alex Certify ಈಶ್ವರಪ್ಪರ ಹಾಳು ಬಾಯಿಯಿಂದ ಶಿವಮೊಗ್ಗದ ಶಾಂತಿಯೇ ಕದಡಿ ಹೋಗಿದೆ; ಬೇಳೂರು ಆರೋಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈಶ್ವರಪ್ಪರ ಹಾಳು ಬಾಯಿಯಿಂದ ಶಿವಮೊಗ್ಗದ ಶಾಂತಿಯೇ ಕದಡಿ ಹೋಗಿದೆ; ಬೇಳೂರು ಆರೋಪ

ಗಣಪತಿ ಹಬ್ಬಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು. ಅವರು ಇಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಅತಂತ್ರ ಪರಿಸ್ಥಿತಿ ಉಂಟಾಗಿದೆ. ಶಾಸಕ ಕೆ.ಎಸ್. ಈಶ್ವರಪ್ಪ ಅವರ ಹಾಳು ಬಾಯಿಯಿಂದ ಶಾಂತಿಯೇ ಕದಡಿ ಹೋಗಿದೆ. ಅವರು ಬಳಸುವ ಕೆಟ್ಟ ಪದಗಳು, ಆರೋಗ್ಯಕರವಲ್ಲದ ಟೀಕೆಗಳಿಂದ ಇಡೀ ವ್ಯವಸ್ಥೆಯೇ ಕದಡಿಹೋಗಿದೆ ಎಂದು ಆರೋಪಿಸಿದರು.

ಹಿಂದೂಗಳನ್ನು ಉಳಿಸಿಕೊಳ್ಳಲು ಈ ಬಿಜೆಪಿ ಸರ್ಕಾರಕ್ಕೆ ತಾಕತ್ ಇಲ್ಲ. ಸುಖಾ ಸುಮ್ಮನೆ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್, ಕೊಲೆ ಮಾಡಿದವರನ್ನು ನೇಣಿಗೆ ಏರಿಸಿ ಎಂದು ಹೇಳುತ್ತಲೇ ಬಂದಿದೆ. ತಮ್ಮ ವೈಫಲ್ಯತೆಗಳನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಕಾಂಗ್ರೆಸ್ ನವರ ಮೇಲೆ ವಿನಾಕರಾಣ ಆರೋಪ ಮಾಡುತ್ತಿದ್ದಾರೆ. ಅದರಲ್ಲೂ ಈಶ್ವರಪ್ಪ, ಸಿದ್ಧರಾಮಯ್ಯ ಅವರ ಮೇಲೆ ಸಲ್ಲದ ಟೀಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಅನ್ನು ಟೀಕೆ ಮಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ ಎಂದರು.

ಸಾಗರದ ಕಳಂಕಿತ ಶಾಸಕ ಹರತಾಳು ಹಾಲಪ್ಪ ಅವರಿಂದ ಧ್ವಜ ಮೈಲಿಗೆಯಾಗಿದೆ ಎಂದು ನೇರ ಆರೋಪ ಮಾಡಿದ ಅವರು, ಈತ 70 ಸಾವಿರ ಧ್ವಜ ಹಂಚಿರುವುದಾಗಿ ಹೇಳುತ್ತಾರೆ. ಇವರು ಗ್ರಾಮ ಪಂಚಾಯಿತಿಗಳ ಮೂಲಕ ಒಂದು ಧ್ವಜಕ್ಕೆ 20 ರೂ. ನಂತೆ ವಸೂಲಿ ಮಾಡಿದ್ದಾರೆ. ಅಷ್ಟಕ್ಕೂ ಈತ ಶುದ್ಧನೇನೂ ಅಲ್ಲ. ಈತನಿಂದ ಧ್ವಜ ಮೈಲಿಗೆಯಾಗಿದೆ ಎಂದರು.

