ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ನಿಷೇಧಿತ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಇಬ್ಬರು ವಾರ್ಡನ್ ಗಳು ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಧಾರವಾಡ ಕೇಂದ್ರ ಕಾರಾಗೃಹದ ಇಬ್ಬರು ವಾರ್ಡನ್ ಗಳು ಮತ್ತು ಆಟೋ ಚಾಲಕನ ವಿರುದ್ಧ ಕೇಸು ದಾಖಲಾಗಿದೆ. ಇವರು ಕೈದಿಗಳಿಗೆ ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದರು. ವಾರ್ಡನ್ ಗಳಾದ ಅಲ್ತಾಫ್ ಶೇಖ್ ಸನದಿ, ರಾಜು ಸೊಲಬಣ್ಣನವರ ಹಾಗೂ ಆಟೋ ಚಾಲಕ ಮುನಿರ್ ಅಹಮದ್ ಬೆಟಗೇರಿ ಅವರ ವಿರುದ್ಧ ಕೇಸು ದಾಖಲಾಗಿದೆ.
ಮಾ. 8ರಂದು ಬೆಳಗಿನ ಜಾವ 3 ಗಂಟೆಗೆ ಆಟೋ ಚಾಲಕ ಜೈಲಿನ ಬಾಗಿಲಿನ ಹೊರಗೆ ಒಂದು ಬ್ಯಾಗ್ ತಂದಿಟ್ಟಿದ್ದ. ಅದು ಒಳಗೆ ಹೋಗಿದ್ದನ್ನು ಗಮನಿಸಿದ ಜೈಲಾಧಿಕಾರಿ ಕುಲಂಕಷವಾಗಿ ತನಿಖೆ ಮಾಡಿ ದೂರು ನೀಡಿದ್ದರು. ಮಾರ್ಚ್ 25ರಂದು ಧಾರವಾಡ ಉಪನಗರ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಮೂವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

