alex Certify ಪಾಕಿಸ್ತಾನದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ ಚಂದ್ರಯಾನ-3; ಈ ಹಿಂದೆ ಅಪಹಾಸ್ಯ ಮಾಡಿದ್ದ ಪಾಕ್‌ ಮಾಜಿ ಸಚಿವನಿಂದಲೂ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸಿದ ಚಂದ್ರಯಾನ-3; ಈ ಹಿಂದೆ ಅಪಹಾಸ್ಯ ಮಾಡಿದ್ದ ಪಾಕ್‌ ಮಾಜಿ ಸಚಿವನಿಂದಲೂ ಮೆಚ್ಚುಗೆ

ನವದೆಹಲಿ: ಭಾರತದ ಚಂದ್ರಯಾನ-3 ವಿಜಯೋತ್ಸವ ಪಾಕಿಸ್ತಾನದ ಪ್ರಮುಖ ಪತ್ರಿಕೆಗಳ ಮುಖಪುಟಗಳಲ್ಲಿ ರಾರಾಜಿಸಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ವಿಜ್ಞಾನಿಗಳ ಈ ಸಾಧನೆಗೆ ಇಡೀ ಪ್ರಪಂಚವೇ ಶಿರ ಬಾಗಿದೆ. ಶತ್ರು ರಾಷ್ಟ್ರ ಎಂದೇ ಕರೆಸಿಕೊಳ್ಳುವ ಪಾಕಿಸ್ತಾನದ ಪತ್ರಿಕೆಗಳು, ಸುದ್ದಿ ಮಾಧ್ಯಮಗಳಲ್ಲಿ ಭಾರತದ ಚಂದ್ರಯಾನದ ಯಶಸ್ಸಿನ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿರುವುದು ಗಮನಾರ್ಹ ಸಂಗತಿ.

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಸುರಕ್ಷಿತವಾಗಿ ಇಳಿದ ಬಳಿಕ ಹಲವಾರು ಪಾಕಿಸ್ತಾನಿ ಪತ್ರಿಕೆಗಳು, ಮಾಧ್ಯಮಗಳು ಭಾರತದ ಚಂದ್ರಯಾನದ ಕುರಿತು ಮೊದಲ ಪುಟದ ಸುದ್ದಿಗಳನ್ನು ಪ್ರಕಟಿಸಿವೆ. ಪಾಕಿಸ್ತಾನದ ಮಂತ್ರಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳು ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ ಸಾಧನೆಗಳನ್ನು ಉಲ್ಲೇಖಿಸಿ ಪ್ರಕಟಿಸುತ್ತಿವೆ.

ಯುಎಸ್‌ಎಸ್‌ಆರ್, ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ಭಾರತವು ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ರಾಷ್ಟ್ರವಾಗಿದೆ. ಅದರಲ್ಲಿಯೂ ಪ್ರಮುಖವಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಹತ್ವದ ವಿಚಾರವನ್ನೇ ಪಾಕಿಸ್ತಾನದ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳು ಸ್ಪಷ್ಟವಾಗಿ ಎತ್ತಿ ತೋರಿಸಿವೆ.

2019 ರಲ್ಲಿ ಚಂದ್ರಯಾನ-2 ರ ಕ್ರಾಶ್ ಲ್ಯಾಂಡಿಂಗ್ ನಂತರ ಇಸ್ರೋ ವಿಜ್ಞಾನಿಗಳ ಸತತ ಪರಿಶ್ರಮದ ಫಲವಾಗಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ರಷ್ಯಾದ ಲೂನಾ-25 ಚಂದ್ರನ ಮೇಲ್ಮೈ ಸ್ಪರ್ಶಿಸಲು ವಿಫಲವಾದ ಕೆಲ ದಿನಗಳಲ್ಲೇ ಭಾರತ ಯಶಸ್ವಿಯಾಗಿ ಚಂದ್ರನ ಅಂಗಳದಲ್ಲಿ ಇಳಿದಿದ್ದು ಇಡೀ ಪ್ರಪಂಚವೇ ಭಾರತದ ಸಾಧನೆಯನ್ನು ಕೊಂಡಾಡುತ್ತಿದೆ.

