ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡುತ್ತಿರುವ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಕಮಿಷನರ್ ತಮ್ಮ ಹೆಸರು ಪ್ರಸ್ತಾಪ ಮಾಡಿದ್ದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕುಮಾರಸ್ವಾಮಿ, ಸ್ಟಿಂಗ್ ಪ್ರಕರಣ ಸಂಬಂಧ ನಿನ್ನೆ ನನ್ನ ವಿರುದ್ಧ ಬೆಂಗಳೂರು ಪೊಲೀಸ್ ಕಮಿಷನರ್ ಆರೋಪ ಮಾಡಿದ್ದಾರೆ. ಹೀಗಾಗಿ ಈ ವಿಚಾರ ನನಗೆ ತಿರುಗಬಾಣವಾಗುತ್ತೆ ಅಂತಾ ಚರ್ಚೆ ಆಗುತ್ತಿದೆ. ಆದರೆ ದೆಹಲಿಯ ರಿತೇಶ್ ಪಾಂಡೆಯನ್ನು ಅರೆಸ್ಟ್ ಮಾಡಿದ್ದು ಎಲ್ಲಿ? ನನ್ನ ನಿವಾಸದಲ್ಲಿ ಆತನನ್ನು ಅರೆಸ್ಟ್ ಮಾಡಿದ್ದಾರಾ? ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರಿತೇಶ್ ಪಾಂಡೆ ನನಗೆ ಯಾರು ಅಂತ ಗೊತ್ತಿಲ್ಲ, ಆತನ ಮುಖ ನೋಡಿಲ್ಲ. ನಮ್ಮ ದೆಹಲಿ ಮನೆಗೆ ಸಾಕಷ್ಟು ಜನ ಕೆಲಸ ಹೇಳಿಕೊಂಡು ಬರುತ್ತಾರೆ. ಹೀಗಾಗಿ ಆ ಬಗ್ಗೆ ತನಿಖೆ ಮಾಡಿ. ನಿಮಗೆ ಯಾರೂ ಬೇಡ ಅಂದಿಲ್ಲ. ಆದರೆ ನಿನ್ನೆ ಕಮಿಷನರ್ ಮಾತನಾಡಿರುವುದು ಕಾನೂನು ಬಾಹಿರ. ನಾನು ಕೋರ್ಟ್ಗೆ ಹೋದರೆ ಏನೂ ಆಗುತ್ತದೆ ಎಂದು ಆ ಅಧಿಕಾರಿಗೆ ಗೊತ್ತು. ಆದರೆ ನಾನು ಆ ರೀತಿ ಮಾಡಲ್ಲ. ಯಾಕೆಂದರೆ ಅವರು ಒತ್ತಡಕ್ಕೆ ಮಣಿದು ಹೇಳಿಕೆ ಕೊಟ್ಟಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಷನ್ ಕಟ್ಟುಕಥೆಯ ಭಾಗವಾಗಿದ್ದು, ಉದ್ದೇಶಪೂರ್ವಕವಾಗಿ ಷಡ್ಯಂತ್ರ ಅಂತಾ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯ ಅವರಿಗೂ ಕ್ಲೀನ್ಚಿಟ್ ನೀಡಿದ್ದಾರೆ. ಸ್ಟಿಂಗ್ ಮಾಡಿಸಿದವರನ್ನು ರಕ್ಷಿಸುವುದೇ ನಿಮ್ಮ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಪ್ರಕರಣದಲ್ಲಿ ನಮ್ಮ ಪಕ್ಷದವರ ಪಾತ್ರ ಇದೆ ಅಂತಾ ಸಚಿವರಾದ ಯತೀಂದ್ರ ಖುದ್ದು ಆರೋಪ ಮಾಡಿದ್ದಾರೆ. ಹೀಗಿದ್ದರೂ ಸಿದ್ದರಾಮಯ್ಯಗೆ ಕ್ಲೀನ್ಚಿಟ್ ನೀಡಿ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ದೆಹಲಿಯ ನನ್ನ ಮನೆಯಲ್ಲಿ ಮೊಬೈಲ್ ಹಸ್ತಾಂತರ ಅಂತಾ ಆರೋಪ ಮಾಡಿದ್ದೀರಿ. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಯಾರು? ಎಂದು ಪ್ರಶ್ನಿಸಿದ್ದಾರೆ. ಇದೊಂದು ಹಳ್ಳ ಹಿಡಿಸುವಂತಹ ಕೇಸ್ ಆಗಿದೆ ಎಂದು ಕಿಡಿ ಕಾರಿರುವ ಅವರು, ಏಕೆ ಸ್ಟೇ ತೆಗೆದುಕೊಳ್ಳುತ್ತೀರಿ ಅಂತಾ ಸಿದ್ದರಾಮಯ್ಯಗೆ ಮೊದಲೇ ಹೇಳಿದ್ದೆ. ನಿಮ್ಮ ಹಳೇ ಧ್ವನಿಯನ್ನು ಎತ್ತಿ ಅಂತಾಲೂ ಹೇಳಿದ್ದೆ ಎಂದರು.
