ಕಾಂತಾರ ಸಿನಿಮಾ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ರಿಷಬ್ ಶೆಟ್ಟಿ ಈಗ ಹನುಮಂತನ ಅವತಾರ ತಾಳಲು ಸಜ್ಜಾಗಿದ್ದಾರೆ. ಪ್ರಶಾಂತ್ ವರ್ಮ ನಿರ್ದೇಶನದ ‘ಜೈ ಹನುಮಾನ್’ ಚಿತ್ರದ ಕುರಿತು ಬಹುನಿರೀಕ್ಷಿತ ಅಪ್‌ಡೇಟ್ ಒಂದು ಹೊರಬಿದ್ದಿದ್ದು, ಸಿನಿಮಾ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
2024ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ ‘ಹನುಮಾನ್’ ಚಿತ್ರದ ಮುಂದುವರಿದ ಭಾಗ ‘ಜೈ ಹನುಮಾನ್’ ಚಿತ್ರಕ್ಕೆ ಈಗ ಚಾಲನೆ ಸಿಗುತ್ತಿದೆ. ವರದಿಗಳ ಪ್ರಕಾರ, ಫೆಬ್ರವರಿ 22 ರಂದು ಕರ್ನಾಟಕದ ಐತಿಹಾಸಿಕ ತಾಣ ಹಂಪಿಯಲ್ಲಿ ಚಿತ್ರದ ಅದ್ಧೂರಿ ಲಾಂಚ್ ಈವೆಂಟ್ ನಡೆಯಲಿದೆ. ಈ ಸಮಾರಂಭದಲ್ಲಿ ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಏಪ್ರಿಲ್‌ನಿಂದ ಶೂಟಿಂಗ್ ಆರಂಭ: ನಿರ್ದೇಶಕ ಪ್ರಶಾಂತ್ ವರ್ಮ ಈಗಾಗಲೇ ಚಿತ್ರಕಥೆಯನ್ನು ಪೂರ್ಣಗೊಳಿಸಿದ್ದು, ಪ್ರಿ-ಪ್ರೊಡಕ್ಷನ್ ಕೆಲಸಗಳು ಕೂಡ ಅಂತಿಮ ಹಂತದಲ್ಲಿವೆ. ಏಪ್ರಿಲ್ 2026 ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ ಎಂದು ತಿಳಿದುಬಂದಿದೆ. ಮೊದಲ ಭಾಗದಲ್ಲಿ ತೇಜ ಸಜ್ಜಾ ನಟಿಸಿದ್ದರೆ, ಈ ಸೀಕ್ವೆಲ್‌ನಲ್ಲಿ ರಿಷಬ್ ಶೆಟ್ಟಿ ಸಾಕ್ಷಾತ್ ಹನುಮಂತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟುಗೊಳಿಸಿದೆ.
ಬಾಕ್ಸ್ ಆಫೀಸ್ ದಾಖಲೆ ಬರೆದಿದ್ದ ಮೊದಲ ಭಾಗ: ‘ಹನುಮಾನ್’ ಮೊದಲ ಭಾಗವು ಕೇವಲ ಭಾರತದಲ್ಲಿ 223 ಕೋಟಿ ರೂಪಾಯಿ ಹಾಗೂ ವಿಶ್ವದಾದ್ಯಂತ 278 ಕೋಟಿ ರೂಪಾಯಿ ಗಳಿಸುವ ಮೂಲಕ ಅಚ್ಚರಿ ಮೂಡಿಸಿತ್ತು. ಬಜೆಟ್‌ಗಿಂತ ಆರೇಳು ಪಟ್ಟು ಹೆಚ್ಚು ಲಾಭ ತಂದುಕೊಟ್ಟ ಈ ಸಿನಿಮಾ, ತೆಲುಗು ಚಿತ್ರರಂಗದ ಸಾರ್ವಕಾಲಿಕ ಯಶಸ್ವಿ ಚಿತ್ರಗಳ ಪಟ್ಟಿಗೆ ಸೇರಿತ್ತು. ಈಗ ಅದೇ ಯೂನಿವರ್ಸ್ ಅನ್ನು ವಿಸ್ತರಿಸಲು ಪ್ರಶಾಂತ್ ವರ್ಮ ಸಜ್ಜಾಗಿದ್ದಾರೆ.
ಅಂಜನಾದ್ರಿ ಗ್ರಾಮದ ಹಿನ್ನೆಲೆಯಲ್ಲಿ ನಡೆಯುವ ಈ ಕಾಲ್ಪನಿಕ ಕಥೆಯಲ್ಲಿ, ದೈವಿಕ ಶಕ್ತಿ ಪಡೆದ ನಾಯಕ ಹೇಗೆ ಜನರನ್ನು ರಕ್ಷಿಸುತ್ತಾನೆ ಎಂಬುದು ಕಥಾವಸ್ತುವಾಗಿದೆ. ರಿಷಬ್ ಶೆಟ್ಟಿ ಅವರ ಸೇರ್ಪಡೆಯಿಂದಾಗಿ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಸಂಚಲನ ಮೂಡಿಸುವುದು ಖಂಡಿತ.

