ಬೆಂಗಳೂರು: ನೀವು ಈ ಸಮಯದಲ್ಲಿ ಸಕುಟುಂಬ ಸಮೇತರಾಗಿ ಪುಣ್ಯ ಕ್ಷೇತ್ರಗಳಿಗೆ ಪ್ರವಾಸ ಹೋಗಲು ಪ್ಲ್ಯಾನ್ ಮಾಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಸುವರ್ಣ ಅವಕಾಶವೊಂದನ್ನು ನೀಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಿಂದ ದಕ್ಷಿಣ ಕನ್ನಡ ಕರಾವಳಿಯ ಅತ್ಯಂತ ಪವಿತ್ರ ಕ್ಷೇತ್ರಗಳಾದ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಿಗೆ 2 ದಿನಗಳ ಆಕರ್ಷಕ ಪ್ರೀಮಿಯಂ ಪ್ರವಾಸ ಪ್ಯಾಕೇಜ್ ಅನ್ನು ಪ್ರಕಟಿಸಲಾಗಿದೆ. ಈ ಮೂಲಕ ಕಡಿಮೆ ದರದಲ್ಲಿ ಎರಡು ದಿನದ ನೆಮ್ಮದಿಯ ಪ್ರವಾಸಕ್ಕೆ ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಆರಾಮದಾಯಕ ಎಸಿ ಡಿಲಕ್ಸ್ ಕೋಚ್ (AC Deluxe Coach) ಬಸ್ ಮೂಲಕ ಸಾಗುವ ಈ ಪ್ರವಾಸದ ಸಂಪೂರ್ಣ ವಿವರಗಳು ಮತ್ತು ವೇಳಾಪಟ್ಟಿ ಇಲ್ಲಿದೆ ನೋಡಿ:
ಪ್ರವಾಸದ ಪ್ರಮುಖ ಆಕರ್ಷಣೆಗಳು:
ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ (ವಿಐಪಿ ಸ್ಪೆಷಲ್ ದರ್ಶನ)
ಸೌತಡ್ಕ ಮಹಾ ಗಣಪತಿ ದೇವಸ್ಥಾನ ಭೇಟಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮತ್ತು ಆದಿ ಸುಬ್ರಹ್ಮಣ್ಯ ದೇವಸ್ಥಾನ ದರ್ಶನ
ಆದಿಚುಂಚನಗಿರಿ ಕ್ಷೇತ್ರ ಮತ್ತು ಐತಿಹಾಸಿಕ ಮಂಜರಾಬಾದ್ ಕೋಟೆ ವೀಕ್ಷಣೆ
ಎರಡು ದಿನಗಳ ಪ್ರವಾಸದ ಕಂಪ್ಲೀಟ್ ವೇಳಾಪಟ್ಟಿ:
ದಿನ 1: ಬೆಂಗಳೂರಿನಿಂದ ಧರ್ಮಸ್ಥಳ ಪ್ರಯಾಣ ಮತ್ತು ದೃಶ್ಯವೀಕ್ಷಣೆ
ಬೆಳಿಗ್ಗೆ 07:00 – ಬೆಂಗಳೂರಿನ ಯಶವಂತಪುರ ಬಿಎಂಟಿಸಿ ಟಿಟಿಎಂಸಿ (BMTC TTMC) ಬಸ್ ನಿಲ್ದಾಣದಲ್ಲಿರುವ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್ ಬಳಿ ರಿಪೋರ್ಟ್ ಮಾಡಿಕೊಳ್ಳಬೇಕು.
ಬೆಳಿಗ್ಗೆ 07:30 – ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಎಸಿ ಬಸ್ ಮೂಲಕ ರಸ್ತೆ ಪ್ರಯಾಣ ಆರಂಭವಾಗಲಿದೆ.
ಬೆಳಿಗ್ಗೆ 09:30 – ಮಾರ್ಗಮಧ್ಯೆ ಉಪಹಾರಕ್ಕಾಗಿ ಬ್ರೇಕ್ ಇರಲಿದ್ದು, ಖರ್ಚು ಸ್ವಂತದ್ದಾಗಿರುತ್ತದೆ.
