ವಂಚನೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದ ಅಡಿಯಲ್ಲಿ ನಟ ಸಾಹಿಲ್ ಖಾನ್ ವಿರುದ್ಧ ಬಾಲಿವುಡ್ ನಟ ಜಾಕಿ ಶ್ರಾಫ್ ಪತ್ನಿ ಆಯೇಷಾ ಶ್ರಾಫ್ ಸಲ್ಲಿಸಿದ್ದ 2 ಎಫ್ಐಆರ್ಗಳನ್ನು ಮುಂಬೈ ಹೈಕೋರ್ಟ್ ವಜಾಗೊಳಿಸಿದೆ.
ಬಾಂದ್ರಾ ಪೊಲೀಸ್ ಠಾಣೆಯಲ್ಲಿ ನಟ ಸಾಹಿಲ್ ಖಾನ್ ವಿರುದ್ಧ 2 ದೂರುಗಳನ್ನು ದಾಖಲಿಸಲಾಗಿತ್ತು. ಸಾಹಿಲ್ ಖಾನ್ ಹಾಗೂ ಆಯೇಷಾ ಶ್ರಾಫ್ ತಮ್ಮ ನಡುವಿನ ಮನಸ್ತಾಪಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಂಡಿದ್ದಾರೆ ಎಂದು ಸಾಹಿಲ್ ಖಾನ್ ಪರ ವಕೀಲ ಕೋರ್ಟ್ಗೆ ತಿಳಿಸಿದ್ದಾರೆ.
ಆಯೇಷಾ ಶ್ರಾಫ್ ತಾವು ಸಾಹಿಲ್ ಖಾನ್ ಜೊತೆಗಿನ ವಿವಾದವನ್ನು ಬಗೆಹರಿಸಿಕೊಂಡಿರೋದಾಗಿ ಸಂದರ್ಶನದಲ್ಲಿ ಹೇಳಿದ್ದಾರೆ. ಇದೀಗ ಕೋರ್ಟ್ ಹೊರಗಿನ ವಿಚಾರವಾಗಿದೆ ಎಂದೂ ಆಯೇಷಾ ಹೇಳಿದ್ದಾರೆ.
ನಾನು 5 ವರ್ಷಗಳ ಹಿಂದೆಯೇ ಈ ಕೇಸುಗಳನ್ನು ಹಿಂಪಡೆದಿದ್ದೆ. ಇಂದು ಕೋರ್ಟ್ನಲ್ಲಿ ಎಫ್ಐಆರ್ ವಜಾಗೊಂಡಿದ್ದರಿಂದ ಈ ವಿಚಾರ ಈಗ ಬೆಳಕಿಗೆ ಬಂದಿದೆ. ಕೇಸು ಹಿಂಪಡೆದ ಬಳಿಕ ಸಾಕಷ್ಟು ಕಾನೂನು ಕ್ರಮಗಳನ್ನು ಪಾಲಿಸಬೇಕಾಗುತ್ತದೆ, ಇದೇ ಕಾರಣಕ್ಕೆ ವಿಳಂಬವಾಗಿದೆ ಎಂದು ಆಯೇಷಾ ಹೇಳಿದ್ದಾರೆ.
ಸಾಹಿಲ್ ಖಾನ್ 4 ಕೋಟಿಗೂ ಅಧಿಕ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡಿದ್ದರೂ ಸಹ ಯಾವುದೇ ದೂರುಗಳನ್ನು ಮುಂದುವರಿಸದಿರಲು ನಿರ್ಧರಿಸಿರುವುದಾಗಿ ಆಯೇಷಾ ಕೋರ್ಟ್ಗೆ ತಿಳಿಸಿದ್ದಾರೆ.
ಹೀಗಾಗಿ ನ್ಯಾಯಪೀಠ ಎರಡೂ ಕಡೆಯವರ ಹೇಳಿಕೆಗಳನ್ನು ಸ್ವೀಕರಿಸಿದೆ. ಬಳಿಕ ಎಫ್ಐಆರ್ನ್ನು ವಜಾಗೊಳಿಸಿದೆ. ಆದರೂ ಸಾಹಿಲ್ ಖಾನ್ ಗೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು ಈ ಹಣವು ಮಹಾರಾಷ್ಟ್ರ ಮಕ್ಕಳ ಕಲ್ಯಾಣ ಸಮಿತಿಗೆ ಹೋಗಲಿದೆ ಎಂದು ಕೋರ್ಟ್ ಹೇಳಿದೆ.
ಸಾಹಿಲ್ ಖಾನ್ ಸ್ಟೈಲ್ ಎಂಬ ಸಿನಿಮಾ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ್ದರು. ಸುಮಾರು 5 ಸಿನಿಮಾಗಳಲ್ಲಿ ನಟಿಸಿದ್ದ ಸಾಹಿಲ್ ಬಳಿಕ ಫಿಟ್ನೆಸ್ ಉದ್ಯಮಿಯಾಗಿ ವೃತ್ತಿ ಜೀವನವನ್ನು ಬದಲಾಯಿಸಿಕೊಂಡಿದ್ದರು.