alex Certify ಸೋಂಕು ಜಾಸ್ತಿ ಇಲ್ಲದಾಗ ‘ಲಾಕ್’ ಮಾಡಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ‘ಸಡಿಲಿಕೆ’ ಮಾಡಿ ಎಡವಿತಾ ಕೇಂದ್ರ ಸರ್ಕಾರ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋಂಕು ಜಾಸ್ತಿ ಇಲ್ಲದಾಗ ‘ಲಾಕ್’ ಮಾಡಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ‘ಸಡಿಲಿಕೆ’ ಮಾಡಿ ಎಡವಿತಾ ಕೇಂದ್ರ ಸರ್ಕಾರ…?

ಮಾರ್ಚ್ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ದೇಶದಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ್ದ ಕೇಂದ್ರ ಸರ್ಕಾರ ಆರಂಭದಲ್ಲಿ ಭಾರೀ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಇದರಿಂದಾಗಿ ದೇಶದಲ್ಲಿ ಒಂದು ರೀತಿಯ ಕರ್ಫ್ಯೂ ವಾತಾವರಣ ಕಂಡು ಬಂದಿತ್ತು.

ಲಾಕ್ ಡೌನ್ ನಿಂದಾಗಿ ಎಲ್ಲ ಕೆಲಸಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡ ಪರಿಣಾಮ ಅತಂತ್ರವಾಗಿದ್ದ ವಲಸೆ ಕಾರ್ಮಿಕರು ನಡೆದುಕೊಂಡೆ ತಮ್ಮ ತಮ್ಮ ಗ್ರಾಮಗಳಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ನಡೆದ ದುರ್ಘಟನೆಗಳಲ್ಲಿ ನೂರಕ್ಕೂ ಅಧಿಕ ಕಾರ್ಮಿಕರು ಸಾವನ್ನಪ್ಪಿದ್ದರು.

ಇದೀಗ ಕೇಂದ್ರ ಸರ್ಕಾರ ಐದನೇ ಹಂತದ ಲಾಕ್ಡೌನ್ ಜಾರಿಗೊಳಿಸಿದ್ದು, ಬಹಳಷ್ಟು ಸಡಿಲಿಕೆಗಳನ್ನು ಮಾಡಿದೆ. ಹೀಗಾಗಿ ವ್ಯಾಪಾರ ವಹಿವಾಟುಗಳು ಎಂದಿನಂತೆ ಆರಂಭವಾಗಿದ್ದು, ಇದರ ಜೊತೆಜೊತೆಗೆ ಕೊರೊನಾ ಸೋಂಕು ದಿನೇ ದಿನೇ ಏರಿಕೆಯಾಗುವ ಮೂಲಕ ತನ್ನ ಅಟ್ಟಹಾಸ ಮೆರೆಯುತ್ತಿದೆ.

ಕೇಂದ್ರ ಸರ್ಕಾರ ಸೋಂಕು ವ್ಯಾಪಕವಾಗಿಲ್ಲದ ಸಂದರ್ಭದಲ್ಲಿ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಿ ಇದೀಗ ಸೋಂಕು ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸಡಿಲಿಕೆ ಮಾಡಿರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಆರಂಭದಲ್ಲಿ ವಲಸೆ ಕಾರ್ಮಿಕರು ಸೇರಿದಂತೆ ಪರವೂರಿನಲ್ಲಿ ಸಿಲುಕಿದ್ದವರು ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ಕಲ್ಪಿಸಿದ್ದರೆ ನೂರಾರು ಕಾರ್ಮಿಕರು ದುರಂತ ಸಾವನ್ನಪ್ಪುವ ಪ್ರಮೇಯವೇ ಬರುತ್ತಿರಲಿಲ್ಲ. ಅಲ್ಲದೆ ಸೋಂಕು ಕೂಡಾ ಈ ಪ್ರಮಾಣದಲ್ಲಿ ವ್ಯಾಪಿಸುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಕರ್ನಾಟಕದಲ್ಲಿ ಈ ಮೊದಲು ಸೋಂಕು ಪೀಡಿತರ ಸಂಖ್ಯೆ ಅತ್ಯಂತ ಕಡಿಮೆ ಇತ್ತು. ಯಾವಾಗ ಸಡಿಲಿಕೆ ಮಾಡಿ ಹೊರ ರಾಜ್ಯಗಳಿಂದ ಜನ ಬರಲು ಅವಕಾಶವಾಯಿತೋ ಆಗಿನಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ.

ಕಟ್ಟುನಿಟ್ಟಾದ ಲಾಕ್ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಯುಗಾದಿ ಹಿಂದಿನ ದಿನ ಜನತೆ ತಮ್ಮ ತಮ್ಮ ಊರುಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟ ಸಂದರ್ಭದಲ್ಲಿ ಕೊರೊನಾ ಸೋಂಕು ಹಳ್ಳಿಹಳ್ಳಿಗಳಿಗೂ ವ್ಯಾಪಿಸಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಆ ಸಂದರ್ಭದಲ್ಲಿ ಸೋಂಕು ಪೀಡಿತರ ಸಂಖ್ಯೆ ಕಡಿಮೆ ಇದ್ದ ಕಾರಣ ಯಾವುದೇ ತೊಂದರೆ ಆಗಲಿಲ್ಲ. ಇದೇ ರೀತಿ ಕೇಂದ್ರ ಸರ್ಕಾರವೂ ಆರಂಭದಲ್ಲಿ ಜನತೆ ತಮ್ಮ ಊರುಗಳಿಗೆ ತೆರಳಲು ಅವಕಾಶ ಕಲ್ಪಿಸಿದ್ದರೆ ಇಷ್ಟರಮಟ್ಟಿಗೆ ಸೋಂಕು ವ್ಯಾಪಿಸುತ್ತಿರಲಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...