alex Certify BIG NEWS: ಭಾರತದಲ್ಲಿ 42 ಲಕ್ಷ ಜನರ ಸಾವು ತಪ್ಪಿಸಿದೆ ಕೊರೊನಾ ಲಸಿಕೆ, ಅಧ್ಯಯನದಲ್ಲಿ ಬಯಲಾಯ್ತು ಸತ್ಯ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಭಾರತದಲ್ಲಿ 42 ಲಕ್ಷ ಜನರ ಸಾವು ತಪ್ಪಿಸಿದೆ ಕೊರೊನಾ ಲಸಿಕೆ, ಅಧ್ಯಯನದಲ್ಲಿ ಬಯಲಾಯ್ತು ಸತ್ಯ..!

COVID-19 ಲಸಿಕೆಯ ಬಗ್ಗೆ ಆರಂಭದಲ್ಲಿ ಸಾಕಷ್ಟು ಪರ – ವಿರೋಧ ಚರ್ಚೆಗಳಾಗಿದ್ದವು. ಇಂದಿಗೂ ಕೆಲವರು ಕೊರೊನಾ ಲಸಿಕೆಯನ್ನು ಪಡೆದೇ ಇಲ್ಲ. ಸಾಧಕ ಬಾಧಕದ ವಾದಗಳೇನೇ ಇದ್ದರೂ ಕೊರೊನಾ ಲಸಿಕೆ ಲಕ್ಷಾಂತರ ಜನರ ಪ್ರಾಣ ಕಾಪಾಡಿದೆ. ಸಂಶೋಧನೆಯಲ್ಲೇ ಈ ಅಂಶ ದೃಢಪಟ್ಟಿದೆ.

2021 ರಲ್ಲಿ ಕೊರೊನಾ ಲಸಿಕೆ ಭಾರತದಲ್ಲಿ 42 ಲಕ್ಷಕ್ಕೂ ಹೆಚ್ಚು ಸಂಭಾವ್ಯ ಸಾವುಗಳನ್ನು ತಡೆಗಟ್ಟಿವೆ ಎಂದು ‘ದಿ ಲ್ಯಾನ್ಸೆಟ್’ ಸಾಂಕ್ರಾಮಿಕ ರೋಗಗಳ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೇಳಿದೆ. ಕೊರೊನಾ ವ್ಯಾಕ್ಸಿನ್‌ ಜಾಗತಿಕವಾಗಿ ಸುಮಾರು 2 ಕೋಟಿ ಜನರ ಸಂಭವನೀಯ ಸಾವನ್ನು ತಪ್ಪಿಸಿರುವುದು ಕೂಡ ಅಧ್ಯಯನದಲ್ಲಿ ಖಚಿತವಾಗಿದೆ.

ಲಸಿಕೆ ಕಾರ್ಯಕ್ರಮ ಆರಂಭವಾದ ಮೊದಲ ವರ್ಷದಲ್ಲಿ 185 ದೇಶಗಳಲ್ಲಿ ಸಂಭವಿಸಬಹುದಾಗಿದ್ದ 31.4 ಮಿಲಿಯನ್‌ ಜನರ ಸಾವಿನಲ್ಲಿ ಲಸಿಕೆ 19.8 ಮಿಲಿಯನ್‌ ಸಾವನ್ನು ತಡೆಗಟ್ಟಿದೆ. 2021ರ ಅಂತ್ಯದ ಪ್ರತಿ ದೇಶದಲ್ಲೂ ಕನಿಷ್ಠ ಶೇ.40ರಷ್ಟು ಜನರು ಎರಡೂ ಲಸಿಕೆಯನ್ನು ಪಡೆದಿದ್ದರೆ ಇನ್ನಷ್ಟು ಜೀವಗಳನ್ನು ಉಳಿಸಬಹುದಿತ್ತು ಎನ್ನುತ್ತಾರೆ ಸಂಶೋಧಕರು.

2020ರ ಡಿಸೆಂಬರ್ 8 ರಿಂದ 2021 ರ ಡಿಸೆಂಬರ್ 8ರ ನಡುವೆ ತಡೆಗಟ್ಟಲಾದ ಸಾವುಗಳ ಸಂಖ್ಯೆಯನ್ನು ಅಧ್ಯಯನವು ಅಂದಾಜಿಸಿದೆ. ಈ ಅವಧಿಯಲ್ಲಿ ಭಾರತದಲ್ಲಿ 42,10,000 ಸಾವುಗಳನ್ನು ವ್ಯಾಕ್ಸಿನೇಷನ್ ಮೂಲಕ ತಡೆಯಲಾಗಿದೆ. ಕೊರೊನಾ ಲಸಿಕೆಯ ಗಮನಾರ್ಹ ಪರಿಣಾಮಗಳಿಗೆ ಈ ಅಂಕಿ-ಅಂಶಗಳೇ ಸಾಕ್ಷಿಯಾಗಿದೆ. ಕೊರೊನಾ ವೈರಸ್‌ನಿಂದ ಭಾರತದಲ್ಲಿ 56,29,000 ಸಾವು ಸಂಭವಿಸಿರಬಹುದು ಎಂಬ ಅಂದಾಜಿದೆ. ಇದು ಇಲ್ಲಿಯವರೆಗೆ ವರದಿಯಾದ 5,24,941 ಸಾವುಗಳ ಅಧಿಕೃತ ಅಂಕಿ ಅಂಶಕ್ಕಿಂತ 10 ಪಟ್ಟು ಹೆಚ್ಚಾಗಿದೆ.