ಸ್ಟಿಂಗ್ ಆಪರೇಷನ್ ಮೂಲ ಪುರುಷ ಏಕೆ ಕೋರ್ಟ್ ಮೊರೆ ಹೋಗಿದ್ದಾನೆ ಎಂದು ಪ್ರಶ್ನಿಸಿರುವ ಹೆಚ್ಡಿಕೆ, ನಾನು ಏನಾದ್ರೂ ಮಾಡಬೇಕಾದರೆ ಕದ್ದುಮುಚ್ಚಿ ಮಾಡುವುದಿಲ್ಲ. ರಾಜ್ಯದ ಪೊಲೀಸ್ ಅಧಿಕಾರಿಗಳ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ. ಕೆಲ ಪೊಲೀಸ್ ಅಧಿಕಾರಿಗಳ ವಿರುದ್ಧ ಆರೋಪವೂ ಇದೆ. ನಮಗೂ ಸಮಯ ಬರುತ್ತೆ, ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡಿ. ನಮ್ಮ ಕುಟುಂಬ ಪ್ರಧಾನಿ ಹುದ್ದೆಯನ್ನು ನೋಡಿದ್ದರೂ ಪೊಲೀಸರನ್ನು ಹೆದರಿಸಿಲ್ಲ. ನಾನು ಎರಡು ಸಲ ಸಿಎಂ ಆದರೂ ದ್ವೇಷದ ರಾಜಕಾರಣ ಮಾಡಿಲ್ಲ. ನಮ್ಮ ಮನೆ ಮೇಲೆ ದಾಳಿ ನಡೆಸಲು ಬನ್ನಿ ತಯಾರಿದ್ದೇನೆ ಎಂದವರು ಹೇಳಿದ್ದಾರೆ. ನಾನು ಏನು ಮಾಡಿದ್ದೇನೆಂದು ನನ್ನನ್ನು ವಿಚಾರಣೆಗೆ ಕರೆಯುತ್ತಾರೆ? ಕೇಂದ್ರ ಸಚಿವರನ್ನು ಬಂಧಿಸುತ್ತಾರೆಂದು ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಅದು ಯಾವ ಕೇಂದ್ರ ಸಚಿವರನ್ನು ಬಂಧಿಸುತ್ತಾರೋ ನೋಡೋಣ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿಯನ್ನು ಟಚ್ ಮಾಡಲು ಆಗಲ್ಲ:
ಈ ಕುಮಾರಸ್ವಾಮಿಯನ್ನು ಟಚ್ ಮಾಡಲು ಆಗಲ್ಲ ಎಂದೂ ಗುಡಿಗಿರುವ ಅವರು, ನಿನ್ನೆ ರಾಜ್ಯೋತ್ಸವ ಆಚರಣೆ ಬಳಿಕ ಎಲ್ಲಿ ಸಭೆ ನಡೆಸಿದ್ದೀರೆಂದು ಗೊತ್ತಿದೆ. ಸ್ಟಿಂಗ್ ಆಪರೇಷನ್ ಕೇಸ್ನ್ನು ನನ್ನ ಮನೆಗೂ ಲಿಂಕ್ ಮಾಡಿದ್ದಾರೆ. ತನ್ನ ಮೇಲೆ ಇಡಿ ದಾಳಿಗೆ ಒತ್ತಡ ಅಂತಾ ನನ್ನ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಆರೋಪ ಮಾಡಿದ್ದಾರೆ. ಆದರೆ ಕೆಪಿಎಸ್ಸಿಯ ನಿಮ್ಮ ಕರ್ಮಕಾಂಡಗಳನ್ನು ಮರೆಮಾಚುತ್ತಿರುವುದು ಯಾರು? ನನ್ನ ಸಹೋದರನ ಪುತ್ರನಿಗೆ ಜೀವಾವಧಿ ಶಿಕ್ಷೆ ಕೊಡಿಸಿದ್ದೀರಿ. ಆದರೂ ನಾನು ಯಾರ ಬಳಿಯೂ ಹೋಗಿ ಭಿಕ್ಷೆ ಬೇಡಿಲ್ಲ. ನಾನು ಎಲ್ಲೂ ಪ್ರಕರಣಗಳನ್ನು ಏಕಾಂಗಿಯಾಗಿಯೇ ಎದುರಿಸುತ್ತೇನೆ. ಈ ಬಗ್ಗೆ ಸದನದಲ್ಲೇ ಹೇಳಿದ್ದೇನೆ, ಬೇಕಾದ್ರೆ ದಾಖಲೆ ತೆಗೆದು ನೋಡಿ. ನಿಮ್ಮ ರೀತಿ ನಾನು ರಕ್ಷಣೆ ಪಡೆದುಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದರು.