ಬೆಳಿಗ್ಗೆ 10:30 – ಪವಿತ್ರ ಆದಿಚುಂಚನಗಿರಿ ದೇವಸ್ಥಾನಕ್ಕೆ ಭೇಟಿ ಮತ್ತು ದರ್ಶನ.
ಮಧ್ಯಾಹ್ನ 01:30 – ಮಾರ್ಗಮಧ್ಯೆ ಮಧ್ಯಾಹ್ನದ ಊಟಕ್ಕೆ ನಿಲುಗಡೆ.
ಸಂಜೆ 04:30 – ಹಸಿರು ನಿಸರ್ಗದ ಮಡಿಲಲ್ಲಿರುವ ಐತಿಹಾಸಿಕ ಮಂಜರಾಬಾದ್ ಕೋಟೆಗೆ ಭೇಟಿ ಮತ್ತು ವೀಕ್ಷಣೆ.
ಸಂಜೆ 06:30 – ಧರ್ಮಸ್ಥಳಕ್ಕೆ (ನಿಡ್ಲೆ) ಆಗಮನ, ಹೋಟೆಲ್‌ಗೆ ಚೆಕ್-ಇನ್ ಮತ್ತು ರಾತ್ರಿ ಅಲ್ಲಿಯೇ ತಂಗುವಿಕೆ.
ದಿನ 2: ಪುಣ್ಯಕ್ಷೇತ್ರಗಳ ದರ್ಶನ ಮತ್ತು ಮರಳಿ ಬೆಂಗಳೂರಿಗೆ ಪ್ರಯಾಣ
ಬೆಳಿಗ್ಗೆ 07:30 – ಹೋಟೆಲ್‌ನಲ್ಲಿ ಉಚಿತ ಉಪಾಹಾರದ ವ್ಯವಸ್ಥೆ ಇರಲಿದೆ.
ಬೆಳಿಗ್ಗೆ 08:30 – ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಮತ್ತು ವಿಶೇಷ ವಿಐಪಿ ದರ್ಶನ ಇರಲಿದೆ.
ಬೆಳಿಗ್ಗೆ 10:00 – ಸುಂದರ ಶ್ರೀ ರಾಮಮಂದಿರಕ್ಕೆ (ರಾಮ ಕ್ಷೇತ್ರ) ಭೇಟಿ.
ಬೆಳಿಗ್ಗೆ 11:00 – ಸೂರ್ಯನಾರಾಯಣ ದೇವಸ್ಥಾನ ವೀಕ್ಷಣೆ.
ಮಧ್ಯಾಹ್ನ 12:00 – ಬೆಳ್ತಂಗಡಿಯ ಪ್ರಸಿದ್ಧ ಶ್ರೀ ಶಿಶಿಲೇಶ್ವರ ದೇವಸ್ಥಾನಕ್ಕೆ (ಶಿಶಿಲ) ಭೇಟಿ.
ಮಧ್ಯಾಹ್ನ 01:30 – ಮುಕ್ತ ಆವರಣದಲ್ಲಿರುವ ಪ್ರಸಿದ್ಧ ಸೌತಡ್ಕ ಶ್ರೀ ಮಹಾ ಗಣಪತಿ ದೇವಸ್ಥಾನಕ್ಕೆ ಭೇಟಿ ಮತ್ತು ಅಲ್ಲಿಯೇ ಮಧ್ಯಾಹ್ನದ ಊಟದ ವ್ಯವಸ್ಥೆ.
ಸಂಜೆ 06:00 – ನಾಗದೇವನ ಪವಿತ್ರ ಕ್ಷೇತ್ರ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಆದಿ ಸುಬ್ರಹ್ಮಣ್ಯದಲ್ಲಿ ವಿಶೇಷ ದರ್ಶನ ಭಾಗ್ಯ.
ಸಂಜೆ 07:30 – ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ರಾತ್ರಿಯ ಭೋಜನ.
ರಾತ್ರಿ 08:30 – ಎಲ್ಲಾ ದೃಶ್ಯವೀಕ್ಷಣೆ ಮುಗಿಸಿ ಬೆಂಗಳೂರಿನ ಕಡೆಗೆ ಮರಳಿ ಪ್ರಯಾಣ ಆರಂಭ.