ಹೆಚ್ಚುವರಿ ಮರಣ ಮತ್ತು ಸೆರೋಪ್ರೆವೆಲೆನ್ಸ್ ಸಮೀಕ್ಷೆಗಳ ವರದಿಗಳ ಆಧಾರದ ಮೇಲೆ COVID-19 ಸಾವಿನ ಸಂಖ್ಯೆಯನ್ನು ಈ ತಂಡ ತನಿಖೆ ಮಾಡಿದೆ.  ದಿ ಎಕನಾಮಿಸ್ಟ್‌ನ ಅಂದಾಜಿನ ಪ್ರಕಾರ, ಮೇ 2021 ರ ಆರಂಭದ ವೇಳೆಗೆ ಭಾರತದಲ್ಲಿ COVID-19 ನಿಂದ 2.3 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಸತ್ತವರು 2,00,000 ಮಂದಿ ಮಾತ್ರ. WHO ಕೂಡ ಭಾರತಲ್ಲಿ 4.7 ಮಿಲಿಯನ್ ಕೋವಿಡ್ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಿತ್ತು. ಆದ್ರೆ ಭಾರತ ಸರ್ಕಾರ ಇದನ್ನು ನಿರಾಕರಿಸಿದೆ.

ಲಸಿಕೆಗಳನ್ನು ಪರಿಚಯಿಸಿದ ನಂತರದ ಮೊದಲ ವರ್ಷದಲ್ಲಿ ಸುಮಾರು 20 ಮಿಲಿಯನ್ ಸಾವುಗಳನ್ನು ತಡೆಗಟ್ಟಲಾಗಿದೆ. ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು COVID-19 ಲಸಿಕೆಯ ಕನಿಷ್ಠ ಒಂದು ಡೋಸ್ ಅನ್ನು ಪಡೆದಿದ್ದಾರೆ. ಮೊದಲ ಲಸಿಕೆ ನೀಡಿದ ನಂತರವೂ ಜಾಗತಿಕವಾಗಿ 3.5 ಮಿಲಿಯನ್‌ಗಿಂತಲೂ ಹೆಚ್ಚು COVID-19 ಸಾವುಗಳು ವರದಿಯಾಗಿವೆ.

ಜಾಗತಿಕ ವ್ಯಾಕ್ಸಿನೇಷನ್ ಕಾರ್ಯಕ್ರಮಗಳ ಪರಿಣಾಮವನ್ನು ಅಂದಾಜು ಮಾಡಲು ಸಂಶೋಧಕರು ಡಿಸೆಂಬರ್ 8, 2020 ಮತ್ತು ಡಿಸೆಂಬರ್ 8, 2021 ರ ನಡುವೆ ಅಧಿಕೃತವಾಗಿ ದಾಖಲಾದ COVID-19 ಸಾವುಗಳಿಗೆ ದೇಶ-ಮಟ್ಟದ ಡೇಟಾವನ್ನು ಬಳಸಿಕೊಂಡಿದ್ದಾರೆ. ಚೀನಾವನ್ನು ಈ ವಿಶ್ಲೇಷಣೆಯಲ್ಲಿ ಸೇರಿಸಲಾಗಿಲ್ಲ. ಚೀನಾದ ಭಾರೀ ಜನಸಂಖ್ಯೆ ಮತ್ತು ಅತ್ಯಂತ ಕಟ್ಟುನಿಟ್ಟಾದ ಲಾಕ್‌ಡೌನ್ ಕ್ರಮಗಳು ಸಂಶೋಧನೆಗಳನ್ನು ತಿರುಚಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಲಸಿಕೆ ಇಲ್ಲದೇ ಹೋದಲ್ಲಿ ಇನ್ನೂ 18.1 ಮಿಲಿಯನ್ ಸಾವುಗಳು ಸಂಭವಿಸುತ್ತಿದ್ದವು. ಕೊರೊನಾ ಲಸಿಕೆಯಿಂದಾಗಿ ಶೇ.63ರಷ್ಟು ಸಂಭಾವ್ಯ ಪ್ರಾಣಾಪಾಯ ತಪ್ಪಿದೆ. ಜಾಗತಿಕವಾಗಿ COVID-19 ಸಾವುಗಳನ್ನು ಕಡಿಮೆ ಮಾಡುವಲ್ಲಿ ಲಸಿಕೆಗಳು ಹೊಂದಿರುವ ಅಗಾಧ ಪ್ರಯೋಜನವನ್ನು ಈ ಅಧ್ಯಯನ ಬಹಿರಂಗಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...