ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಟೂರ್ನಿಯ ಗ್ರೂಪ್ ಹಂತದ 16ನೇ ಪಂದ್ಯದಲ್ಲಿ ಶ್ರೀಲಂಕಾ ಒಮನ್ ವಿರುದ್ಧ 105 ರನ್‌ಗಳ ಗೆಲುವನ್ನು ಸಾಧಿಸಿದೆ.
ಪಂದ್ಯದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ಒಮನ್ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಶ್ರೀಲಂಕಾ ರನ್ ಮಳೆ ಸುರಿಸಿದ್ದು, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿ ಒಮನ್‌ಗೆ 226 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಒಮನ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 120 ರನ್ ದಾಖಲಿಸಿದೆ.
ಶ್ರೀಲಂಕಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಪಥುಮ್ ನಿಸ್ಸಾಂಕ 13 ರನ್ ಹಾಗೂ ಕಮಿಲ್ ಮಿಶಾರಾ 8 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಬಳಿಕ ಕಣಕ್ಕಿಳಿದ ಕುಸಾಲ್ ಮೆಂಡಿಸ್ 45 ಎಸೆತಗಳಲ್ಲಿ 61 ರನ್ ಕಲೆಹಾಕಿದರೆ, ಪವನ್ ರತ್ಯಾಯಕೆ 28 ಎಸೆತಗಳಲ್ಲಿ 60 ರನ್ ಚಚ್ಚಿದರು. 19 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ದಸುನ್ ಶನಕ ಟಿ ಟ್ವೆಂಟಿಯಲ್ಲಿ ಶ್ರೀಲಂಕಾ ಪರ ವೇಗವಾಗಿ ಅರ್ಧಶತಕ ಬಾರಿಸಿ ತಮ್ಮದೇ ಹೆಸರಿನಲ್ಲಿದ್ದ ದಾಖಲೆ ಮುರಿದರು. ಶನಕ 20 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಐದು ಸಿಕ್ಸರ್ ಸಹಿತ 50 ರನ್ ಬಾರಿಸಿದರು. ಕಮಿಂದು ಮೆಂಡಿಸ್ ಅಜೇಯ 19 ರನ್ ಹಾಗೂ ದುನಿತ್ ವೆಲ್ಲಲಾಗೆ ಅಜೇಯ 6 ರನ್ ಬಾರಿಸಿದರು.
ಒಮನ್ ಪರ ಜಿತೆನ್ ರಮಮಂಡಿ ಎರಡು ವಿಕೆಟ್, ಸುಫ್ಯನ್ ಮೆಹ್ಮೊದ್ ಹಾಗೂ ಜಯ್ ಒದೆದ್ರಾ ತಲಾ ಒಂದೊಂದು ವಿಕೆಟ್ ಪಡೆದರು.
ಒಮನ್ ಇನ್ನಿಂಗ್ಸ್: ತಂಡದ ಪರ ಮೊಹಮ್ಮದ್ ನದೀಮ್ ಹೊರತುಪಡಿಸಿ ಇನ್ಯಾವ ಆಟಗಾರನೂ ಸಹ ಹೇಳಿಕೊಳ್ಳುವ ಪ್ರದರ್ಶನ ನೀಡಿಲಿಲ್ಲ. ಆಮಿರ್ ಕಲೀಮ್ 6 ರನ್ ಗಳಿಸಿದರೆ, ಜತಿಂದರ್ ಸಿಂಗ್ 1 ರನ್, ಹಮ್ಮದ್ ಮಿರ್ಜಾ 9, ವಸೀಮ್ ಅಲಿ 27, ವಿನಾಯಕ್ ಶುಕ್ಲಾ 1, ಜಿತೆನ್ ರಮನಂಡಿ ಡಕ್‌ಔಟ್, ನದೀಮ್ ಖಾನ್ 2, ಸುಫ್ಯನ್ ಮೆಹ್ಮುದ್ 1, ಶಾ ಫೈಸಲ್ 1, ಜಯ್ ಒದೆದ್ರ ಅಜೇಯ 4 ರನ್ ಹಾಗೂ ಮೊಹಮ್ಮದ್ ನದೀಮ್ ಅಜೇಯ 53 ರನ್ ಕಲೆಹಾಕಿದರು.
ಶ್ರೀಲಂಕಾ ಪರ ದುಷ್ಮಂತ ಚಮೀರ ಹಾಗೂ ಮಹೀಶ್ ತೀಕ್ಷಣ ತಲಾ ಎರಡು ವಿಕೆಟ್, ದುನಿತ್ ವೆಲ್ಲಲಾಗೆ, ದುಶನ್ ಹೇಮಂತ ಹಾಗೂ ಕಮಿಂದು ಮೆಂಡಿಸ್ ತಲಾ ಒಂದೊಂದು ವಿಕೆಟ್ ಪಡೆದರು.

