alex Certify BIG NEWS: ಅಮೆರಿಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಬೆಚ್ಚಿಬೀಳಿಸುವಂತಿದೆ CDPHR ಅಧ್ಯಯನದಲ್ಲಿ ಬಹಿರಂಗವಾಗಿರುವ ಸಂಗತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಮೆರಿಕಾದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ; ಬೆಚ್ಚಿಬೀಳಿಸುವಂತಿದೆ CDPHR ಅಧ್ಯಯನದಲ್ಲಿ ಬಹಿರಂಗವಾಗಿರುವ ಸಂಗತಿ

ಅಮೆರಿಕಾ ಹೆಸರಿಗೆ ಮಾತ್ರ ವಿಶ್ವದ ದೊಡ್ಡಣ್ಣ ಎನಿಸಿಕೊಂಡಿದೆ. ಆದರೆ ಅಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ, ವರ್ಣಬೇಧ ನೀತಿ, ಲೈಂಗಿಕ ದೌರ್ಜನ್ಯ, ಲಿಂಗ ತಾರತಮ್ಯ ಇವುಗಳಲ್ಲಿಯೂ ಅಭಿವೃದ್ದಿ ಹೊಂದಿದ ರಾಷ್ಟ್ರವಾಗಿರುವ ಅಮೆರಿಕಾ ಮುಂದಿದೆ. ಇಂತದೊಂದು ಆಘಾತಕಾರಿ ಸಂಗತಿ ಸೆಂಟರ್ ಫಾರ್ ಡೆಮಾಕ್ರಸಿ, ಪ್ಲುರಲಿಸಂ ಮತ್ತು ಹ್ಯೂಮನ್ ರೈಟ್ಸ್ (CDPHR) ನಡೆಸಿದ ವಿಶ್ಲೇಷಣಾತ್ಮಕ ಅಧ್ಯಯನದಲ್ಲಿ ಬಹಿರಂಗವಾಗಿದೆ.

CDPHR ಅಧ್ಯಯನದ ಪ್ರಕಾರ ಈ ಹಿಂದಿನಿಂದಲೂ ಜಾರಿಯಲ್ಲಿದ್ದ ವರ್ಣಬೇಧ ನೀತಿ ಈಗ ಮತ್ತೆ ಹೆಚ್ಚಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಬಿಳಿಯನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ 10 ಮಂದಿ ಕರಿಯರು ಮೃತಪಟ್ಟಿದ್ದರು. ಇದಲ್ಲದೆ ಇನ್ನೂ ಬೆಳಕಿಗೆ ಬಾರದಿರುವ ಆನೇಕ ಕಿರುಕುಳದ ಪ್ರಕಣಗಳು ನಡೆದಿದ್ದು, ಸಾಮಾಜಿಕ ಕಾರ್ಯಕರ್ತರು ಈ ಬೆಳವಣಿಗೆಗಳ ಕುರಿತು ಕಳವಳ ವ್ಯಕ್ತಪಡಿಸಿದ್ದರು. ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ ಕಪ್ಪು ವರ್ಣದವರಿಗೆ ಉನ್ನತ ಹುದ್ದೆ ಸಿಗದಂತೆ ಮಾಡಲಾಗುತ್ತಿದೆ ಎಂಬುದೂ ಸಹ ಕಂಡು ಬಂದಿದೆ.

ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಅದರಲ್ಲೂ ವಿಶೇಷವಾಗಿ ಜನಾಂಗೀಯ, ಧಾರ್ಮಿಕ ಮತ್ತು ಲಿಂಗ ತಾರತಮ್ಯದ ಘಟನೆಗಳನ್ನು CDPHR ತನ್ನ ಅಧ್ಯಯನದಲ್ಲಿ ಸಮಗ್ರವಾಗಿ ವಿಶ್ಲೇಷಣೆಗೆ ಒಳಪಡಿಸಿದ್ದು, ವಿಶ್ವ ಯುದ್ದ 2 ರ ಬಳಿಕ ಮಾನವ ಹಕ್ಕುಗಳ ರಕ್ಷಣೆಗಾಗಿ ವಿಶ್ವ ಸಂಸ್ಥೆ ಮಾಡಿರುವ ನಿಯಮಗಳನ್ನು ಅಮೆರಿಕಾ ಯಾವ ರೀತಿ ಪಾಲಿಸುತ್ತಿದೆ ಎಂಬುದನ್ನೂ ಪರಿಶೀಲಿಸಿದೆ.

