ಪ್ರಯಾಣದ ವೇಳೆ ನೆಚ್ಚಿನ ಯೂಟ್ಯೂಬ್ ವಿಡಿಯೋ ನೋಡಬೇಕೆಂದರೂ ನೆಟ್‌ವರ್ಕ್ ಕೈಕೊಟ್ಟರೆ ಏನು ಮಾಡುವುದು? ರೈಲು, ವಿಮಾನ ಅಥವಾ ಇಂಟರ್‌ನೆಟ್ ಸೌಲಭ್ಯವಿಲ್ಲದ ಪ್ರದೇಶಗಳಲ್ಲಿ ಇಂತಹ ಸಮಸ್ಯೆ ಸಾಮಾನ್ಯ. ಅದರಲ್ಲೂ ಡೇಟಾ ಖಾಲಿಯಾದಾಗ ಅಥವಾ ನೆಟ್‌ವರ್ಕ್ ಸಿಗದಿದ್ದಾಗ ನೆಚ್ಚಿನ ವಿಡಿಯೋ ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಆದರೆ ಇನ್ಮುಂದೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನೀವು ಬಯಸುವ ಯೂಟ್ಯೂಬ್ ವಿಡಿಯೋಗಳನ್ನು ಮೊದಲೇ ಡೌನ್‌ಲೋಡ್ ಮಾಡಿಕೊಂಡಿಟ್ಟುಕೊಂಡರೆ ಇಂಟರ್‌ನೆಟ್ ಇಲ್ಲದಿದ್ದರೂ ಆರಾಮವಾಗಿ ವೀಕ್ಷಿಸಬಹುದು. ಇದಕ್ಕಾಗಿ ಹಣ ಖರ್ಚು ಮಾಡಬೇಕೆಂದಿಲ್ಲ. ಉಚಿತವಾಗಿಯೇ ವಿಡಿಯೋ ಡೌನ್‌ಲೋಡ್ ಮಾಡಿಕೊಳ್ಳುವ ಸುಲಭ ವಿಧಾನವೂ ಇದೆ!
ಇಂದಿನ ದಿನಗಳಲ್ಲಿ ಯೂಟ್ಯೂಬ್ ಕೇವಲ ಮನರಂಜನೆಯ ವೇದಿಕೆಯಾಗಿ ಉಳಿದಿಲ್ಲ. ವಿದ್ಯಾರ್ಥಿಗಳಿಗೆ ಪಾಠ, ಉದ್ಯೋಗಾಕಾಂಕ್ಷಿಗಳಿಗೆ ತರಬೇತಿ, ಅಡುಗೆ ಕಲಿಯುವವರಿಗೆ ರೆಸಿಪಿ, ತಂತ್ರಜ್ಞಾನ ಆಸಕ್ತರಿಗೆ ಮಾಹಿತಿ ಹೀಗೆ ಪ್ರತಿಯೊಂದಕ್ಕೂ ಯೂಟ್ಯೂಬ್ ವಿಡಿಯೋಗಳು ನೆರವಾಗುತ್ತವೆ. ಆದರೆ ಎಲ್ಲ ಸಮಯದಲ್ಲೂ ಇಂಟರ್‌ನೆಟ್ ಸೌಲಭ್ಯ ಇರುವುದಿಲ್ಲ. ಹೀಗಾಗಿ ಅಗತ್ಯವಿರುವ ವಿಡಿಯೋಗಳನ್ನು ಮೊದಲೇ ಡೌನ್‌ಲೋಡ್ ಮಾಡಿಕೊಂಡಿಟ್ಟುಕೊಳ್ಳುವುದು ಅನುಕೂಲಕರ.
ಇದಕ್ಕಾಗಿ ಎರಡು ವಿಧಾನಗಳಿವೆ. ಒಂದು ಉಚಿತ ClipGrab ಸಾಫ್ಟ್‌ವೇರ್ ಬಳಕೆ. ಮತ್ತೊಂದು ಯೂಟ್ಯೂಬ್‌ನ ಅಧಿಕೃತ YouTube Premium ಸೇವೆ. ಈ ಎರಡೂ ವಿಧಾನಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಿ.
ಮೊದಲ ವಿಧಾನ: ಯಾವುದೇ ಹಣ ಖರ್ಚಿಲ್ಲದೆ ವಿಡಿಯೋ ಡೌನ್‌ಲೋಡ್!
ನೀವು ಕಂಪ್ಯೂಟರ್ ಬಳಸುತ್ತಿದ್ದರೆ ClipGrab ಎಂಬ ಉಚಿತ ಸಾಫ್ಟ್‌ವೇರ್ ಮೂಲಕ ಯೂಟ್ಯೂಬ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರ ವಿಶೇಷತೆ ಏನೆಂದರೆ, ಡೌನ್‌ಲೋಡ್ ಮಾಡಿದ ವಿಡಿಯೋಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಪ್ರತ್ಯೇಕ ಫೈಲ್‌ಗಳಾಗಿ ಉಳಿಸಬಹುದು.
