alex Certify ಆರೋಗ್ಯ ಸೇರಿ ಇತರೆ ಇಲಾಖೆ ಸಿಬ್ಬಂದಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ಸೇರಿ ಇತರೆ ಇಲಾಖೆ ಸಿಬ್ಬಂದಿಗೆ ಸಿಎಂ ಯಡಿಯೂರಪ್ಪ ಗುಡ್ ನ್ಯೂಸ್

ಶಿವಮೊಗ್ಗ: ಕೋವಿಡ್-19 ಸೋಂಕು ನಿವಾರಣೆಯಲ್ಲಿ ಕ್ಷೇತ್ರ ಹಾಗೂ ಸಮುದಾಯ ಹಂತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಸಹಾಯಕರು ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿಗೆ ಸುರಕ್ಷತಾ ಕಿಟ್ ಗಳನ್ನು ವಿತರಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ನೀಡಿ, ಸರ್ಕಾರವು ರಾಜ್ಯದಲ್ಲಿ ವ್ಯಾಪಿಸುತ್ತಿರುವ ಕೋವಿಡ್-19 2ನೇ ಅಲೆ ಸೋಂಕು ನಿವಾರಣೆಗೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವುದು ಸ್ವಾಗತಾರ್ಹ ಸಂಗತಿಯಾಗಿದೆ. ಸರ್ಕಾರವು ಸೋಂಕು ನಿವಾರಣೆಗೆ ಕೈಗೊಳ್ಳುತ್ತಿರುವ ಕ್ರಮಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಿ ನೌಕರರು ಅದರಲ್ಲೂ ವಿಶೇಷವಾಗಿ ಪೊಲೀಸ್, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಶಿಕ್ಷಣ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿ ನೌಕರರು ಜೀವದ ಹಂಗು ತೊರೆದು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದ್ದರಿಂದ ಅಂತಹ ನೌಕರರಿಗೂ ಸುರಕ್ಷತಾ ಕಿಟ್ ಗಳನ್ನು ವಿತರಿಸಲು ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದರು.

ಅಲ್ಲದೆ ಕೋವಿಡ್ 19 ಕರ್ತವ್ಯನಿರತ ಅಧಿಕಾರಿ ಹಾಗೂ ಸಿಬ್ಬಂದಿಗಳಲ್ಲಿ ಹಲವರು ಸೋಂಕಿಗೆ ಸಿಲುಕಿ ಮರಣ ಹೊಂದುತ್ತಿರುವ ಪ್ರಕರಣಗಳು ದಿನೇದಿನೇ ವರದಿಯಾಗುತ್ತಿವೆ. ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ನೌಕರರ ಸುರಕ್ಷತೆ ದೃಷ್ಟಿಯಿಂದ ವಿಶೇಷವಾಗಿ ಕ್ಷೇತ್ರ ಹಾಗೂ ಸಮುದಾಯ ಹಂತಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ನೌಕರ ಸಿಬ್ಬಂದಿಗಳಿಗೆ ಸ್ಯಾನಿಟೈಸರ್, ಮಾಸ್ಕ್, ಕೈ ಮತ್ತು ಪಿಪಿಇ ಕಿಟ್ ಹಾಗೂ ಪ್ರಾಥಮಿಕ ಹಂತದ ಔಷಧಿಗಳನ್ನು ನೀಡುವುದು ಅತ್ಯಂತ ಸುರಕ್ಷಿತ ಕ್ರಮ ಎಂದವರು ಸಿಎಂಗೆ ಮನವರಿಕೆ ಮಾಡಿಕೊಟ್ಟಿದ್ದರು.

ಇದೇ ಸಂದರ್ಭದಲ್ಲಿ ಸೋಂಕು ನಿಯಂತ್ರಣ ಕಾರ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಇಲಾಖೆಗಳ ನೌಕರರು ಸೋಂಕಿಗೆ ಸಿಲುಕಿದ ಸಂದರ್ಭದಲ್ಲಿ ಅಂತಹ ಸಿಬ್ಬಂದಿಗಳಿಗೆ ಪ್ರಥಮ ಆದ್ಯತೆಯಲ್ಲಿ ವೆಂಟಿಲೇಟರ್ ಸೌಲಭ್ಯವಿರುವ ಹಾಸಿಗೆಗಳನ್ನು ಕಾಯ್ದಿರಿಸುವಂತೆಯು ಮನವಿ ಮಾಡಲಾಗಿದೆ.

ಈ ಮನವಿಯನ್ನು ಪುರಸ್ಕರಿಸಿ, ನೌಕರರ ಹಿತ-ಸುಖ ಕಾಯುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅಭಿನಂದನೆ ಸಲ್ಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...