ಲಖನೌ: ಪ್ರೀತಿ ಕುರುಡು ಎಂಬ ಮಾತಿದೆ ಮಾತ್ರವಲ್ಲ ಪ್ರೀತಿಗೆ ಜಾತಿ, ಮತ, ಧರ್ಮ, ವಯಸ್ಸಿನ ಹಂಗಿಲ್ಲ ಎಂಬ ಮಾತೂ ಇದೆ. ಇದನ್ನೇ ನಿಜವಾಗಿಸಿದೆ ಇಲ್ಲೊಂದು ಜೋಡಿ. ತನಗಿಂತ 45 ವರ್ಷ ಹಿರಿಯನಾದ 75ರ ವೃದ್ಧನೊಂದಿಗೆ 30 ವರ್ಷದ ಯುವತಿ, ಸೋಷಿಯಲ್ ಮೀಡಿಯಾ ಬ್ಲಾಗರ್ ಮದುವೆಯಾಗಲು ಸಜ್ಜಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ 30 ವರ್ಷದ ಸೋಷಿಯಲ್ ಮೀಡಿಯಾ ಬ್ಲಾಗರ್ ರೀನಾ, 75 ವರ್ಷದ ರಾಮ್ ಸಾಗರ್ ಎಂಬ ವೃದ್ಧನನ್ನು ಪ್ರೀತಿಸಿ ಮದುವೆಯಾಗಲು ಸಜ್ಜಾಗಿದ್ದಾರೆ.
ಬರೋಬ್ಬರಿ 45 ವರ್ಷಗಳ ವಯಸ್ಸಿನ ಅಂತರವಿರುವ ಈ ಜೋಡಿಯ ನಿಶ್ಚಿತಾರ್ಥ ವಾರದ ಹಿಂದೆ ಅದ್ಧೂರಿಯಾಗಿ ನೆರವೇರಿದೆ. ಇವರ ನಿಶ್ಚಿತಾರ್ಥ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಧು ರೀನಾ, “ನಮ್ಮ ನಡುವಿನ ವಯಸ್ಸಿನ ಅಂತರ ನನಗೆ ಎಂದಿಗೂ ತೊಂದರೆ ಅನಿಸಿಲ್ಲ. ನಾನು ರಾಮ್ ಸಾಗರ್ ಅವರೊಂದಿಗೆ ತುಂಬಾ ಸಂತೋಷವಾಗಿದ್ದೇನೆ. ಅವರೇ ನನ್ನ ಬಾಳಿನ ಸಂಗಾತಿ. ಈ ನಿರ್ಧಾರದಿಂದ ನಾನು ಅತ್ಯಂತ ಖುಷಿಯಾಗಿದ್ದೇನೆ” ಎಂದು ಭಾವನಾತ್ಮಕವಾಗಿ ಹೇಳಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿಯ ಬಗ್ಗೆ ಪರ – ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಈ ಪ್ರೇಮ ವಿವಾಹವನ್ನು ಟೀಕಿಸಿದರೆ, ಇನ್ನು ಕೆಲವರು ‘ಮನಸ್ಸುಗಳು ಒಂದಾದ ಮೇಲೆ ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ’ ಎಂದು ಬೆಂಬಲಿಸುತ್ತಿದ್ದಾರೆ. ಆದರೆ ಇದ್ಯಾಅವ ಟೀಕೆ-ಟಿಪ್ಪಣಿಗಳಿಗೆ ಕಿವಿಗೊಡದ ರೀನಾ ಹಾಗೂ ರಾಮ್ ಸಾಗರ್ ಶೀಘ್ರದಲ್ಲೇ ಮದುವೆಯಾಗಲು ನಿರ್ಧರಿಸಿದ್ದು, ದಿನಾಂಕ ಕೂಡ ನಿಗದಿಯಾಗಿದೆ. ಈ ವಿಚಿತ್ರ ಪ್ರೇಮ ವಿವಾಹ ನೆಟ್ಟಿಗರನ್ನು ಹುಬ್ಬೇರಿಸುವಂತೆ ಮಾಡಿದೆ.
ಬೆಂಗಳೂರು ಏರ್ ಪೋರ್ಟ್ ನಲ್ಲಿ DRI ಕಾರ್ಯಾಚರಣೆ: 2.75 ಕೋಟಿ ಚಿನ್ನ ಜಪ್ತಿ: ಸಿಬ್ಬಂದಿ ಸೇರಿ ಮೂವರು ಅರೆಸ್ಟ್
ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಬಿ) ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಪ್ರಯಾಣಿಕರು ಸೇರಿದಂತೆ ಓರ್ವ ಸಿಬ್ಬಂದಿಯನ್ನ ಬಂಧಿಸಲಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 2.75 ಕೆಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಇಬ್ಬರು ಪ್ರಯಾಣಿಕರು ಹಾಗೂ ಅವರಿಗೆ ಸಾಥ್ ನೀಡಿದ ಓರ್ವ ಸಿಬ್ಬಂದಿ ಸೇರಿ ಮೂವರನ್ನು ಬಂಧಿಸಲಾಗಿದೆ.
