alex Certify ರೈತರಿಗೆ ಮತ್ತೊಂದು ಗುಡ್ ನ್ಯೂಸ್: SC, ST ಸಮುದಾಯಕ್ಕೆ ಉಚಿತ ವಿದ್ಯುತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಮತ್ತೊಂದು ಗುಡ್ ನ್ಯೂಸ್: SC, ST ಸಮುದಾಯಕ್ಕೆ ಉಚಿತ ವಿದ್ಯುತ್

ಶಿವಮೊಗ್ಗ: ರೈತರ ಟಿಸಿ ಸುಟ್ಟ 24 ಯೊಳಗೆ ಟಿಸಿ ಬದಲಾವಣೆ ಮಾಡುವಂತಹ ದಾಖಲೆಯ ನಿರ್ಧಾರ ಸೇರಿದಂತೆ ವಿವಿಧ ಹೊಸ ಯೋಜನೆಗಳ ಮೂಲಕ ರಾಜ್ಯದ ವಿದ್ಯುತ್ ಸರಬರಾಜಿನಲ್ಲಿ ಪ್ರಗತಿಯನ್ನು ಸಾಧಿಸಲಾಗುತ್ತಿದೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್‍ಕುಮಾರ್ ತಿಳಿಸಿದರು.

ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತದ ವತಿಯಿಂದ ನಗರದ ಮಂಡ್ಲಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮೆಸ್ಕಾಂ ನಗರ ವಿಭಾಗೀಯ ಕಚೇರಿ-2 ರ ಹಾಗೂ ಘಟಕ-6ರ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಮುಖ್ಯಮಂತ್ರಿಯವರು ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ಉಚಿತವಾಗಿ 75 ಯುನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ್ದು, ಲಕ್ಷಾಂತರ ಜನರು ಈ ಯೋಜನೆ ಉಪಯೋಗ ಪಡೆಯಲಿದ್ದಾರೆ ಎಂದರು.

ಅಭಿವೃದ್ದಿ ಒಂದು ನಿರಂತರ ಪ್ರಕ್ರಿಯೆಯಾಗಿದ್ದು ಇಂಧನ ಇಲಾಖೆಯಲ್ಲಿ ಅತ್ಯುತ್ತಮ ಸುಧಾರಣೆಗಳು ಆಗಿವೆ. ಗ್ರಾಮೀಣ ಭಾಗದಲ್ಲಿ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹೊಂದಿರುವವರಿಗೆ ಉಚಿತ ವಿದ್ಯುತ್ ನೀಡುವ ‘ಬೆಳಕು’ ಯೋಜನೆಯಡಿ ಕೇವಲ 100 ದಿನಗಳ ಅವಧಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಉಚಿತ ವಿದ್ಯುತ್ ಸಂಪರ್ಕ ನೀಡಲಾಗಿದೆ ಎಂದರು.

ರೈತರ ಸುಟ್ಟ ಟಿಸಿ ಬದಲಾವಣೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದ್ದು, ಕೇವಲ 24 ಗಂಟೆಗಳಲ್ಲಿ ಸುಟ್ಟ ಟಿಸಿ ಬದಲಾಯಿಸುವ ನಿರ್ಧಾರವನ್ನು ನಮ್ಮ ಇಲಾಖೆ ಕೈಗೊಂಡು ಈ ಕುರಿತು ಅಭಿಯಾನ ನಡೆಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ 250 ಕಡೆ ಟಿಸಿ ಬ್ಯಾಂಕ್, 162 ಟಿಸಿ ರಿಪೇರಿ ಕೇಂದ್ರಗಳನ್ನು ತೆರೆಯಲಾಗಿದ್ದು, ಟಿಸಿ ಸುಟ್ಟ 24 ಗಂಟೆಯೊಳಗೆ ಟಿಸಿ ಬದಲಾಯಿಸುವ ಪ್ರಕ್ರಿಯೆಯಲ್ಲಿ ಶೇ.80 ರಿಂದ 90 ಪ್ರಗತಿ ಸಾಧಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ರಾಜ್ಯದಲ್ಲಿ ಕಳೆದ ತಿಂಗಳು ಟ್ರಾನ್ಸ್‍ಫಾರ್ಮರ್ ನಿರ್ವಹಣೆಗಾಗಿ 10 ದಿನಗಳ ವಿದ್ಯುತ್ ಪರಿವರ್ತಕ ಅಭಿಯಾನ ಕೈಗೊಂಡು ಎಲ್ಲ ಅಧಿಕಾರಿ/ನೌಕರರು ತಮ್ಮ ಸುತ್ತಮುತ್ತ ಇರುವ ಟಿಸಿ ಗಳನ್ನು ಪರಿಶೀಲಿಸಿ, ರಾಜ್ಯದಲ್ಲಿ ಸುಮಾರು 8 ರಿಂದ 9 ಲಕ್ಷ ಟಿಸಿಗಳ  ನಿರ್ವಹಣೆ ಮಾಡುವ ಮೂಲಕ ಹೊಸ ದಾಖಲೆ ಮಾಡಲಾಗಿದೆ ಎಂದು ಹೇಳಿದರು.

