alex Certify ಗಾಂಧಿ ಕೊಂದ ಮನಸ್ಥಿತಿಯೇ ಗೌರಿ, ಪನ್ಸಾರೆ, ಕಲ್ಬುರ್ಗಿ ಹತ್ಯೆ ಮಾಡಿದೆ : ಸಿಎಂ ಸಿದ್ದರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಂಧಿ ಕೊಂದ ಮನಸ್ಥಿತಿಯೇ ಗೌರಿ, ಪನ್ಸಾರೆ, ಕಲ್ಬುರ್ಗಿ ಹತ್ಯೆ ಮಾಡಿದೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅತ್ಯಂತ ಧರ್ಮವಂತರಾಗಿ ಬದುಕುತ್ತಿದ್ದ  ಮಹಾತ್ಮ ಗಾಂಧಿಯನ್ನು ಕೊಂದ ಮನಸ್ಥಿತಿಯೇ ಗೌರಿ ಲಂಕೇಶ್, ದಾಬೋಲ್ಕರ್, ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 ಗೌರಿ ಮೆಮೋರಿಯಲ್ ಟ್ರಸ್ಟ್‌ನವರು ಪತ್ರಕರ್ತೆ ಗೌರಿ ಲಂಕೇಶ್ ಅವರ ಸ್ಮರಣಾರ್ಥ ಟೌನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ “ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ” ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮಹಾತ್ಮಗಾಂಧಿ ಅತ್ಯಂತ ಧರ್ಮನಿರಪೇಕ್ಷತೆಯಿಂದ ಬದುಕನ್ನು ಆಚರಿಸುತ್ತಿದ್ದರು. ಅದನ್ನು ಸಹಿಸಲಾಗದ ಮನಸ್ಥಿತಿಯವರು ಅವರನ್ನು ಕೊಂದು ಹಾಕಿದರು. ಅಂತೆಯೇ ಗೌರಿ ಲಂಕೇಶ್ ಅವರು ಇಂದು ನಮ್ಮ ಜತೆಗಿಲ್ಲ ಆದರೆ ಅವರ ಅದಮ್ಯ ಚೇತನ ನಮ್ಮ ಜತೆಗಿದೆ ಎಂದಿದ್ದಾರೆ.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗೌರಿಯವರು ನನ್ನನ್ನು ಹತ್ತಾರು ಬಾರಿ ಭೇಟಿಯಾಗಿದ್ದರು. ಆದರೆ ಒಂದು ಬಾರಿಯೂ ಪತ್ರಿಕೆಗೆ ಸಹಾಯ ಕೇಳಲು, ತನ್ನ ಕುಟುಂಬಕ್ಕೆ ಸಹಾಯ ಕೇಳಲು, ವೈಯುಕ್ತಿಕ ಕೆಲಸಗಳಿಗಾಗಿ ಬಂದಿರಲಿಲ್ಲ. ಕೇವಲ ಆದಿವಾಸಿಗಳ, ರೈತರ, ಕಾರ್ಮಿಕರ ಸಮಸ್ಯೆಗಳಿಗಾಗಿ ಪರಿಹಾರ ಕೇಳಲು ಬರುತ್ತಿದ್ದರು.  ಗೌರಿಯನ್ನು ಕೊಂದವರು ಹೇಡಿಗಳು. ವೈಚಾರಿಕವಾಗಿ ಆಕೆಯನ್ನು ಎದುರಿಸಲಾಗದವರು ಕೊಂದಿದ್ದಾರೆ ಎಂದರು.

ಮಹಾತ್ಮಗಾಂಧಿ, ಗೌರಿ ಲಂಕೇಶ್ ಮಾತ್ರವಲ್ಲ. ಯಾರ್ಯಾರು ಬಸವಾದಿ ಶರಣರು, ಅಂಬೇಡ್ಕರ್, ಬುದ್ಧನ ವಿಚಾರ ಧಾರೆಗಳನ್ನು ಆಚರಿಸುತ್ತಾ ಜಾತಿ ಅಸಮಾನತೆ, ಧರ್ಮ ಸಂಘರ್ಷವನ್ನು ವಿರೋಧಿಸುತ್ತಾರೋ ಅವರೆಲ್ಲರಿಗೂ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆ. ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಬಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗುವುದು ಎಂದು ಹೇಳಿದ್ದಾರೆ.

ಗೌರಿಯನ್ನು ಕೊಂದ ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಗೌರಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿ, 500ಕ್ಕೂ ಹೆಚ್ವು ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೂಡ ವೇಗವಾಗಿ ನಡೆಯುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ತನಿಖಾ ತಂಡದ ವೃತ್ತಿಪರತೆ ಮತ್ತು ಶ್ರಮ ವ್ಯರ್ಥ ಆಗುವುದಿಲ್ಲ. ಆರೋಪಿಗಳಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎನ್ನುವ ಭರವಸೆ ನನಗಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...