ಬಾಲಿವುಡ್ನ ಸ್ಟಾರ್ ನಟರಾದ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ಬ್ರಹ್ಮಾಂಡದ ಕಥೆಯುಳ್ಳ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾವು ನವೆಂಬರ್ 5, 2026 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಈ ಚಿತ್ರದ ಎರಡನೇ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಇದರ ಬೆನ್ನಲ್ಲೇ ವಿದೇಶಗಳಲ್ಲಿ ಐಮ್ಯಾಕ್ಸ್ (IMAX) ಟಿಕೆಟ್ ಮುಂಗಡ ಮಾರಾಟ ಆರಂಭವಾಗಿದೆ.
ಚಿತ್ರತಂಡವು ಘೋಷಿಸಿರುವ ವಿಶೇಷ ಆಫರ್ ಪ್ರಕಾರ, ಮುಂಗಡ ಬುಕಿಂಗ್ ವೇಳೆ ‘RAMAYANAIMAX’ ಕೋಡ್ ಅನ್ನು ಬಳಸುವ ಮೂಲಕ ಪ್ರೇಕ್ಷಕರು ಕೇವಲ 7 ಡಾಲರ್ಗಳಿಗೆ ($7) ಐಮ್ಯಾಕ್ಸ್ ಟಿಕೆಟ್ಗಳನ್ನು ಪಡೆಯಬಹುದು. ದೊಡ್ಡ ಪರದೆಯ ಮೇಲೆ ಈ ಮಹಾಕಾವ್ಯದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಬಯಸುವ ಅಭಿಮಾನಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ನಿರ್ಮಾಪಕರ ಈ ಅನಿರೀಕ್ಷಿತ ಹಾಗೂ ವಿನೂತನ ಕೊಡುಗೆಯು ಸಿನಿರಂಗದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಖ್ಯಾತ ನಿರ್ದೇಶಕ ನಿತೇಶ್ ತಿವಾರಿ ಆಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ನಮಿತ್ ಮಲ್ಹೋತ್ರಾ ಮತ್ತು ಯಶ್ ಅತ್ಯಂತ ಬೃಹತ್ ವೆಚ್ಚದಲ್ಲಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರವಿ ದುಬೆ, ವಿವೇಕ್ ಒಬೆರಾಯ್, ಕಾಜಲ್ ಅಗರ್ವಾಲ್, ಸನ್ನಿ ಡಿಯೋಲ್, ರಕುಲ್ ಪ್ರೀತ್ ಸಿಂಗ್, ಇಂದಿರಾ ಕೃಷ್ಣನ್ ಮತ್ತು ಕುನಾಲ್ ಕಪೂರ್ ಸೇರಿದಂತೆ ದೊಡ್ಡ ತಾರಾಗಣವಿದೆ. ವಿಶೇಷವೆಂದರೆ, ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರಹಮಾನ್ ಹಾಧಿಗಳಿಗೆ ಸಂಗೀತ ಸಂಯೋಜಿಸಿದ್ದರೆ, ಖ್ಯಾತ ಹಿನ್ನೆಲೆ ಸಂಗೀತಗಾರ ಹ್ಯಾನ್ಸ್ ಜಿಮ್ಮರ್ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಜೀವ ತುಂಬಿದ್ದಾರೆ.