ಸಿಂಗಾಪುರದಿಂದ ಬೆಂಗಳೂರು ಮೂಲಕ ದುಬೈಗೆ ತೆರಳಲು ಬಂದಿದ್ದ ಮೊಹಮ್ಮದ್ ಅಖಿಲ್ ಹಾಗೂ ದುಬೈನಿಂದ ಬೆಂಗಳೂರು ಮೂಲಕ ಮಾಲ್ಡೀವ್ಸ್ಗೆ ತೆರಳುತ್ತಿದ್ದ ಮೊಹಮ್ಮದ್ ನಾಸಿರ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಶ್ರೀಲಂಕಾ ಪ್ರಜೆಗಳಾಗಿದ್ದು, ಟ್ರಾನ್ಸಿಕ್ ವಿಮಾನ ಮೂಲಕ ದುಬೈ ಮತ್ತು ಮಾಲ್ಡೀವ್ಸ್ಗೆ ತೆರಳಲು ಬಂದಿದ್ದರು.
ಈ ಪ್ರಯಾಣಿಕರು ಕೆಐಎಬಿಯಲ್ಲಿ ಟ್ರಾವೆಲ್ ಫುಡ್ ಸರ್ವಿಸ್ (ಟಿಎಫ್ಎಸ್) ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಬಿನ್ ಜೋಸ್ ಎಂಬಾತನಿಗೆ ಈ ಚಿನ್ನ ನೀಡಲು ಪ್ಲ್ಯಾನ್ ಮಾಡಿದ್ದರು. ಆದರೆ, ಚಿನ್ನ ಹಸ್ತಾಂತರಿಸುವ ಮುನ್ನವೇ ಕಾರ್ಯಾಚರಣೆ ನಡೆಸಿದ ಡಿಆರ್ಐ ಅಧಿಕಾರಿಗಳು ಇಬ್ಬರು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗೆ ಕೋಟ್ಯಂತರ ರೂ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾ ತಂದಿದ್ದ ನಾಲ್ವರು ಪ್ರಯಾಣಿಕರನ್ನು ಕೆಂಪೇಗೌಡ ಏರ್ ಪೋರ್ಟ್ ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಬ್ಯಾಂಕಾಕ್ ಮತ್ತು ವಿಯೆಟ್ನಾಂನಿಂದ ಬಂದಿದ್ದ ನಾಲ್ವರು ಪ್ರಯಾಣಿಕರ ಬ್ಯಾಗ್ನಲ್ಲಿ 80 ಕೆಜಿ ಹೈಡ್ರೋಪೋನಿಕ್ಸ್ ಗಾಂಜಾ ಪತ್ತೆಯಾಗಿತ್ತು. ಇದರ ಮಾರುಕಟ್ಟೆ ಮೌಲ್ಯ 28 ಕೋಟಿ ರೂ ಎಂದು ಕಸ್ಟಮ್ಸ್ ಅಧಿಕಾರಿಗಳು ಅಂದಾಜಿಸಿದ್ದರು.
ಇದೇ ವೇಳೆ ಕೌಲಲಾಂಪುರ ಮತ್ತು ಅಬುಧಾಬಿಯಿಂದ ಬೆಂಗಳೂರಿಗೆ ಬಂದಿದ್ದ ಮತ್ತಿಬ್ಬರು ಪ್ರಯಾಣಿಕರು ಸಹ ತಮ್ಮ ಬ್ಯಾಗ್ನಲ್ಲಿ ಅಕ್ರಮವಾಗಿ ಚಿನ್ನ ತಂದು ಸಿಕ್ಕಿಬಿದ್ದಿದರು. 1 ಕೋಟಿ 75 ಲಕ್ಷ ರೂ ಮೌಲ್ಯದ 1 ಕೆಜಿ 201 ಗ್ರಾಂ ಚಿನ್ನವನ್ನ ಬ್ಯಾಗ್ನಲ್ಲಿ ಅಡಗಿಸಿಟ್ಟುಕೊಂಡು ಬಂದಿದ್ದರು. ಈ ಇಬ್ಬರು ಪ್ರಯಾಣಿಕರನ್ನು ವಶಕ್ಕೆ ಪಡೆದು. ಅಕ್ರಮ ಚಿನ್ನವನ್ನು ಜಪ್ತಿ ಮಾಡಲಾಗಿತ್ತು.