ಇದು ಬರೀ ಟ್ರೇಲರ್, ಪಿಕ್ಚರ್ ಅಭಿ ಬಾಕಿ ಹೈ ಎಂದು ಪ್ರಿಯಾಂಕ್ ಹೇಳಿದ್ದಾರೆ. ಇಂತಹ ಟ್ರೇಲರ್ಗಳನ್ನು ನಾನು ಎಷ್ಟು ನೋಡಿಲ್ಲ ಪ್ರಿಯಾಂಕ್ ಖರ್ಗೆ ಅವರೇ? 2011ರ ಘಟನೆಯನ್ನು 2023ಕ್ಕೆ ಚಿತ್ರೀಕರಣ ಮಾಡಿದ್ದಾರೆ. ಇಷ್ಟು ವರ್ಷಗಳವರೆಗೂ ಏಕೆ ಸುಮ್ಮನಿದ್ದರು? 2015ರಲ್ಲಿ ಕೃಪಾ ಆಳ್ವಾರನ್ನು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ಅಂದಿನ ಸಿಎಂ ಸಿದ್ದರಾಮಯ್ಯರವರೇ ಮಾಡಿದ್ರು. ಕೃಪಾ ಆಳ್ವಾರನ್ನು ನಾನಾಗಲಿ, ಜೆಡಿಎಸ್ ಆಗಲಿ ಅಧ್ಯಕ್ಷರನ್ನಾಗಿ ಮಾಡಿಲ್ಲ. ಕೃಪಾ ಆಳ್ವಾ, ಖಾಸಗಿ ಚಾನಲ್ ಮುಖ್ಯಸ್ಥ, ಮತ್ತೊಬ್ಬರಿಂದ ಸ್ಟಿಂಗ್ ನಡೆದಿದೆ. ಕೇರಳದ ಹೆಣ್ಣು ಮಗಳನ್ನು ಕೂರಿಸಿ ವಿಡಿಯೋ ಮಾಡಿದ್ದಾರೆ. 2023ರಲ್ಲಿ ಏಕೆ ಇದನ್ನು ವಿಡಿಯೋ ಮಾಡಿದ್ದಾರೆಂದು ತನಿಖೆ ಮಾಡಿದ್ದಾರಾ? ಕೃಪಾ ಆಳ್ವಾಗೂ, ಕೇರಳದ ಆ ಮುಸ್ಲಿಂ ಹೆಣ್ಣು ಮಗಳಿಗೂ ಏನು ಸಂಬಂಧ ಎಂದೂ ಕುಮಾರಸ್ವಾಮಿ ಪ್ರಶ್ನಿಸಿದರು.