ಬೇಸಿಗೆಯಲ್ಲಿ ವಿದ್ಯುತ್ ಕಡಿತ, ಲೋಡ್‍ಶೆಡ್ಡಿಂಗ್ ಆಗಲಿದೆ ಎಂಬ ಅನುಮಾನ ಜನರಲ್ಲಿ ಹೆಚ್ಚಿತ್ತು. ಆದ್ದರಿಂದ ಏಪ್ರಿಲ್, ಮೇ ತಿಂಗಳಲ್ಲಿ ಎದುರಾಗಬಹುದಾಗಿದ್ದ ಸವಾಲುಗಳ ಕುರಿತು ನವೆಂಬರ್, ಡಿಸೆಂಬರ್ ಮಾಹೆಯಲ್ಲೇ ಎಚ್ಚರಿಕೆ ವಹಿಸಲಾಗಿತ್ತು. ಬೇರೆ ರಾಜ್ಯಗಳಲ್ಲಿ ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ಅಡಚಣೆಯಾಗಿರಬಹುದು. ಆದರೆ ನಮ್ಮ ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗಿ ವಿದ್ಯುತ್ ಅಡಚಣೆಯಾಗಿದಲ್ಲ. ರಾಜ್ಯದಲ್ಲಿ ವಿದ್ಯುತ್ ಕೊರತೆಯಾಗದಂತೆ ಕೇಂದ್ರ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಂಡು ಎಲ್ಲ ರೀತಿಯ ಕ್ರಮ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಅಧಿಕಾರಿಗಳ ತಂಡ ಕೂಡ ವಿಶೇಷ ಪ್ರಯತ್ನ ಮಾಡುತ್ತಿದೆ.

ಜನಸ್ನೇಹಿ ವಿದ್ಯುತ್ ಉತ್ಪಾದನೆಗಾಗಿ ಹಸಿರು ವಿದ್ಯುತ್‍ಗೆ ಹೆಚ್ಚು ಒತ್ತು ನೀಡಿ, ಹೈಬ್ರಿಡ್ ಪಾರ್ಕ್ ನಿರ್ಮಾಣ ಯೋಜನೆಗೆ ತಯಾರಿ ನಡೆಸಲಾಗುತ್ತಿದೆ. 1 ಸಾವಿರ ಮೆಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದಿಸಲು ಸರ್ವೇ ಕಾರ್ಯ ಆರಂಭಿಸಲಾಗಿದೆ. ರೈತರ ಪಂಪ್‍ಸೆಟ್‍ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡಲು 2 ಯೋಜನೆ ರೂಪಿಸಿದ್ದು, ಕುಸುಮ್ ಬಿ ಯೋಜನೆಯಡಿ ಮೊದಲ ಹಂತದಲ್ಲಿ ಸುಮಾರು 10 ಸಾವಿರ ವೈಯಕ್ತಿಕ ಫಲಾನುಭವಿಗಳಿಗೆ ಸೌಲಭ್ಯ ನೀಡಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಹಾಗೂ ಫೀಡರ್‍ಗಳಿಗೆ ಸೋಲಾರ್ ಮೂಲಕ ವಿದ್ಯುತ್ ನೀಡುವ ಯೋಜನೆ ಕೂಡ ಪ್ರಗತಿಯಲ್ಲಿದ್ದು, ರಾಜ್ಯದ ಜನತೆ ಈ ಎಲ್ಲ ಯೋಜನೆಗಳ ಸದುಪಯೋಗ ಪಡೆಯಬೇಕು.

ಮೆಸ್ಕಾಂ ನೌಕರರ ಸಂಘದ ಮೋಹನ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೆಸ್ಕಾಂ ಎಇಇ ವೀರೇಂದ್ರ ಹೆಚ್.ಆರ್. ಸ್ವಾಗತಿಸಿದರು.

ಮಹಾನಗರಪಾಲಿಕೆ ಮಹಾಪೌರರಾದ ಸುನೀತಾ ಅಣ್ಣಪ್ಪ, ಸದಸ್ಯರಾದ ಲಕ್ಷ್ಮೀ ಶಂಕರನಾಯ್ಕ, ಕ್ರೀಡಾ ಪ್ರಾಧಿಕಾರದ ಕೆ.ಪಿ ಪುರುಷೋತ್ತಮ್, ಮೆಸ್ಕಾಂ ನಿರ್ದೇಶಕರಾದ ನಂಜುಂಡಸ್ವಾಮಿ, ಗಿರಿರಾಜ್, ದಿನೇಶ್, ಮುಖ್ಯ ಇಂಜಿನಿಯರ್, ಗುತ್ತಿಗೆದಾರರು, ಇತರೆ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...