ರಾತ್ರಿ 10:30 – ಮಾರ್ಗಮಧ್ಯೆ ರಿಫ್ರೆಶ್‌ಮೆಂಟ್ ಬ್ರೇಕ್ ಇರಲಿದೆ.
ದಿನ 3: ಬೆಂಗಳೂರಿಗೆ ಆಗಮನ
ಬೆಳಿಗ್ಗೆ 05:30 – ಬೆಂಗಳೂರಿಗೆ ಬಸ್ ಮರಳಿ ಆಗಮಿಸಲಿದ್ದು, ಇದರೊಂದಿಗೆ ಕೆಎಸ್‌ಟಿಡಿಸಿ ಸುಂದರ ಪ್ರವಾಸ ಮುಕ್ತಾಯಗೊಳ್ಳುತ್ತದೆ.
ಪ್ಯಾಕೇಜ್‌ನಲ್ಲಿ ಏನೇನಿದೆ? (Inclusions)
ಎಸಿ ಡಿಲಕ್ಸ್ ಬಸ್ ಪ್ರಯಾಣದ ಸಂಪೂರ್ಣ ವೆಚ್ಚ.
ದೇವಸ್ಥಾನಗಳ ವಿಶೇಷ ಶೀಘ್ರ ದರ್ಶನ (VIP) ಟಿಕೆಟ್‌ಗಳು.
ಧರ್ಮಸ್ಥಳದಲ್ಲಿ ಉತ್ತಮ ಹೊಟೇಲ್ ವಸತಿ ಸೌಲಭ್ಯ.
ಎರಡನೇ ದಿನದ ಬೆಳಗಿನ ರುಚಿಕರ ಉಪಹಾರ.
ಪ್ಯಾಕೇಜ್‌ನಲ್ಲಿ ಏನಿರುವುದಿಲ್ಲ? (Exclusions)
ಮಧ್ಯಾಹ್ನ ಮತ್ತು ರಾತ್ರಿಯ ಊಟದ ವೆಚ್ಚಗಳನ್ನು ಪ್ರವಾಸಿಗರೇ ಭರಿಸಬೇಕು.
ವೈಯಕ್ತಿಕ ಖರೀದಿ ಮತ್ತು ಇತರೆ ವೈಯಕ್ತಿಕ ವೆಚ್ಚಗಳು.
ವೇಳಾಪಟ್ಟಿಯಲ್ಲಿ ಉಲ್ಲೇಖಿಸದ ಯಾವುದೇ ಹೆಚ್ಚುವರಿ ಸ್ಥಳಗಳ ಭೇಟಿಗೆ ಅವಕಾಶ ಇರುವುದಿಲ್ಲ.
ಪ್ರಯಾಣಿಕರಿಗೆ ಪ್ರಮುಖ ಸೂಚನೆಗಳು:
ಪ್ರವಾಸದ ವೇಳೆ ಅತಿಥಿಗಳು ತಮ್ಮ ಮಾನ್ಯ ಗುರುತಿನ ಚೀಟಿಯನ್ನು (ID Card) ಕಡ್ಡಾಯವಾಗಿ ಜೊತೆಯಲ್ಲಿಟ್ಟುಕೊಳ್ಳಬೇಕು. ದೇವಸ್ಥಾನಗಳಿಗೆ ಭೇಟಿ ನೀಡುವಾಗ ಸಾಂಪ್ರದಾಯಿಕ ವಸ್ತ್ರ ಸಂಹಿತೆಯನ್ನು (Dress Code) ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇನ್ನು ಸಂಚಾರ ದಟ್ಟಣೆ ಮತ್ತು ದೇವಾಲಯದ ಭಕ್ತರ ಸೀಸನ್ ರಶ್ ಅನ್ನು ಅವಲಂಬಿಸಿ ಸಮಯಗಳು ಕೊಂಚ ಬದಲಾಗಬಹುದು. ಅನಿರೀಕ್ಷಿತ ವಿಳಂಬಗಳಿಗೆ ಕೆಎಸ್‌ಟಿಡಿಸಿ ಜವಾಬ್ದಾರರಾಗಿರುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ. ಹೆಚ್ಚಿನ ವಿವರ ಹಾಗೂ ಬುಕ್ಕಿಂಗ್‌ಗಾಗಿ ಕೆಎಸ್‌ಟಿಡಿಸಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

