2009ರಲ್ಲಿ ಹಾಲಿವುಡ್ನಲ್ಲಿ ರಿಲೀಸ್ ಆಗಿದ್ದ ನಿಜ ಘಟನೆ ಆಧಾರಿತ ಸಿನಿಮಾ ನೋಡುಗರ ಮನಸ್ಸಲ್ಲಿ ಇನ್ನೂ ಅಚ್ಚಳಿಯದಂತೆ ಇದೆ. ಈ ಸಿನಿಮಾದಲ್ಲಿ ನಾಯಿಯೊಂದು ಸತ್ತ ತನ್ನ ಮಾಲೀಕನ ಬರುವಿಕೆಗಾಗಿ ಬರೋಬ್ಬರಿ 9 ವರ್ಷಗಳ ಕಾಲ ರೈಲ್ವೇ ನಿಲ್ದಾಣದಲ್ಲಿ ಕಾದು ಮೃತಪಟ್ಟಿತ್ತು.
ಇದೇ ತರಹದ ಇನ್ನೊಂದು ಕತೆ ಇದೀಗ ಯುಎಸ್ನಲ್ಲಿ ನಡೆದಿದೆ. ವ್ಯತ್ಯಾಸ ಅಂದ್ರೆ ಇಲ್ಲಿ ಈ ಜರ್ಮನ್ ಶೆಫರ್ಡ್ ನಾಯಿಯ ಮಾಲೀಕ ಆಸ್ಪತ್ರೆಯಿಂದ ವಾಪಸ್ಸಾಗಿದ್ದಾರೆ. ಹೀಗಾಗಿ ಈ ನಾಯಿಯ ಕಾಯುವಿಕೆ ಕಡಿಮೆ ಸಮಯದಲ್ಲಿ ಅಂತ್ಯ ಕಂಡಿದೆ.
ಏಪ್ರಿಲ್ ತಿಂಗಳಲ್ಲಿ ಕೆಟೀ ಸ್ನೈಡರ್ ಎಂಬವರು ಲೈಯಾ ಹೆಸರಿನ ಹೆಣ್ಣು ನಾಯಿಯನ್ನ ತನ್ನ ಪೋಷಕರ ಜೊತೆ ತಾತ್ಕಾಲಿಕವಾಗಿ ಇರೋಕೆ ಬಿಟ್ಟಿದ್ರು. ಪೋಷಕರ ಜೊತೆ ತುಂಬಾನೇ ಹೊಂದಿಕೊಂಡ ಲೈಯಾ ತಂದೆಯ ಜೊತೆ ವಿಶೇಷ ಬಂಧವನ್ನ ಬೆಳೆಸಿಕೊಂಡು ಬಿಟ್ಟಿತ್ತು.
ಕೆಟೀ ಪೋಷಕರ 40ನೇ ವಿವಾಹ ವಾರ್ಷಿಕೋತ್ಸವದ ದಿನದಂದು ಆಕೆಯ ತಂದೆ ಧಿಡೀರನೇ ಕುಸಿದು ಬಿದ್ದಿದ್ರು. ಹೀಗಾಗಿ ಅವರನ್ನ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಕರೊನಾ ಬೇರೆ ಇದ್ದಿದ್ದರಿಂದ ಆಕೆಯ ತಂದೆ ಆಸ್ಪತ್ರೆಯಲ್ಲೇ ಉಳಿದುಕೊಳ್ಳಬೇಕಾದ ಅನಿವಾರ್ಯತೆ ಬಂದು ಬಿಡ್ತು.
ಆದರೆ ಈ ನಾಯಿ ಮಾತ್ರ ನಿತ್ಯ ಬಾಗಿಲ ಬಳಿ ನಿಂತು ತನ್ನ ತಲೆ ಬಾಗಿಸಿಕೊಂಡು ಮಾಲೀಕನ ಆಗಮನಕ್ಕಾಗಿ ಕಾಯುತ್ತಲೇ ಇತ್ತು. ತನ್ನ ತಾಯಿ ತೆಗೆದ ಈ ಫೋಟೋವನ್ನ ನೋಡಿದ ಕೇಟಿ ಭಾವುಕರಾಗಿದ್ದಾರೆ. ಸದ್ಯ ಈಕೆಯ ತಂದೆ ಮನೆಗೆ ಮರಳಿದ್ದು ನಾಯಿಯನ್ನ ಶಾಶ್ವತವಾಗಿ ತಮ್ಮ ಮನೆಯಲ್ಲೇ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.