alex Certify ಬಹುಕೋಟಿ ʼಮೇವು ಹಗರಣʼದ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಹುಕೋಟಿ ʼಮೇವು ಹಗರಣʼದ ಕುರಿತು ಇಲ್ಲಿದೆ ಸಂಕ್ಷಿಪ್ತ ಮಾಹಿತಿ

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು 1995-1996ರಲ್ಲಿ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ.ಗಳನ್ನು ವಂಚಿಸಿದ ಪ್ರಕರಣದಲ್ಲಿ ತಪ್ಪಿತಸ್ಥರೆಂದು ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.

ಐದನೇ ಮೇವು ಹಗರಣ ಪ್ರಕರಣದಲ್ಲಿ ವಿಶೇಷ ನ್ಯಾಯಾಧೀಶ ಎಸ್‌ಕೆ ಶಶಿ ಯಾದವ್ ಮತ್ತು ಇತರ 74 ಆರೋಪಿಗಳನ್ನು ದೋಷಿ ಎಂದು ಘೋಷಿಸಿದರು ಮತ್ತು 24 ಜನರನ್ನು ಖುಲಾಸೆಗೊಳಿಸಿದರು. ಮೇವು ಹಗರಣದ ಹಿಂದಿನ ನಾಲ್ಕು ಪ್ರಕರಣಗಳಲ್ಲಿ ಲಾಲು ಪ್ರಸಾದ್ ಯಾದವ್ ಈಗಾಗಲೇ ದೋಷಿಯಾಗಿದ್ದಾರೆ. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಏನಿದು ಪ್ರಕರಣ ?

1990 ರ ದಶಕದ ಮಧ್ಯಭಾಗದಲ್ಲಿ ದೇಶವನ್ನು ಬೆಚ್ಚಿಬೀಳಿಸಿದ ಮೇವು ಹಗರಣದಲ್ಲಿ ರಾಂಚಿಯ ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂಪಾಯಿಗಳನ್ನು ಅಕ್ರಮವಾಗಿ ಹಿಂತೆಗೆದುಕೊಂಡ ಹಗರಣವಾಗಿದೆ. ಜನವರಿ 27, 1996 ರಂದು ಬಿಹಾರದ ಚೈಬಾಸಾದಲ್ಲಿ (ಈಗ ಜಾರ್ಖಂಡ್‌ನಲ್ಲಿದೆ) ಪಶುಸಂಗೋಪನಾ ಇಲಾಖೆಯ ಕಚೇರಿಗಳ ಮೇಲೆ ದಾಳಿ ನಡೆಸಿದಾಗ 950 ಕೋಟಿ ರೂ.ಗಳ ದುರುಪಯೋಗವು ಬೆಳಕಿಗೆ ಬಂದಿತ್ತು. ಈ ಪ್ರಕರಣವು ಆಗಿನ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತು, ಇದು ಇಂದಿನವರೆಗೂ ಮುಂದುವರಿದಿರುವ ಸಿಬಿಐ ಜೊತೆಗಿನ ಅತ್ಯಂತ ದೀರ್ಘಕಾಲದ ಪ್ರಕರಣವಾಗಿದೆ.

ಊಹಿಸಲಾಗದಷ್ಟು ದೊಡ್ಡ ಪ್ರಮಾಣದಲ್ಲಿ ಸರ್ಕಾರದ ಖಜಾನೆ ಹಣವನ್ನು ದುರುಪಯೋಗಪಡಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ತಂದಿತು. 1980 ಮತ್ತು 1990 ರ ದಶಕಗಳಲ್ಲಿ ಬಿಹಾರದಲ್ಲಿ ಜಾನುವಾರುಗಳ ಮೇವು ಖರೀದಿ ಮತ್ತು ಪೂರೈಕೆಗಾಗಿ ಅಸ್ತಿತ್ವದಲ್ಲಿಲ್ಲದ ಕಂಪನಿಗಳಿಗೆ ದುರುಪಯೋಗಪಡಿಸಿಕೊಂಡ ಹಣವನ್ನು ನೀಡಲಾಗಿತ್ತು. ಈ ಹಗರಣವು 1996ರಲ್ಲಿ ಬೆಳಕಿಗೆ ಬಂದ ವೇಳೆಯಲ್ಲಿಯೂ ವಂಚನೆ ನಡೆಯುತ್ತಲೇ ಇತ್ತು. ಸಾರ್ವಜನಿಕ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪದ ಅಡಿಯಲ್ಲಿ ಸಾಕಷ್ಟು ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಹಾಗೂ ಉದ್ಯಮಿಗಳ ಮುಖವಾಡ ಬಯಲಾಗಿತ್ತು.

