ಸ್ಲಮ್ ಡಾಗ್ ಮಿಲಿಯೇನರ್ ಖ್ಯಾತಿಯ ನಟಿ ಫ್ರಿಡಾ ಪಿಂಟೋ ಈ ವರ್ಷದ ಆರಂಭದಲ್ಲಿ ತಾವು ಗರ್ಭಿಣಿ ಎಂಬ ಸುದ್ದಿಯನ್ನು ಹಂಚಿಕೊಂಡಿದ್ದರು. ಆ ವೇಳೆಯಲ್ಲಿ ತಮ್ಮ ವಿವಾಹದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರದ ಪಿಂಟೋ ಇದೀಗ ತಮ್ಮ ರಹಸ್ಯ ಮದುವೆಯ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಪಿಂಟೋ ತಾವು ಕೋವಿಡ್ 19 ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ನಿಶ್ಚಿತ ವರ ಫೋಟೋಗ್ರಾಫರ್ ಕೋರಿ ಟ್ರಾನ್ ಜೊತೆಯಲ್ಲಿ ಸರಳ ವಿವಾಹವಾಗಿದ್ದಾಗಿ ಹೇಳಿದ್ದಾರೆ.
ದಿ ಕೆಲ್ಲಿ ಕ್ಲರ್ಕ್ ಶೋನಲ್ಲಿ ಭಾಗಿಯಾದ ನಟಿ ಪಿಂಟೋ ತಮ್ಮ ವಿವಾಹದ ಬಗ್ಗೆ ಮಾಹಿತಿ ಹಂಚಿಕೊಂಡ್ರು, ನಾನು ಅತ್ಯಂತ ವಿಜೃಂಭಣೆಯಲ್ಲಿ ಭಾರತೀಯ ವಿವಾಹವಾಗಲು ಇಚ್ಛಿಸಿರಲಿಲ್ಲ. ನನಗೆ ಅತ್ಯಂತ ಸರಳ ವಿವಾಹವಾಗುವ ಇಚ್ಛೆಯಿತ್ತು. ಆದರೆ ಅದಾದ ಬಳಿಕ ಕೋವಿಡ್ ಸಾಂಕ್ರಾಮಿಕ ಆರಂಭವಾಯ್ತು. ಈಗಲೂ ಕೂಡ ಅದು ಮುಂದುವರಿದಿದೆ. ಹೀಗಾಗಿ ನಾವು ಮದುವೆ ಬಗ್ಗೆ ಪ್ಲಾನ್ ಮಾಡುತ್ತಾ ಕೂತರೆ ಜೀವಮಾನವಿಡೀ ಪ್ಲಾನ್ ಮಾಡುತ್ತಲೇ ಇರುತ್ತೇವೆ ಹೊರತು ಮದುವೆ ಆಗೋದಿಲ್ಲ ಎಂದು ಇಬ್ಬರಿಗೂ ಎನಿಸಿತ್ತು.
ಕ್ಯಾಲಿಫೋರ್ನಿಯಾದ ಹೋಂಡಾ ಸೆಂಟರ್ನಲ್ಲಿ ನಾವು ವೈವಾಹಿಕ ಜೀವನಕ್ಕೆ ಕಾಲಿಟ್ಟೆವು. ನನ್ನ ವಿವಾಹದ ಬಗ್ಗೆ ಯೋಚನೆ ಮಾಡಿಯೇ ನನಗೆ ಹೊಟ್ಟೆ ನೋವು ಮಾಡಿಕೊಳ್ಳುವುದು ಬೇಕಾಗಿರಲಿಲ್ಲ. ನಾವು ಬೆಳಗ್ಗೆ ಮದುವೆಯಾದೆವು ಹಾಗೂ ಮನೆಗೆ ಹೋಗಿ ಮಧ್ಯಾಹ್ನ ಒಂದು ಚಿಕ್ಕ ನಿದ್ರೆಯನ್ನೂ ಮಾಡಿದೆವು ಎಂದು ಹೇಳಿದ್ದಾರೆ.