ಕೇರಳದ ಹೆಣ್ಮಗಳು ಈ ಹಿಂದೆ ಮಾಡಿದ ಇ-ಮೇಲ್ ದೂರುಗಳು ಎಲ್ಲಿ ಹೋದವು? ಆ 14 ವರ್ಷದ ಹೆಣ್ಣು ಮಗಳಿಗೆ ಎಷ್ಟು ದುಡ್ಡು ಕೊಟ್ಟಿದ್ದೀರಿ? ವಿಡಿಯೋದಲ್ಲಿರುವ ಮೂರನೇ ವ್ಯಕ್ತಿಯ ಯಾರು? ಆತನ ಪಾತ್ರ ಏನು? ಕೃಪಾ ಆಳ್ವಾರನ್ನು ವಿದೇಶಕ್ಕೆ ಕಳುಹಿಸಿದ್ದು ಯಾಕೆ? ಈ ಮೂಲದ ತನಿಖೆ ಪೊಲೀಸರು ಏಕೆ ಮಾಡುತ್ತಿಲ್ಲ? 2023 ರಲ್ಲಿ ವಿಡಿಯೋ ಹೊರ ಬರಲು ಕಾರಣ ಏನು ಎಂದು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟರು.
ಆರೋಪಿ ರಿತೀಶ್ ಕುಮಾರ್ ನನ್ನ ಮನೆಯಲ್ಲಿದ್ದ, ಅಲ್ಲಿಯೇ ಮೊಬೈಲ್ ಎಕ್ಸ್ಚೇಂಜ್ ಮಾಡಿಕೊಂಡಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಪೊಲೀಸರು ಕೋರ್ಟ್ಗೆ ನೀಡಿರುವ ದಾಖಲೆಯಲ್ಲೇ ಆತನ ವಿಳಾಸ ಉತ್ತರ ಪ್ರದೇಶದ ಗಾಜಿಯಾಬಾದ್ ಎಂದಿದೆ. ಅಕ್ಟೋಬರ್ 23ರಂದು ಮಧ್ಯಾಹ್ನ 2:59ಕ್ಕೆ ಗಾಜಿಯಾಬಾದ್ನ ಇಂದಿರಾಪುರಂನಲ್ಲಿ ಆತನನ್ನು ಬಂಧಿಸಲಾಗಿದೆ. ನನ್ನ ದೆಹಲಿ ನಿವಾಸದಲ್ಲಿ ಆತ ಇರಲೇ ಇಲ್ಲ. ಹೀಗಿರುವಾಗ ನನ್ನ ನಿವಾಸ ಮಹಜರು ಮಾಡಲಾಗಿದೆ ಎಂಬ ಸುದ್ದಿಗಳನ್ನು ಗೃಹ ಸಚಿವರು ಮತ್ತು ಕಮಿಷನರ್ ಕಟ್ಟುಕಥೆಯಾಗಿ ಸೃಷ್ಟಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಈ ಹಿಂದೆ ಸಿಡಿ ಹಾಗೂ ಸ್ಟಿಂಗ್ ಸಂಸ್ಕೃತಿಯ ಕುರಿತು ಡಿ.ಕೆ. ಶಿವಕುಮಾರ್ ಮಾತನಾಡಿದ್ದ ವಿಡಿಯೋವನ್ನು ಸುದ್ದಿಗೋಷ್ಠಿಯಲ್ಲಿ ಪ್ರದರ್ಶಿಸಿದ ಹೆಚ್ಡಿಕೆ, ಮಿಸ್ಟರ್ ಶಿವಕುಮಾರ್, ನೀವೇ ಅಂದು ಬ್ಲ್ಯಾಕ್ಮೇಲ್, ಸಿಡಿ ಗ್ಯಾಂಗ್ ಬಗ್ಗೆ ಮಾತನಾಡಿದ್ದೀರಿ. ಈಗ ನಿಮ್ಮದೇ ಸರ್ಕಾರದಲ್ಲಿ ತನಿಖೆ ಯಾವ ಹಾದಿ ಹಿಡಿದಿದೆ? ಎಂದು ಪ್ರಶ್ನಿಸಿದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಗೆ ನನ್ನ ಲಿಂಕಿಲ್ಲ; ಡಿಕೆಶಿ ಲಿಂಕಿದೆ:
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲೂ ನನ್ನ ಲಿಂಕ್ ಇಲ್ಲ, ಬದಲಿಗೆ ಡಿ.ಕೆ. ಶಿವಕುಮಾರ್ ಲಿಂಕ್ ಇದೆ. ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಆಗಸ್ಟ್ 5 ಮತ್ತು 6ರಂದು ಡಿಕೆಶಿ ಮನೆಗೆ ಹೋಗಿದ್ದ ಸಿಡಿಆರ್ ದಾಖಲೆಗಳಿವೆ. ಆತನ ಮೂಲಕವೇ ಎಲ್ಲವೂ ಸಿದ್ಧವಾಗಿದ್ದು, ಇದನ್ನು ಪೊಲೀಸರು ತನಿಖೆ ಮಾಡಿದ್ದಾರೆಯೇ ಎಂದು ಕೇಳಿದರು.