ಹೇಗೆ ಡೌನ್‌ಲೋಡ್ ಮಾಡುವುದು?
-
ಮೊದಲು ನಿಮ್ಮ ಕಂಪ್ಯೂಟರ್‌ನಲ್ಲಿ ClipGrab.org ಅಧಿಕೃತ ವೆಬ್‌ಸೈಟ್ ತೆರೆಯಿರಿ.
-
Windows, Mac ಅಥವಾ Linuxಗೆ ಹೊಂದುವ ಸಾಫ್ಟ್‌ವೇರ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ.
-
ಈಗ ಯೂಟ್ಯೂಬ್ ತೆರೆಯಿರಿ. ನಿಮಗೆ ಬೇಕಾದ ವಿಡಿಯೋ ಲಿಂಕ್ ಕಾಪಿ ಮಾಡಿಕೊಳ್ಳಿ.
-
ClipGrab ಸಾಫ್ಟ್‌ವೇರ್ ತೆರೆದು Downloads ವಿಭಾಗಕ್ಕೆ ಹೋಗಿ.
-
ಕಾಪಿ ಮಾಡಿದ ವಿಡಿಯೋ ಲಿಂಕ್ ಅನ್ನು ಅಲ್ಲಿ ಪೇಸ್ಟ್ ಮಾಡಿ.
-
ವಿಡಿಯೋದ ಗುಣಮಟ್ಟವನ್ನು ಆಯ್ಕೆ ಮಾಡಿ. 720p, 1080p ಅಥವಾ ಲಭ್ಯವಿದ್ದರೆ 4K ಆಯ್ಕೆ ಮಾಡಬಹುದು.
-
ಕೊನೆಯದಾಗಿ ‘Grab this clip!’ ಬಟನ್ ಒತ್ತಿದರೆ ಡೌನ್‌ಲೋಡ್ ಪ್ರಕ್ರಿಯೆ ಆರಂಭವಾಗುತ್ತದೆ.
ಡೌನ್‌ಲೋಡ್ ಪೂರ್ಣಗೊಂಡ ಬಳಿಕ ವಿಡಿಯೋ ನಿಮ್ಮ ಕಂಪ್ಯೂಟರ್‌ನಲ್ಲಿ ಉಳಿಯುತ್ತದೆ. ಬೇಕಾದಾಗ ಇಂಟರ್‌ನೆಟ್ ಇಲ್ಲದೆಯೂ ವೀಕ್ಷಿಸಬಹುದು.
ಎರಡನೇ ವಿಧಾನ: YouTube Premium ಮೂಲಕ ಡೌನ್‌ಲೋಡ್
ನೀವು ಹೆಚ್ಚಾಗಿ ಯೂಟ್ಯೂಬ್ ಬಳಸುತ್ತಿದ್ದರೆ YouTube Premium ಕೂಡ ಉತ್ತಮ ಆಯ್ಕೆಯಾಗಬಹುದು. ಇದು ಗೂಗಲ್ ಒದಗಿಸುವ ಅಧಿಕೃತ ಪಾವತಿಸಿದ ಸೇವೆಯಾಗಿದೆ.
ಇದರ ಮೂಲಕ ಜಾಹೀರಾತುಗಳ ಕಿರಿಕಿರಿ ಇಲ್ಲದೆ ವಿಡಿಯೋ ನೋಡಬಹುದು. ಮೊಬೈಲ್‌ನಲ್ಲಿ ಇತರ ಆ್ಯಪ್‌ಗಳನ್ನು ಬಳಸುವಾಗಲೂ ವಿಡಿಯೋ ಹಿನ್ನೆಲೆಯಲ್ಲೇ ಪ್ಲೇ ಆಗುವ ಸೌಲಭ್ಯವಿದೆ. ಜೊತೆಗೆ YouTube Music Premium ಮತ್ತು ಆಫ್‌ಲೈನ್ ವೀಕ್ಷಣೆಯ ಸೌಲಭ್ಯವೂ ಸಿಗುತ್ತದೆ.
ವಿಡಿಯೋ ಡೌನ್‌ಲೋಡ್ ಮಾಡುವ ವಿಧಾನ:
-
ಮೊದಲು YouTube Premium ಖಾತೆಗೆ ಲಾಗಿನ್ ಆಗಿ.
-
ನಿಮಗೆ ಬೇಕಾದ ವಿಡಿಯೋ ತೆರೆಯಿರಿ.
-
ವಿಡಿಯೋದ ಕೆಳಗಿರುವ Download ಬಟನ್ ಒತ್ತಿರಿ.