ಅಲ್ಲದೇ, ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಅಮೆರಿಕಾ ಸಂಬಂಧ ಯಾವ ರೀತಿ ಇದೆ ಮತ್ತು ಇದು ಪ್ರಪಂಚದ ಮೇಲೆ ಬೀರುವ ಪ್ರಭಾವ ಹಾಗೂ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಲ್ಲಿನ ಜನರ ಬದುಕುವ ಹಕ್ಕನ್ನು ಅಮೆರಿಕಾ ಸರ್ಕಾರ ಹೇಗೆ ರಕ್ಷಿಸಿದೆ ಎಂಬುದನ್ನೂ ಕೂಡಾ ಅಧ್ಯಯನದಲ್ಲಿ ಕೂಲಂಕುಷವಾಗಿ ಪರಿಶೀಲಿಸಲಾಗಿದ್ದು, ಇದರ ವರದಿಯನ್ನು ಈಗ ಬಿಡುಗಡೆಗೊಳಿಸಲಾಗಿದೆ. ಈ ಅಧ್ಯಯನ ವರದಿ ಅಮೆರಿಕಾದ ಹುಳುಕುಗಳನ್ನು  ವಿಶ್ವದ ಮುಂದೆ ತೆರೆದಿಟ್ಟಿದೆ.

ಆಘಾತಕಾರಿ ಸಂಗತಿಯೆಂದರೆ ಅಮೆರಿಕಾದ ಪ್ರತಿ ಐವರು ಮಹಿಳೆಯರ ಪೈಕಿ ಓರ್ವ ಮಹಿಳೆ ಲೈಂಗಿಕ ದೌರ್ಜನ್ಯಕ್ಕೊಳಗಾಗಿರುವುದು ಅಧ್ಯಯನದಲ್ಲಿ ಕಂಡು ಬಂದಿದೆ. ಇಂತಹ ದೌರ್ಜನ್ಯ ಪ್ರಕರಣ ಆ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಅಧ್ಯಕ್ಷರಿಂದಲೂ ನಡೆದಿರುವುದು ದುರದೃಷ್ಟಕರ ಸಂಗತಿಯಾಗಿದೆ. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಕುರಿತು ಮಾತನಾಡದಂತೆ ತಡೆಯಲಾಗುತ್ತಿದೆ. ವೇತನದಲ್ಲಿಯೂ ಮಹಿಳೆಯರಿಗೆ ತಾರತಮ್ಯ ಮಾಡಲಾಗುತ್ತಿದ್ದು, ಬಹುತೇಕ ಕಂಪನಿಗಳ ಮುಖ್ಯಸ್ಥರು ಪುರುಷರೇ ಆಗಿದ್ದಾರೆ. ಮಹಿಳೆಯರು ಪುರುಷರಿಗಿಂತ ಶೇ.25 ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ.

ಮಕ್ಕಳ ಮೇಲೂ ದೌರ್ಜನ್ಯ ನಡೆಯುತ್ತಿದ್ದು, 7-12 ನೇ ತರಗತಿಯ 1965 ವಿದ್ಯಾರ್ಥಿಗಳ ಅಧ್ಯಯನದ ಪ್ರಕಾರ, ಶೇ.48 ವಿದ್ಯಾರ್ಥಿಗಳು ಲೈಂಗಿಕ ಕಿರುಕುಳವನ್ನು ಅನುಭವಿಸುತ್ತಿದ್ದಾರೆಂದು ವರದಿ ಮಾಡಿದ್ದಾರೆ. ಶಾಲೆಗಳಲ್ಲಿ ಅತ್ಯಾಚಾರ ಶೇಕಡಾ 19 ರಷ್ಟಿದೆ ಎಂಬ ಸಂಗತಿಯೂ ಬಯಲಾಗಿದೆ.