ಪ್ರಜ್ವಲ್ ಪೆನ್ಡ್ರೈವ್ ಅನ್ನು ನಾನೇ ಹಂಚಿದ್ದು ಅಂತಾ ಆರೋಪಿಸಿದ್ದಾರೆ. ಆದರೆ ಪೆನ್ಡ್ರೈವ್ ಹಂಚಿದ್ದು ನಾನಲ್ಲ, ಪ್ರಜ್ವಲ್ ಕಾರು ಚಾಲಕ. ಈ ವಿಚಾರದಲ್ಲಿ ಪ್ರಜ್ವಲ್ ಕಾರು ಚಾಲಕನನ್ನು ಮನೆಗೆ ಕರೆಸಿಕೊಂಡು ಡಿ.ಕೆ.ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ. ಈ ಕುರಿತ ಕರೆಯ ಮಾಹಿತಿಗಳನ್ನೂ ಹೆಚ್ ಡಿಕೆ ಬಿಡುಗಡೆ ಮಾಡಿದರು.
ಆಗಸ್ಟ್ 5,6 2023ರಲ್ಲಿ ಕಾರ್ತಿಕ್ ಡಿಕೆಶಿ ಮನೆಗೆ ಹೋಗಿದ್ದು, ಆ ಕ್ಯಾಸೆಟ್ ಆಗಿದ್ದು ನಿಮ್ಮ ಮನೆಯಲ್ಲಾ? ಈ ಬಗ್ಗೆ ತನಿಖೆ ಆಗಿದ್ಯಾ ಎಂದು ಸಿಎಂರನ್ನು ಅವರು ಪ್ರಶ್ನಿಸಿದ್ದಾರೆ. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ರಾಹುಲ್ ಪ್ರಧಾನಿ ಆಗುವುದನ್ನು ತಪ್ಪಿಸದರೆಂದು ನನ್ನ ಕುಟುಂಬವನ್ನು ಕಾಂಗ್ರೆಸ್ ನಾಯಕರು ನಿರ್ನಾಮ ಮಾಡಲು ಮುಂದಾದರು ಎಂದಿದ್ದಾರೆ.
ಇನ್ನು ಕೇಂದ್ರ ಸಚಿವರು ಇಡಿ, ಐಟಿ ಛೂಬಿಡುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಕೆಪಿಎಸ್ಸಿ ಅಕ್ರಮ ಮುಚ್ಚಿಹಾಕಲು ಎಸ್ಐಟಿ ತನಿಖೆ ತಡೆಯಲು ಸುಪ್ರೀಂ ಕೋರ್ಟ್ಗೆ ಹೋಗಿ ರಕ್ಷಣೆ ಪಡೆದವರು ನೀವು. ನನ್ನ 14 ವರ್ಷಗಳ ರಾಜಕೀಯ ಹೋರಾಟದಲ್ಲಿ ನಾನೆಂದೂ ಪ್ರಧಾನಿ ಮೋದಿ ಅಥವಾ ಅಮಿತ್ ಶಾ ಬಳಿ ಹೋಗಿ ನನ್ನ ರಕ್ಷಣೆಗೆ ಭಿಕ್ಷೆ ಬೇಡಿಲ್ಲ, ಯಾರ ವಿರುದ್ಧವೂ ತನಿಖಾ ಸಂಸ್ಥೆಗಳನ್ನು ಛೂಬಿಡಿ ಎಂದು ಹೇಳಿಲ್ಲ. ಏಕಾಂಗಿಯಾಗಿಯೇ ಎಲ್ಲವನ್ನೂ ಎದುರಿಸಿದ್ದೇನೆ. ನನ್ನ ಮನೆ ಬಾಗಿಲು ಬಡವರ ಕಷ್ಟಕ್ಕೆ ಸದಾ ತೆರೆದಿರುತ್ತದೆ. ಅಲ್ಲಿಗೆ ಯಾರು ಬರುತ್ತಾರೆ ಎಂದು ತಿಳಿಯಲು ಪ್ರಿಯಾಂಕ್ ಖರ್ಗೆ ಬೇಹುಗಾರರನ್ನು ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು.