ಉಳಿದ ನಾಲ್ಕು ಹಗರಣಗಳು ಯಾವುವು ?

ಲಾಲು ಯಾದವ್‌ಗೆ ಶಿಕ್ಷೆಯಾದ ಐದನೇ ಹಗರಣ ಇದಾಗಿದೆ. ಇತರ ನಾಲ್ಕು ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದು, ಈಗಾಗಲೇ ಶಿಕ್ಷೆಯ ಅರ್ಧದಷ್ಟು ಶಿಕ್ಷೆಯ ಆಧಾರದ ಮೇಲೆ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಚೈಬಾಸಾ ಖಜಾನೆಯಿಂದ ಅಕ್ರಮವಾಗಿ ಹಣವನ್ನು ಹಿಂತೆಗೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು 2013 ರಲ್ಲಿ ಮೊದಲ ಮೇವು ಹಗರಣದ ಪ್ರಕರಣದಲ್ಲಿ ದೋಷಿ ಮತ್ತು ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದರು. ಇದು ಅವರ ರಾಜಕೀಯ ವೃತ್ತಿಜೀವನದ ಮೇಲೆ ಭಾರಿ ದೊಡ್ಡ ಹೊಡೆತವನ್ನೇ ನೀಡಿತ್ತು, ಏಕೆಂದರೆ ಇದು ಅವರನ್ನು 11 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಿತು.

ಡಿಸೆಂಬರ್ 2017 ರಲ್ಲಿ ಮುಂದಿನ ಅಪರಾಧ ಸಾಬೀತಾಗಿತ್ತು. 1990 ಮತ್ತು 1994 ರ ನಡುವೆ ದಿಯೋಘರ್ ಜಿಲ್ಲಾ ಖಜಾನೆಯಿಂದ 89.27 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡ ಎರಡನೇ ಮೇವು ಹಗರಣದ ಪ್ರಕರಣದಲ್ಲಿ ಲಾಲೂಗೆ ಮೂರೂವರೆ ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡ ವಿಧಿಸಲಾಯಿತು.

1992-93ರಲ್ಲಿ ಚೈಬಾಸಾ ಖಜಾನೆಯಿಂದ 33.67 ಕೋಟಿ ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ 2018ರ ಜನವರಿ ತಿಂಗಳಲ್ಲಿ ಮೇವು ಹಗರಣ ಪ್ರಕರಣದಲ್ಲಿ ಲಾಲೂ ಪ್ರಸಾದ್​ ಯಾದವ್​​ಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 2018ರ ಮೇ ತಿಂಗಳಲ್ಲಿ ಲಾಲೂ ಪ್ರಸಾದ್​ ಯಾದವ್​ಗೆ ನಾಲ್ಕನೇ ಮೇವು ಹಗರಣದಲ್ಲಿ ಶಿಕ್ಷೆ ವಿಧಿಸಲಾಗಿದೆ. 1990 ರ ದಶಕದ ಆರಂಭದಲ್ಲಿ ದುಮ್ಕಾ ಖಜಾನೆಯಿಂದ 3.13 ಕೋಟಿ ರೂಪಾಯಿಗಳ ದುರುಪಯೋಗಕ್ಕೆ ಸಂಬಂಧಿಸಿದೆ. ಲಾಲೂಗೆ 14 ವರ್ಷ ಜೈಲು ಶಿಕ್ಷೆ ಹಾಗೂ 60 ಲಕ್ಷ ರೂ. ದಂಡ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...