-
ಬೇಕಾದ ವಿಡಿಯೋ ಗುಣಮಟ್ಟ ಆಯ್ಕೆ ಮಾಡಿ.
-
ಡೌನ್‌ಲೋಡ್ ಪೂರ್ಣಗೊಂಡ ಬಳಿಕ Library ವಿಭಾಗದಲ್ಲಿರುವ Downloads ಆಯ್ಕೆಯಲ್ಲಿ ವಿಡಿಯೋ ನೋಡಬಹುದು.
ಇದರ ಮೂಲಕ ಇಂಟರ್‌ನೆಟ್ ಸಂಪರ್ಕವಿಲ್ಲದಿದ್ದರೂ ವಿಡಿಯೋ ವೀಕ್ಷಿಸಬಹುದು.
Premium ಡೌನ್‌ಲೋಡ್‌ಗೆ ಕೆಲವು ಮಿತಿಗಳಿವೆ!
YouTube Premium ಮೂಲಕ ಡೌನ್‌ಲೋಡ್ ಮಾಡಿದ ವಿಡಿಯೋಗಳನ್ನು ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಪ್ರತ್ಯೇಕ ವಿಡಿಯೋ ಫೈಲ್‌ಗಳಾಗಿ ಬಳಸಲು ಸಾಧ್ಯವಿಲ್ಲ. ಅವು ಯೂಟ್ಯೂಬ್‌ನಲ್ಲಿಯೇ ಲಭ್ಯವಿರುತ್ತವೆ.
ಅಲ್ಲದೆ, ಡೌನ್‌ಲೋಡ್ ಮಾಡಿದ ವಿಡಿಯೋಗಳನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸಲು ಕನಿಷ್ಠ 30 ದಿನಗಳಿಗೊಮ್ಮೆ ಇಂಟರ್‌ನೆಟ್‌ಗೆ ಸಂಪರ್ಕ ಹೊಂದಿ ನಿಮ್ಮ Premium ಚಂದಾದಾರಿಕೆಯನ್ನು ಪರಿಶೀಲಿಸಬೇಕಾಗುತ್ತದೆ. ಕೆಲವು ಕಾಪಿರೈಟ್ ಅಥವಾ ಪ್ರಾದೇಶಿಕ ನಿರ್ಬಂಧ ಹೊಂದಿರುವ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುವುದಿಲ್ಲ.
ಹಾಗಾದರೆ ಯಾವುದು ಉತ್ತಮ?
ನಿಮಗೆ ವಿಡಿಯೋಗಳನ್ನು ಕಂಪ್ಯೂಟರ್‌ನಲ್ಲಿ ಪ್ರತ್ಯೇಕ ಫೈಲ್‌ಗಳಾಗಿ ಉಳಿಸಿಕೊಳ್ಳಬೇಕಿದ್ದರೆ ClipGrab ಒಂದು ಆಯ್ಕೆಯಾಗಬಹುದು. ಯಾವುದೇ ಹೆಚ್ಚುವರಿ ಸಾಫ್ಟ್‌ವೇರ್ ಬಳಸದೆ ಸುರಕ್ಷಿತವಾಗಿ ಯೂಟ್ಯೂಬ್‌ನಲ್ಲಿಯೇ ಆಫ್‌ಲೈನ್ ವೀಕ್ಷಣೆ ಮಾಡಬೇಕಿದ್ದರೆ YouTube Premium ಉತ್ತಮ ಅಧಿಕೃತ ಆಯ್ಕೆ.
ಎಚ್ಚರಿಕೆ : ಯೂಟ್ಯೂಬ್‌ನಲ್ಲಿರುವ ಪ್ರತಿಯೊಂದು ವಿಡಿಯೋವನ್ನೂ ಅನುಮತಿಯಿಲ್ಲದೆ ಡೌನ್‌ಲೋಡ್ ಮಾಡುವುದು ಅಥವಾ ಬೇರೆಡೆ ಮರುಬಳಕೆ ಮಾಡುವುದು ಕಾನೂನುಬದ್ಧವಾಗಿರುವುದಿಲ್ಲ. ಕಾಪಿರೈಟ್ ನಿಯಮಗಳು ಮತ್ತು ಯೂಟ್ಯೂಬ್‌ನ ಸೇವಾ ಷರತ್ತುಗಳನ್ನು ಪಾಲಿಸುವುದು ಮುಖ್ಯ. ವಿಶೇಷವಾಗಿ ಇತರರ ವಿಡಿಯೋಗಳನ್ನು ನಿಮ್ಮದೇ ಚಾನೆಲ್‌ನಲ್ಲಿ ಬಳಸುವ ಮೊದಲು ಅನುಮತಿ ಪಡೆಯಬೇಕು.

