alex Certify ನೇಪಾಳದಲ್ಲಿ ಆಲೂಗಡ್ಡೆ, ಈರುಳ್ಳಿಗಾಗಿ ಹಾಹಾಕಾರ, ಊಟದ ತಟ್ಟೆಯಲ್ಲಿ ತರಕಾರಿಗಳೇ ಕಣ್ಮರೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೇಪಾಳದಲ್ಲಿ ಆಲೂಗಡ್ಡೆ, ಈರುಳ್ಳಿಗಾಗಿ ಹಾಹಾಕಾರ, ಊಟದ ತಟ್ಟೆಯಲ್ಲಿ ತರಕಾರಿಗಳೇ ಕಣ್ಮರೆ…..!

ನೇಪಾಳದಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆಗಾಗಿ ಹಾಹಾಕಾರ ಶುರುವಾಗಿದೆ. ನೇಪಾಳದ ವ್ಯಾಪಾರಿಗಳು ಭಾರತದಿಂದ ಈರುಳ್ಳಿ, ಆಲೂಗಡ್ಡೆ ಮತ್ತು ಇತರ ತರಕಾರಿಗಳ ಆಮದನ್ನು ನಿಲ್ಲಿಸಿದ್ದಾರೆ. ಕಾರಣ ಅಲ್ಲಿನ ಸರ್ಕಾರ ಈ ಉತ್ಪನ್ನಗಳ ಮೇಲೆ 13 ಪ್ರತಿಶತ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ವಿಧಿಸಿದೆ. ಪ್ರತಿಪಕ್ಷದ ಶಾಸಕರು ನೇಪಾಳ ಸರ್ಕಾರದ ಕ್ರಮವನ್ನು ಟೀಕಿಸುತ್ತಿದ್ದಾರೆ. ಇದು ಕಡಿಮೆ ಆದಾಯದ ಕುಟುಂಬಗಳನ್ನು ಆಹಾರದ ಅಭದ್ರತೆಗೆ ಗುರಿಯಾಗುವಂತೆ ಮಾಡುತ್ತದೆ ಮತ್ತು ಈಗಾಗಲೇ ಗಗನಕ್ಕೇರುತ್ತಿರುವ ಹಣದುಬ್ಬರದಿಂದ ಬಡವರ ನೋವನ್ನು ಹೆಚ್ಚಿಸುತ್ತದೆ ಅನ್ನೋದು ವಿಪಕ್ಷಗಳ ವಾದ.

ಮೇ 29 ರಂದು ಸಂಸತ್ತಿನಲ್ಲಿ ಮಂಡಿಸಲಾದ ಹಣಕಾಸು ಮಸೂದೆಯ ಪ್ರಕಾರ, ಆಮದು ಮಾಡಿಕೊಂಡ ಈರುಳ್ಳಿ, ಆಲೂಗಡ್ಡೆ ಮತ್ತು ಇತರ ತರಕಾರಿಗಳು, ಹಣ್ಣುಗಳ ಮೇಲೆ ಹೆಚ್ಚುವರಿಯಾಗಿ ಶೇ.13ರಷ್ಟು ವ್ಯಾಟ್‌ ವಿಧಿಸಲಾಗಿದೆ. ಇದು ಸ್ಥಳೀಯ ರೈತರನ್ನು ರಕ್ಷಿಸುವ ಮತ್ತು ಆಮದು ಕಡಿತದ ಗುರಿ ಅನ್ನೋದು ಸರ್ಕಾರದ ಸಮರ್ಥನೆ.  ನೇಪಾಳವು ನೆರೆಯ ಭಾರತದಿಂದ ಅಗತ್ಯವಿರುವ ಎಲ್ಲಾ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ ಭಾರತದಿಂದ 1,73,829 ಟನ್ ಈರುಳ್ಳಿ ಆಮದು ಮಾಡಿಕೊಂಡಿತ್ತು.

ನೇಪಾಳದಲ್ಲಿ ಸ್ಥಳೀಯ ಬೇಡಿಕೆಯ ಸುಮಾರು 60 ಪ್ರತಿಶತವನ್ನು ಪೂರೈಸುವಷ್ಟು ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಉಳಿದ ಆಲೂಗಡ್ಡೆಯನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಭಾರತದಿಂದ ಪ್ರತಿದಿನ 700 ರಿಂದ 1,000 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕಳೆದ 10 ದಿನಗಳಿಂದ ಭಾರತದಿಂದ ಈರುಳ್ಳಿ ಪೂರೈಕೆ ನಿಂತಿದೆ. ಭಾರತದಿಂದ ವ್ಯಾಟ್ ಪಾವತಿಸಿ ತರಕಾರಿ ಆಮದು ಮಾಡಿಕೊಳ್ಳುವಲ್ಲಿ ಕಾನೂನು ಸಮಸ್ಯೆಯೂ ಎದುರಾಗಿದೆ ಅನ್ನೋದು ವ್ಯಾಪಾರಿಗಳ ಅಳಲು. ಪರಿಣಾಮ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ.

ಕಳೆದ ತಿಂಗಳವರೆಗೆ ಕೆಜಿಗೆ 50 ರೂಪಾಯಿ ಇದ್ದ ಈರುಳ್ಳಿ ಬೆಲೆ ತೀವ್ರ ಕೊರತೆಯಿಂದಾಗಿ ಈಗ ದುಪ್ಪಟ್ಟಾಗಿದೆ. ಕಠ್ಮಂಡುವಿನ ಸ್ಥಳೀಯ ವ್ಯಾಪಾರಿಗಳ ಪ್ರಕಾರ ಆಲೂಗಡ್ಡೆ ಬೆಲೆ ಸುಮಾರು 25 ಪ್ರತಿಶತದಷ್ಟು ಹೆಚ್ಚಾಗಿದೆ. ಈರುಳ್ಳಿ ಮತ್ತು ಆಲೂಗಡ್ಡೆಗಳಲ್ಲದೆ ನೇಪಾಳವು ಭಾರತದಿಂದ ಬದನೆ, ಬಟಾಣಿ, ಬೆಳ್ಳುಳ್ಳಿ, ಬೀನ್ಸ್ ಮತ್ತು ಪಾಲಕ ಸೊಪ್ಪನ್ನು ಸಹ ಆಮದು ಮಾಡಿಕೊಳ್ಳುತ್ತದೆ. ಅಂತೆಯೇ ಅವಕಾಡೊ, ಸೇಬು, ಏಪ್ರಿಕಾಟ್, ಚೆರ್ರಿ, ರಾಸ್ಬೆರಿ, ಕ್ರ್ಯಾನ್ಬೆರಿ, ಕಿವಿ ಮತ್ತು ಮಾವಿನ ಹಣ್ಣುಗಳನ್ನು ಕೂಡ ನೇಪಾಳಕ್ಕೆ ಪೂರೈಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...