alex Certify ಎಲೆಚುಕ್ಕೆ ರೋಗದ ಭೀತಿ; ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಚುಕ್ಕೆ ರೋಗದ ಭೀತಿ; ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಶಿವಮೊಗ್ಗ : ಮಳೆಗಾಲ ಆರಂಭವಾಗುತ್ತಿದ್ದಂತೆ ಅಡಿಕೆ ಬೆಳೆಗಾರರನ್ನು ಕಾಡುವ ಎಲೆಚುಕ್ಕೆ ರೋಗ (Leaf disease) ದೊಡ್ಡ ಕಂಟಕವಾಗಿದೆ. ಮುಂಗಾರು ಆರಂಭವಾಗುವ ಹಂತದಲ್ಲಿರುವುದರಿಂದ ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿ ಮಳೆಯ ತೀವ್ರತೆ ಹೆಚ್ಚಾದಲ್ಲಿ ಎಲೆಚುಕ್ಕೆ ರೋಗ ಉಲ್ಬಣವಾಗುವ ಸಂಭವವಿರುತ್ತದೆ. ಅದುದರಿಂದ ಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ರೈತರು (Farmers) ಈ ಕೆಳಕಂಡ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲು ಕೋರಿದೆ.

ನಿರ್ವಹಣೆ ಕ್ರಮಗಳು: ಅಡಿಕೆ ತೋಟಗಳಲ್ಲಿ ಕಳೆದ ಬಾರಿಯ ರೋಗಬಾಧಿತ ಒಣಗಿರುವ ಮತ್ತು ಹಳದಿಯಾಗಿರುವ ಗರಿಗಳನ್ನು ತೆಗೆದು ರಾಶಿಹಾಕಿ ಸುಡುವುದರಿಂದ ಸೋಂಕು ಕಡಿಮೆಗೊಳಿಸಲು ಪ್ರಯೋಜನಕಾರಿ. ಮುಂಗಾರು ಪ್ರಾರಂಭದಲ್ಲಿ ಅಡಿಕೆ ಗೊನೆಗಳಿಗೆ ಜೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ ಎಲೆಗಳಿಗೂ ಸಿಂಪರಣೆ ಮಾಡಬೇಕು. ಹೆಚ್ಚು ಬಾಧೆಯಿರುವ ತೋಟಗಳಲ್ಲಿ ಆಗಸ್ಟ್- ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಇಲ್ಲದಾಗ ಪ್ರೋಪಿಕೋನಝೋಲ್ (Propiconazole 25, EC) ಶಿಲೀಂದ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿ ಲೀಟರ್ ಪ್ರಮಾಣದಂತೆ ಎಲೆಗಳಿಗೆ ಸಿಂಪಡಣೆ ಮಾಡಬೇಕು. ಎರಡನೇ ಸಿಂಪಡಣೆಗೆ ಕಾರ್ಬರ್ಬೆನ್ಡಜಿಮ್ 12% + ಮ್ಯಾಂಕೋಜೆಟ್ 63% + (ಒಂದು ಲೀಟರ್ ನೀರಿಗೆ ಎರಡು ಗ್ರಾಂ) ಅಥವಾ ಅಂರ್ತವ್ಯಾಪಿ ಶಿಲೀಂದ್ರನಾಶಕಗಳಾದ ಹೆಕ್ಸಾಕೊನಝೋಲ್ (Hexaconazole 5 %) ಅಥವಾ ಟೆಬುಕೊನಝೋಲ್ (Tebuconazole, 38.9 %) ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿ ಲೀಟರ್ ಪ್ರಮಾಣದಂತೆ ಬಳಸಬಹುದು.

ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ನೀಡುವುದೊಳಿತು. ಸಾಮಾನ್ಯವಾಗಿ, ಅಡಿಕೆ ಮರಕ್ಕೆ 12 ಕಿಲೋಗ್ರಾಂ ಹಟ್ಟಿಗೊಬ್ಬರ ಮತ್ತು ಹಸಿರೆಲೆ, ಯೂರಿಯ (220 ಗ್ರಾಂ), ರಾಕ್ ಫಾಸ್ಫೇಟ್ (200 ಗ್ರಾಂ) ಮತ್ತು ಪೋಟಾಷ್ (240-350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಕನಿಷ್ಟ ಎರಡು ಕಂತುಗಳಲ್ಲಿ ನೀಡಬೇಕು. ಜೊತೆಗೆ ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಕೂಡ ನೀಡಬಹುದು. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ. ಹಾಗಾಗಿ ರೋಗ ಪೀಡಿತ ಅಡಿಕೆ ಸಸಿಗಳನ್ನು ರೋಗವಿಲ್ಲದ ಪ್ರದೇಶಕ್ಕೆ ಸಾಗಿಸದಿರುವುದು ಮತ್ತು ಸಮುದಾಯ ಮಟ್ಟದ ರೋಗ ನಿಯಂತ್ರಣ ಬಹು ಮುಖ್ಯವಾಗುತ್ತವೆ.

ಹೆಚ್ಚಿನ ಮಾಹಿತಿಗಾಗಿ, ರೈತರುಗಳು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಅಥವಾ ಆಯಾ ಹೋಬಳಿ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿಯ ಪಡೆಯಬಹುದಾಗಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...