ಈ ಬಾರಿಯ ಸ್ವಾತಂತ್ರ್ಯೋತ್ಸವ ಬಿಜೆಪಿಯವರಿಗೆ ಮಾತ್ರ ಬಂದಿದೆ. ಎಲ್ಲಾ ಕಡೆ ಶೇ. 40 ರಷ್ಟಿದ್ದ ಲಂಚ ಶೇ. 60 ಕ್ಕೆ ಏರಿದೆ. ಧ್ವಜದ ವಿಚಾರವೂ ಅಷ್ಟೇ. ಧ್ವಜಾರೋಹಣದ ರೋಮಾಂಚನಗಳನ್ನೇ ಆಡಳಿತ ಪಕ್ಷ ಕಸಿದುಕೊಂಡಿದೆ. ಬೇಲಿ, ಗದ್ದೆ, ಕಸದ ಬುಟ್ಟಿಗಳಲ್ಲಿ ರಾಷ್ಟ್ರಧ್ವಜಗಳನ್ನು ಎಸೆಯಲಾಗಿದೆ. ಇದು ಅತ್ಯಂತ ಬೇಸರ ಮತ್ತು ಖಂಡನೀಯ. ಇಷ್ಟರ ಮೇಲೆ ಆರ್.ಎಸ್.ಎಸ್. ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಹಾರಿಲ್ಲ. ಇದರಿಂದಲೇ ಗೊತ್ತಾಗುತ್ತದೆ ಯಾರು ರಾಷ್ಟ್ರದ್ರೋಹಿಗಳು ಎಂಬುದು ಎಂದು ಟೀಕಿಸಿದರು.

ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಬಿಜೆಪಿ ನಾಯಕರು ಸಾವರ್ಕರ್ ಫೋಟೋ ಕುರಿತು ಮಾತನಾಡುತ್ತಾರೆ. ಅವರ ಫೋಟೋ ಇಡದವರನ್ನು ಜೈಲಿಗೆ ಹಾಕಬೇಕು ಎನ್ನುತ್ತಾರೆ. ಆದರೆ, ಬಿಜೆಪಿ ಸರ್ಕಾರದಲ್ಲಿ ನೆಹರು ಫೋಟೋ ಹಾಕಿಲ್ಲವಲ್ಲ, ಶೋಭಾ ಮೇಡಂ ಅವರನ್ನು ತಿಹಾರ್ ಜೈಲಿಗೆ ಹಾಕಬೇಕಲ್ಲವೇ ಎಂದು ಪ್ರಶ್ನಿಸಿದ ಅವರು ಗಾಂಧಿಜಿ ಅವರನ್ನು ಕೊಂದ ಗೋಡ್ಸೆಗೆ ದೇವರ ಗುಡಿ ಕಟ್ಟುವವರು ಹೇಗೆ ರಾಷ್ಟ್ರ ಭಕ್ತರಾಗುತ್ತಾರೆ ಎಂದು ಪ್ರಶ್ನಿಸಿದರು.

ನಿಟ್ಟೂರು, ಕೊಲ್ಲೂರು ನಡುವೆ ತಡೆ ಗೋಡೆ ನಿರ್ಮಾಣಕ್ಕಾಗಿ 5 ಕೋಟಿ ರೂ. ನೀರಿನಲ್ಲಿ ಹೋಮ ಮಾಡಿದ್ದಾರೆ. ಹಸಿರುಮಕ್ಕಿ ಸೇತುವೆಗೆ ಚಾಲನೆ ನೀಡಿಲ್ಲ. ನೆರೆ ಪರಿಹಾರ ಸಿಗುತ್ತಿಲ್ಲ. ಹೀಗೆ ಹಲವು ವೈಫಲ್ಯಗಳು ಇವೆ. ಶ್ರೀರಾಮುಲು ಅವರೇ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಬೇಕೆಂದು ಹೇಳುತ್ತಾರೆ. ಅವರ ಪಕ್ಷ ಮಾಧುಸ್ವಾಮಿ ಅವರೇ ಸರ್ಕಾರ ವೈಫಲ್ಯ ಕಂಡಿದೆ ಎಂದು ಹೇಳುತ್ತಾರೆ. ಬಿಜೆಪಿಯಲ್ಲಿಯೇ ಮುಖ್ಯಮಂತ್ರಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ ಎಂದರು.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...