ಪಾಕಿಸ್ತಾನದ ವಿಜ್ಞಾನ ಮತ್ತು ತಂತ್ರಜ್ಞಾನ ಮಾಜಿ ಸಚಿವ ಮತ್ತು ಪಿಟಿಐ ನಾಯಕ ಫವಾದ್ ಹುಸೇನ್ ಇಸ್ರೋದ ಸಾಧನೆಯನ್ನು ಶ್ಲಾಘಿಸಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಲೈವ್‌ಸ್ಟ್ರೀಮ್ ಮಾಡಲು ಪಾಕಿಸ್ತಾನದ ಮಾಧ್ಯಮಗಳನ್ನು ಅವರು ಈ ಹಿಂದೆ ಒತ್ತಾಯಿಸಿದ್ದರು ಮತ್ತು ಭಾರತೀಯ ವಿಜ್ಞಾನ ಸಮುದಾಯ ಮತ್ತು ಬಾಹ್ಯಾಕಾಶ ವಿಜ್ಞಾನಿಗಳಿಗೆ ಇದು ಐತಿಹಾಸಿಕ ದಿನ ಎಂದು ಕರೆದಿದ್ದಾರೆ.

2019 ರಲ್ಲಿ ಚಂದ್ರಯಾನ -2 ಕ್ರ್ಯಾಶ್-ಲ್ಯಾಂಡ್ ಆಗುತ್ತಿದ್ದಂತೆ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯನ್ನು ಅಪಹಾಸ್ಯ ಮಾಡಿದ್ದ ಫವಾದ್ ಹುಸೇನ್, ಇದೀಗ ಚಂದ್ರಯಾನ-3 ಯಶಸ್ವಿಯಾಗುತ್ತಿದ್ದಂತೆ ತಮ್ಮ ಹಿಂದಿನ ನಿಲುವಿನಿಂದ ಯು-ಟರ್ನ್ ಹೊಡೆದಿದ್ದು, ಇಸ್ರೋ ಹಾಗೂ ಭಾರತದ ಸಾಧನೆಯನ್ನು ಮುಕ್ತಕಂಠದಿಂದ ಬಣ್ಣಿಸಿದ್ದಾರೆ.

ಪಾಕಿಸ್ತಾನದ ಮಂತ್ರಿಗಳಷ್ಟೇ ಅಲ್ಲ, ಇಸ್ರೋ ವಿಜ್ಞಾನಿಗಳ ಈ ಸಾಹಸವನ್ನು ಪಾಕಿಸ್ತಾನದ ಸ್ಥಳೀಯರೂ ಮೆಚ್ಚಿಕೊಂಡಿದ್ದಾರೆ. ’ಭಾರತವು ಮುಂದೆ ಸಾಗುತ್ತಿದೆ, ನಾವು ಎಲ್ಲಿಯೂ ಇಲ್ಲ’ ಎಂದು ಇಸ್ಲಾಮಾಬಾದ್ ನಿವಾಸಿ ಅಯೂಬ್ ಅಖ್ತರ್ ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕರಾಚಿಯ ಶಮೀನಾ ಬೇಗಂ, ತಮ್ಮ ಅಭಿಪ್ರಾಯಗಳನ್ನು ಪ್ರತಿಧ್ವನಿಸುತ್ತಾ, ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮೆರವಣಿಗೆ ಮಾಡುತ್ತಿದೆ. ಆದರೆ ಪಾಕಿಸ್ತಾನವು ಹೆಚ್ಚಿನ ಹಣದುಬ್ಬರ ಮತ್ತು ಆಂತರಿಕ ಸಂಘರ್ಷಗಳ ನಡುವೆ ಆಹಾರ ಮತ್ತು ಶಿಕ್ಷಣದಂತಹ ಮೂಲಭೂತ ವಿಷಯಗಳಿಗಾಗಿ ಹೋರಾಡುತ್ತಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಭಾರತದ ಸಾಧನೆಗೆ ಶತ್ರು ರಾಷ್ಟ್ರ ಪಾಕಿಸ್ತಾನದ ಜನರು, ಅಲ್ಲಿನ ಪತ್ರಿಕೆಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಸ್ರೋ ವಿಜ್ಞಾನಿಗಳ ಸಾಧನೆಗೆ ತಲೆಬಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...