ಪ್ರೋಟೀನ್ ಮತ್ತು ತರಕಾರಿಗಳ ಪೋಷಕಾಂಶಗಳನ್ನು ಹೊಂದಿರುವ ಮಸಾಲಾ ಚಿಕನ್ ಎಗ್ ಬುರ್ಜಿ ಸ್ಯಾಂಡ್‌ವಿಚ್, ಬೆಳಗಿನ ಉಪಾಹಾರ ಅಥವಾ ಸಂಜೆಯ ಹಸಿವಿಗೆ ಅತ್ಯುತ್ತಮ ಆಯ್ಕೆ. ಸುಲಭವಾಗಿ ಹಾಗೂ ರುಚಿಕರವಾಗಿ ಇದನ್ನು ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು: ಈ ಸ್ಯಾಂಡ್‌ವಿಚ್ ತಯಾರಿಸಲು 200 ಗ್ರಾಂ ಚಿಕನ್, 4 ಮೊಟ್ಟೆ, 6 ಬ್ರೆಡ್ ಸ್ಲೈಸ್, 1 ದೊಡ್ಡ ಈರುಳ್ಳಿ, 1 ಟೊಮೆಟೊ ಮತ್ತು 2 ಹಸಿಮೆಣಸಿನಕಾಯಿ ಬೇಕಾಗುತ್ತದೆ. ಮಸಾಲೆಗಾಗಿ ತಲಾ 2 ಚಮಚ ಅರಿಶಿನ, ಜೀರಿಗೆ ಪುಡಿ, ಕೊತ್ತಂಬರಿ ಪುಡಿ ಹಾಗೂ ಕೆಂಪು ಮೆಣಸಿನ ಪುಡಿಯನ್ನು ಸಿದ್ಧಪಡಿಸಿಕೊಳ್ಳಿ. ಇದರೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು, ಬೆಣ್ಣೆ, ಎಣ್ಣೆ ಮತ್ತು ಅರ್ಧ ಕಪ್ ಮಯೋನೈಸ್ ಅಗತ್ಯವಿರುತ್ತದೆ.
ತಯಾರಿಸುವ ವಿಧಾನ: ಮೊದಲು ಚಿಕನ್ ