alex Certify ಕಂಟೈನ್‌ಮೆಂಟ್ ಜೋನ್ ನಲ್ಲಿ ಕಠಿಣ ಕ್ರಮ: ಸಂಚಾರ ಸಂಪೂರ್ಣ ನಿರ್ಬಂಧಕ್ಕೆ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಟೈನ್‌ಮೆಂಟ್ ಜೋನ್ ನಲ್ಲಿ ಕಠಿಣ ಕ್ರಮ: ಸಂಚಾರ ಸಂಪೂರ್ಣ ನಿರ್ಬಂಧಕ್ಕೆ ಆದೇಶ

ಶಿವಮೊಗ್ಗ: ಕೊರೋನಾ ಪ್ರಕರಣಗಳು 10 ಕ್ಕಿಂತ ಹೆಚ್ಚು ಇರುವ ಪ್ರದೇಶಗಳನ್ನು ಕಡ್ಡಾಯವಾಗಿ ಕಂಟೈನ್‌ಮೆಂಟ್ ವಲಯವಾಗಿ ಗುರುತಿಸಿ ಅಲ್ಲಿನ ನಿವಾಸಿಗಳ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದ್ದಾರೆ.

ಅವರು ಗುರುವಾರ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಕೊರೋನಾ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಪರಿಶೀಲನೆ ನಡೆಸಿದರು.

ಕಂಟೈನ್‌ಮೆಂಟ್ ಪ್ರದೇಶದ ಪ್ರತಿ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಪ್ರತಿದಿನ ಭೇಟಿ ನೀಡಿ ಆರೋಗ್ಯ ಸ್ಥಿತಿಗತಿ ಪರಿಶೀಲನೆ ನಡೆಸಬೇಕು. ರೋಗ ಲಕ್ಷಣವಿರುವ ಪ್ರತಿಯೊಬ್ಬರಿಗೂ ಕೊರೋನಾ ಪರೀಕ್ಷೆಯನ್ನು ನಡೆಸಲು ಕ್ರಮ ಕೈಗೊಳ್ಳಬೇಕು. ಅಗತ್ಯ ಸಾಮಾಗ್ರಿಗಳನ್ನು ಅಗತ್ಯವಿರುವವರಿಗೆ ಮನೆಯ ಬಾಗಿಲಿಗೆ ತಲುಪಿಸಬೇಕು. ಕಂಟೈನ್‌ಮೆಂಟ್ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ನಿಗಾ ಇರಿಸಲು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ನಿಯೋಜಿಸಬೇಕು. ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ಮೊಬೈಲ್‌ನಲ್ಲಿ ಛಾಯಾಚಿತ್ರ ಅಥವಾ ವಿಡಿಯೋ ತೆಗೆದು ಪೊಲೀಸರಿಗೆ ದೂರು ನೀಡಬೇಕು ಎಂದು ಹೇಳಿದರು.

ಹಾಟ್‌ ಸ್ಪಾಟ್ ಗುರುತಿಸಿ:

ಗ್ರಾಮೀಣ ಭಾಗದಲ್ಲಿ ಕೆಲವು ಪ್ರದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಗಡಿಭಾಗದ ಗ್ರಾಮಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಿವೆ. ಅಂತಹ ಕೊರೋನಾ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ಅಂತಹ ಕಡೆಗಳಲ್ಲಿ ಸಂಚಾರಿ ವಾಹನಗಳ ಮೂಲಕ ಕೊರೋನಾ ಪರೀಕ್ಷೆ ನಡೆಸುವಂತೆ ತಹಶೀಲ್ದಾರ್‌ ಗಳಿಗೆ ಸೂಚಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಕೊರೋನಾ ಪಾಸಿಟಿವ್ ವ್ಯಕ್ತಿಗಳಿಗೆ ಹೋಂ ಐಸೋಲೇಷನ್‌ಗೆ ಅವಕಾಶ ನೀಡದೆ, ಕೋವಿಡ್ ಕೇರ್ ಸೆಂಟರ್‌ನಲ್ಲಿ ದಾಖಲಿಸಬೇಕು. ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್‌ಗಳಲ್ಲಿ ಚಿಕಿತ್ಸೆಗೆ ಆಗಮಿಸುವ ಕರೋನಾ ಲಕ್ಷಣವಿರುವ ವ್ಯಕ್ತಿಗಳ ವಿವರಗಳನ್ನು ಕಡ್ಡಾಯವಾಗಿ ಪಡೆಯಬೇಕು. ಅಂತಹ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಒದಗಿಸಲು ವಿಫಲರಾಗುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇದೇ ರೀತಿ ಅಧಿಕೃತ ಪರವಾನಿಗೆ ಪಡೆಯದೆ ವೈದ್ಯಕೀಯ ಚಿಕಿತ್ಸೆ ನೀಡುವ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸುವಂತೆ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ವಟಾರೆ, ಯೋಜನಾ ನಿರ್ದೇಶಕ ನಾಗೇಂದ್ರ ಹೊನ್ನಳ್ಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಶಿಮ್ಸ್ ನಿರ್ದೇಶಕ ಡಾ. ಸಿದ್ದಪ್ಪ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...