ಇನ್ನು ಧಾರ್ಮಿಕ ಸ್ವಾತಂತ್ಯದ ಆಚರಣೆಯಲ್ಲೂ ಅಮೆರಿಕಾದಲ್ಲಿ ಕಾನೂನು ಉಲ್ಲಂಘನೆಯಾಗಿದ್ದು, ಹಿಂದೂ, ಸಿಖ್‌ ಸಮುದಾಯದವರ ಮೇಲೆ ಹಲ್ಲೆಗಳು ನಡೆದಿದೆ. ಅಮೆರಿಕಾದಲ್ಲಿ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ್ಯವಿದೆ ಎಂದು ಅಲ್ಲಿನ ಪ್ರಮುಖ ರಾಜಕೀಯ ಪಕ್ಷಗಳಾದ ಡೆಮಾಕ್ರಾಟ್ ಮತ್ತು ರಿಪಬ್ಲಿಕನ್‌ ಹೇಳುತ್ತಾದರೂ ಉಲ್ಲಂಘನೆಯನ್ನು ತಡೆಯಲು ಯಾವುದೇ ನೀತಿಗಳನ್ನು ರೂಪಿಸಿಲ್ಲವೆಂದು ಅಧ್ಯಯನ ಬಹಿರಂಗಪಡಿಸಿದೆ.

ಅಲ್ಲದೇ ಅಮೆರಿಕಾ ಇತರೆ ದೇಶಗಳ ವಿಚಾರದಲ್ಲೂ ಮೂಗು ತೂರಿಸಿದ್ದು, ಇದರಿಂದಾಗಿ ಇರಾಕ್‌ನಲ್ಲಿ ಸುಮಾರು 92 ಮಿಲಿಯನ್ ಮಂದಿ, ಅಫ್ಘಾನಿಸ್ತಾನದಲ್ಲಿ 59 ಲಕ್ಷ, ಸೊಮಾಲಿಯಾದಲ್ಲಿ 43 ಲಕ್ಷ, ಯೆಮನ್‌ನಲ್ಲಿ 46 ಲಕ್ಷ, ಲಿಬಿಯಾದಲ್ಲಿ 12 ಲಕ್ಷ ಮತ್ತು ಸಿರಿಯಾದಲ್ಲಿ 71 ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ ಎಂಬ ಸಂಗತಿಯನ್ನು ವರದಿ ಉಲ್ಲೇಖಿಸಿದೆ. ಅಮೆರಿಕಾ ನೇತೃತ್ವದಲ್ಲಿ ನಡೆದ ಅಫ್ಘಾನಿಸ್ತಾನ ಯುದ್ಧದಲ್ಲಿ 2,41,000 ಮಂದಿ ಮೃತಪಟ್ಟಿದ್ದು, ಇವರಲ್ಲಿ 71,000 ನಾಗರಿಕರು ಎಂಬುದರತ್ತ ವರದಿ ಬೊಟ್ಟು ಮಾಡಿದೆ.

ಇನ್ನು ಇಡಿ ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ್ದ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕಾ ಯಾವ ರೀತಿ ವರ್ತಿಸಿದೆ ಎಂಬುದನ್ನು ಜಗತ್ತು ಗಮನಿಸಿದೆ. ಆಗಿನ ಅಧ್ಯಕ್ಷ ಟ್ರಂಪ್‌, ಕೊರೊನಾವನ್ನು ಉಡಾಫೆ ಮಾಡಿದ ಕಾರಣ ಲಕ್ಷಾಂತರ ಮಂದಿಯ ಸಾವು – ನೋವಿಗೆ ಅಮೆರಿಕಾ ಸಾಕ್ಷಿಯಾಯಿತು. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಹೊಂದಿದ್ದರೂ ಸಹ ತನ್ನ ನಾಗರಿಕರ ರಕ್ಷಣೆಗೆ ಅಲ್ಲಿನ ಸರ್ಕಾರ ಸೂಕ್ತ ಮುಂಜಾಗ್ರತೆ ವಹಿಸಲಿಲ್ಲ ಎಂಬುದನ್ನೂ ವರದಿ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...