alex Certify ಅನಗತ್ಯವಾಗಿ ರಸ್ತೆಗಿಳಿದ ವಾಹನ ವಶಕ್ಕೆ: ಕರ್ಫ್ಯೂಗೆ ಸಹಕರಿಸಿದ ಜನ, ಪೊಲೀಸರ ಕಾರ್ಯಕ್ಕೆ ಸಚಿವರ ಮೆಚ್ಚುಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನಗತ್ಯವಾಗಿ ರಸ್ತೆಗಿಳಿದ ವಾಹನ ವಶಕ್ಕೆ: ಕರ್ಫ್ಯೂಗೆ ಸಹಕರಿಸಿದ ಜನ, ಪೊಲೀಸರ ಕಾರ್ಯಕ್ಕೆ ಸಚಿವರ ಮೆಚ್ಚುಗೆ

ಬೆಂಗಳೂರು: ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಮಾಡಿ ವೀಕೆಂಡ್ ಕರ್ಫ್ಯೂಗಾಗಿ ಜಾರಿಗೊಳಿಸಲಾಗಿರುವ ಬಿಗಿ ಕ್ರಮಗಳನ್ನು ಪರಿಶೀಲಿಸಿದರು.

ರಾಜ್ಯಾದ್ಯಂತ ವೀಕೆಂಡ್ ಕರ್ಫ್ಯೂ ಗೆ ಸಹಕರಿಸಿದ್ದಕ್ಕೆ ಜನ ಸಾಮಾನ್ಯರಿಗೆ ಹಾಗೂ ವ್ಯಾಪಾರಸ್ಥರಿಗೆ ಧನ್ಯವಾದ ಅರ್ಪಿಸಿದರು. ಸಚಿವರು ಶನಿವಾರ ಮಧ್ಯಾಹ್ನ ತಮ್ಮ ನಿವಾಸದಿಂದ ವೀಕೆಂಡ್ ಕರ್ಫ್ಯೂ ವ್ಯವಸ್ಥೆಗಳ ಕುರಿತು ಪರಿಶೀಲನೆ ಆರಂಭಿಸಿದರು. ಚಾಲುಕ್ಯ ಸರ್ಕಲ್, ಕೆ ಆರ್ ಸರ್ಕಲ್ಗಳಿಗೆ ಭೇಟಿ ನೀಡಿದರು. ನಂತರ ಸದಾ ಜನಜಂಗುಳಿಯಿಂದ ಕೂಡಿರುವ ಕೆಆರ್ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

ಕೆಆರ್ ಮಾರುಕಟ್ಟೆ ಪ್ರಾಂಗಣವನ್ನು ಪರಿಶೀಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಮಾಸ್ಕ್ ಧರಿಸದೆ ಇರುವುದನ್ನು ಸಚಿವ ಬೊಮ್ಮಾಯಿ ಗಮನಿಸಿ  ಮಾಸ್ಕ್ ಯಾಕೆ ಧರಿಸಿಲ್ಲ ಎಂದು ಪ್ರಶ್ನಿಸಿ ತಮ್ಮ ಆಪ್ತ ಸಹಾಯಕರ ಬಳಿ ಇದ್ದ ಮಾಸ್ಕ್ ಅನ್ನು ನೀಡಿದರು. ಮಾಸ್ಕ್ ಬಳಕೆ ಮಾಡಿ ಕೊರೊನಾದಿಂದ ದೂರ ಇರುವಂತೆ ಆ ಮಹಿಳೆಗೆ ತಿಳಿಹೇಳಿದರು.

ಪೊಲೀಸರಿಗೆ ಕೋವಿಡ್ ಕೇರ್ ಸೆಂಟರ್

ನಂತರ ಆಡುಗೋಡಿಯ ಮಂಗಳ ಕಲ್ಯಾಣ ಮಂಟಪದಲ್ಲಿ ಪೊಲೀಸರಿಗಾಗಿಯೇ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದರು. ಕೊರೊನಾ ಸೋಂಕು ತಗುಲಿದ ಪೊಲೀಸರಿಗೆ ಇಲ್ಲಿ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ. ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಲಾಗಿರುವ ಹಾಸಿಗೆ, ಔಷಧಿ ಮತ್ತು ಇತರೆ ವೈದ್ಯಕೀಯ ಸೌಲಭ್ಯಗಳನ್ನು ಸಚಿವರು ಪರಿಶೀಲಿಸಿದರು.

ಧನ್ಯವಾದ ಅರ್ಪಿಸಿದ ಸಚಿವರು

ನಗರ ಪ್ರದಕ್ಷಿಣೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಂದು ಮುಂಜಾನೆ 10 ಗಂಟೆಯವರೆಗೆ ಜೀವನಾವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ರಾಜ್ಯದ ಜನ ಮತ್ತು ವ್ಯಾಪಾರಸ್ಥರು ವೀಕೆಂಡ್ ಕರ್ಫ್ಯೂಗೆ ಸಹಕರಿಸಿದ್ದಾರೆ. ನಾಳೆಯೂ ಇದೇ ರೀತಿಯ ಸಹಕಾರ ನೀಡುವಂತೆ ಕೋರುತ್ತೇನೆ. ಕರ್ಫ್ಯೂ ಸಂದರ್ಭದಲ್ಲಿ ನಮ್ಮ ಪೊಲೀಸರು ಸಹ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೆಆರ್ ಮಾರುಕಟ್ಟೆ ಒಂದು ಸೂಕ್ಷ್ಮ ಪ್ರದೇಶ. ಒಂದು ಕಡೆ ವಿಕ್ಟೋರಿಯಾ ಆಸ್ಪತ್ರೆ ಇದೆ ಮತ್ತೊಂದು ಕಡೆ ಕೆಆರ್ ಮಾರುಕಟ್ಟೆ ಇದೆ. ಪ್ರತಿದಿನ ಮುಂಜಾನೆ ಇಲ್ಲಿಗೆ ಜನರು ಮಾರಾಟ ಮತ್ತು ಖರೀದಿಗಾಗಿ ಬರುತ್ತಾರೆ.  ಅವರೆಲ್ಲರನ್ನು ನಮ್ಮ ಪೊಲೀಸರು ಮನವೊಲಿಸಿದ್ದಾರೆ. ಸರಿಯಾಗಿ 10 ಗಂಟೆಯಿಂದ ಕರ್ಫ್ಯೂ ಜಾರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನಲ್ಲಿ ಭದ್ರತೆಗಾಗಿ ಒಟ್ಟು 8 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿನ ಶೇಕಡ 50 ರಷ್ಟು ಹಾಸಿಗೆಗಳನ್ನು ಪಡೆಯಲು ಡಿಸಿಪಿ ಮತ್ತು ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಲಾಗಿತ್ತು. ಆ ತಂಡಗಳು ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಹಾಸಿಗೆಗಳನ್ನು ಸರ್ಕಾರದ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿವೆ. ವಿನಾಕಾರಣ ರಸ್ತೆಗಿಳಿಯುವ ಜನರನ್ನು ನಿಯಂತ್ರಿಸಿ ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ಕರ್ಫ್ಯೂ ನಿಯಮ ಉಲ್ಲಂಘಿಸಿ ರಸ್ತೆಗಿಳಿಯುವ ಕಿಡಿಗೇಡಿಗಳ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದರು.

ಸೋಮವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೋವಿಡ್ ಬಗ್ಗೆ ಖಂಡಿತವಾಗಿಯೂ ಚರ್ಚೆ ಆಗುತ್ತೆ. ವೀಕೆಂಡ್ ಕರ್ಫ್ಯೂ ಬಗ್ಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಸಮಾಲೋಚನೆ ನಡೆಯುತ್ತದೆ. ಲಸಿಕೆ ನೀತಿ ಬಗ್ಗೆ ಸಮಾಲೋಚನೆ ನಡೆಸಿ ಆ ನೀತಿಗೆ ಅಂತಿಮ ಸ್ವರೂಪ ನೀಡಲಾಗುತ್ತದೆ ಎಂದರು.

ಶಿವಾಜಿನಗರ ಕ್ಕೆ ಭೇಟಿ

ಚಾಮರಾಜಪೇಟೆ, ಸೌತ್ ಎಂಡ್ ಸರ್ಕಲ್, ಕೋರಮಂಗಲ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸಚಿವ ಬೊಮ್ಮಾಯಿ ಶಿವಾಜಿನಗರದಲ್ಲಿ ಒಂದು ಸುತ್ತು ಹಾಕಿದರು. ಕಮರ್ಷಿಯಲ್ ಸ್ಟೀಟ್ ನಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಕರ್ಫ್ಯೂ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ನಗರ ಪ್ರದಕ್ಷಿಣೆ ನಡೆಸಿ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಈ  ಬಗ್ಗೆ ವರದಿ ಸಲ್ಲಿಸಿದರು. ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಯಶಸ್ವಿಯಾಗಿದೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದರು.

ನಗರ ಪ್ರದಕ್ಷಿಣೆ ಸಂದರ್ಭದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಕಮಲಪಂತ್, ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಉಪಸ್ಥಿತರಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...