ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರ ಸೂಪರ್ 8 ಹಂತದ ಮಹತ್ವದ ಪಂದ್ಯ ನಡೆಯಲಿದೆ. ಸಲ್ಮಾನ್ ಅಲಿ ಆಗಾ ನೇತೃತ್ವದ ಪಾಕಿಸ್ತಾನ ಮತ್ತು ದಾಸುನ್ ಶನಕ ಸಾರಥ್ಯದ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಮತ್ತೊಂದೆಡೆ, ತವರು ನೆಲದಲ್ಲಿ ಆಡುತ್ತಿರುವ ಶ್ರೀಲಂಕಾ ತಂಡಕ್ಕೆ ಇದು ಕೇವಲ ಪ್ರತಿಷ್ಠೆಯ ಹೋರಾಟವಾಗಿದೆ.
ಪಾಕಿಸ್ತಾನದ ಕಠಿಣ ಹಾದಿ: ಸೂಪರ್ 8 ಹಂತದಲ್ಲಿ ಪಾಕಿಸ್ತಾನದ ಪ್ರದರ್ಶನ ಅಷ್ಟೇನೂ ಆಶಾದಾಯಕವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದ ಕಾರಣ ಪಾಕಿಸ್ತಾನ ಕೇವಲ 1 ಅಂಕ ಪಡೆದಿತ್ತು. ನಂತರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 2 ವಿಕೆಟ್ಗಳ ರೋಚಕ ಸೋಲು ಅನುಭವಿಸಿತ್ತು. ಹೀಗಾಗಿ ಇಂದು ದೊಡ್ಡ ಅಂತರದ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
ಪಂದ್ಯದ ಸಮಯ ಮತ್ತು ನೇರ ಪ್ರಸಾರ: ಫೆಬ್ರವರಿ 28 ರಂದು ನಡೆಯಲಿರುವ ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 7:00 ಗಂಟೆಗೆ ಆರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹೆಚ್ಡಿ ಚಾನೆಲ್ಗಳಲ್ಲಿ ವೀಕ್ಷಿಸಬಹುದು. ಡಿಜಿಟಲ್ ವೀಕ್ಷಕರಿಗಾಗಿ ಜಿಯೋಹಾಟ್ಸ್ಟಾರ್ ಆ್ಯಪ್ ಮತ್ತು ವೆಬ್ಸೈಟ್ನಲ್ಲಿ ನೇರ ಪ್ರಸಾರ ಲಭ್ಯವಿರಲಿದೆ.
ತಂಡಗಳ ವಿವರ: ಪಾಕಿಸ್ತಾನ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಬಾಬರ್ ಅಜಮ್, ಫಹೀಮ್ ಅಶ್ರಫ್, ಫಖರ್ ಜಮಾನ್, ಖವಾಜಾ ನಾಫೆ, ಮೊಹಮ್ಮದ್ ನವಾಜ್, ನಸೀಮ್ ಶಾ, ಸಾಹಿಬ್ಜಾದಾ ಫರ್ಹಾನ್, ಸೈಮ್ ಅಯೂಬ್, ಶಾಹೀನ್ ಅಫ್ರಿದಿ, ಶಾದಾಬ್ ಖಾನ್, ಉಸ್ಮಾನ್ ಖಾನ್, ಉಸ್ಮಾನ್ ತಾರಿಕ್ ಮತ್ತು ಸಲ್ಮಾನ್ ಮಿರ್ಜಾ.
ಶ್ರೀಲಂಕಾ ತಂಡ: ದಾಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಕಮಿಲ್ ಮಿಶಾರಾ, ಕುಸಲ್ ಮೆಂಡಿಸ್, ಕಮಿಂದು ಮೆಂಡಿಸ್, ಕುಸಲ್ ಪೆರೆರಾ, ಚರಿತ್ ಅಸಲಂಕ, ಜನಿತ್ ಲಿಯಾನಗೆ, ಪವನ್ ರತ್ನಾಯಕೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ಮತೀಶ ಪತಿರಾಣ, ಪ್ರಮೋದ್ ಮದುಶನ್ ಮತ್ತು ದುಶಾನ್ ಹೇಮಂತ.

