ಅಜಯ್ ದೇವಗನ್ ಅಭಿನಯದ ‘ದೃಶ್ಯಂ 3: ದಿ ಕನ್ಕ್ಲೂಷನ್’ ಸಿನಿಮಾ ಬಿಡುಗಡೆಯಾಗಿ 14 ದಿನಗಳು ಕಳೆದರೂ ಬಾಕ್ಸ್ ಆಫೀಸ್ನಲ್ಲಿ ತನ್ನ ಜಾದೂ ಮುಂದುವರಿಸಿದೆ. 14 ನೇ ದಿನದ ಅಂತ್ಯಕ್ಕೆ ಈ ಚಿತ್ರವು ಭಾರತದಲ್ಲಿ ಒಟ್ಟು 333 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದ್ದು, ಗ್ರಾಸ್ ಕಲೆಕ್ಷನ್ನಲ್ಲಿ 400 ಕೋಟಿ ರೂ. ಕ್ಲಬ್ಗೆ ಸೇರ್ಪಡೆಯಾಗಲು ಕೆಲವೇ ಮೆಟ್ಟಿಲು ಬಾಕಿ ಇದೆ. ಚಿತ್ರಮಂದಿರಗಳಲ್ಲಿ ಜೈಲರ್ 2, ರಾಣಾಬಾಲಿ, ಪ್ರಹಾರ್ ಹಾಗೂ ನಯಿ ನವೇಲಿ ಮುಂತಾದ ದೊಡ್ಡ ಸಿನಿಮಾಗಳ ಪೋಟಿ ನಡುವೆಯೂ ಈ ಸಿನಿಮಾ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ಬಾಕ್ಸ್ ಆಫೀಸ್ ಲೆಕ್ಕಾಚಾರ:
ಸಾಕ್ನಿಲ್ಕ್ ವರದಿಯ ಪ್ರಕಾರ, 14 ನೇ ದಿನದಂದು ದೃಶ್ಯಂ 3 ಚಿತ್ರವು 10,809 ಶೋಗಳಿಂದ 4.25 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. ಇದರ ಮೂಲಕ ಭಾರತದಲ್ಲಿ ಇದುವರೆಗೆ ಒಟ್ಟು 399.05 ಕೋಟಿ ರೂ. ಗ್ರಾಸ್ ಹಾಗೂ 333 ಕೋಟಿ ರೂ. ನೆಟ್ ಗಳಿಕೆ ಕಂಡಿದೆ. ವಿದೇಶಗಳಲ್ಲಿ 116 ಕೋಟಿ ರೂ. ಗಳಿಸುವ ಮೂಲಕ ಚಿತ್ರದ ಜಾಗತಿಕ (ವರ್ಲ್ಡ್ ವೈಡ್) ಗ್ರಾಸ್ ಕಲೆಕ್ಷನ್ ಬರೋಬ್ಬರಿ 515.05 ಕೋಟಿ ರೂಪಾಯಿಗಳನ್ನು ತಲುಪಿದೆ. ಈ ಸಾಧನೆಯೊಂದಿಗೆ ‘ಧುರಂಧರ್ 2’ ನಂತರ ಈ ವರ್ಷದ ಎರಡನೇ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚಿತ್ರದ ವಿಶೇಷತೆಗಳು:
ಅಭಿಷೇಕ್ ಪಾಠಕ್ ನಿರ್ದೇಶನದ ಈ ಸಿನಿಮಾ ಅಜಯ್ ದೇವಗನ್ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಅಲ್ಲದೆ ಭಾರತದಲ್ಲಿ 300 ಕೋಟಿ ರೂ. ನೆಟ್ ಗಡಿ ದಾಟಿದ ಅಜಯ್ ದೇವಗನ್ ಅವರ ಮೊದಲ ಸಿನಿಮಾ ಇದಾಗಿದೆ. ಮೊದಲ ಎರಡು ಭಾಗಗಳಿಗೆ ಜೀತು ಜೋಸೆಫ್ ಕಥೆ ಬರೆದಿದ್ದರೆ, ಈ ಮೂರನೇ ಭಾಗಕ್ಕೆ ನಿರ್ದೇಶಕ ಅಭಿಷೇಕ್ ಪಾಠಕ್ ಸ್ವತಃ ಮೂಲ ಕಥೆ ಹೆಣೆದಿದ್ದಾರೆ. ಅಜಯ್ ದೇವಗನ್ ಜತೆಗೆ ಜೈದೀಪ್ ಅಹ್ಲಾವತ್, ಟಬು, ಶ್ರಿಯಾ ಶರಣ್, ಪ್ರಕಾಶ್ ರಾಜ್ ಸೇರಿದಂತೆ ಬೃಹತ್ ತಾರಾಗಣ ಈ ಚಿತ್ರದಲ್ಲಿದೆ.

