬ ಕೀರ್ತಿಗೆ ಅರ್ಷದೀಪ್ ಪಾತ್ರರಾಗಿದ್ದಾರೆ.

ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್ ಬಹಳ ಹಿಂದಿನಿಂದಲೂ ಅಗ್ರಸ್ಥಾನದಲ್ಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಇದ್ದು, ಅವರು 100 ಪಂದ್ಯಗಳಲ್ಲಿ 126 ವಿಕೆಟ್‌ಗಳನ್ನು ಪಡೆದಿದ್ದಾರೆ. ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಈ ಸರಣಿಯಿಂದ ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಕಿರಿಯ ವಯಸ್ಸಿನಲ್ಲೇ ಭಾರತೀಯ ಬೌಲಿಂಗ್ ದಾಳಿಯ ಮುಂಚೂಣಿಯಾಗಿ ನಿಂತು ಅರ್ಷದೀಪ್ ಸಿಂಗ್ ಮಾಡುತ್ತಿರುವ ನಿರಂತರ ಸಾಧನೆಗೆ ಕ್ರಿಕೆಟ್ ಲೋಕದಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular