ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮೂರು ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಮೇ 20ರಂದು ತುಮಕೂರಿನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾವೇಶವನ್ನು ಸಾರಿಗೆ ನೌಕರರ ಮುಷ್ಕರದ ಕಾರಣ ಮೇ 19ಕ್ಕೆ ಹಿಂದೂಡಲಾಗಿದೆ.
ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕುರಿತು ಮಾಹಿತಿ ನೀಡಿದ್ದು, ಮೇ 20ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರಕ್ಕೆ ಮೂರು ವರ್ಷಗಳ ತುಂಬಲಿದೆ. ಇದರ ಅಂಗವಾಗಿ ತುಮಕೂರಿನಲ್ಲಿ ರಾಜ್ಯದ ಜನತೆಗೆ ಆಗಿರುವ ಪ್ರಯೋಜನಗಳ ಸೌಲಭ್ಯ ವಿತರಣೆ ಕಾರ್ಯಕ್ರಮವಾಗಿ ಸಾರ್ಥಕ ಸೇವೆಗಳ ಸಮರ್ಪಣೆ ಕಾರ್ಯಕ್ರಮದ ಆಯೋಜಿಸಲಾಗಿತ್ತು. ಕಾರಣಾಂತರದಿಂದ ಒಂದು ದಿನ ಮೊದಲು ಮೇ 19 ಅಧಿಕೃತವಾಗಿ ಕಾರ್ಯಕ್ರಮ ನಿಗದಿಯಾಗಿದೆ ಎಂದು ತಿಳಿಸಿದ್ದಾರೆ.
ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಸರ್ಕಾರ ಚಾಲನೆ ನೀಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಮೇ 20 ರಂದು ಸಾಧನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಾರಿಗೆ ಸಂಸ್ಥೆ ನೌಕರರು ಅದೇ ದಿನ ಅನಿರ್ದಿಷ್ಟ ಮುಷ್ಕರ ಆರಂಭಿಸುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತೊಂದರೆ ಆಗದಂತೆ ಒಂದು ದಿನ ಮೊದಲೇ ಮೇ 19ರಂದು ಸಮಾವೇಶ ನಡೆಸಲು ಸಿಎಂ ಸೂಚಿಸಿದ ಹಿನ್ನೆಲೆಯಲ್ಲಿ ದಿನಾಂಕ ಬದಲಾವಣೆ ಮಾಡಲಾಗಿದೆ. ಉಳಿದಂತೆ ಕಾರ್ಯಕ್ರಮಗಳು ಪೂರ್ವ ಯೋಜಿತವಾಗಿ ನಡೆಯಲಿವೆ ಎಂದು ಹೇಳಿದ್ದಾರೆ.

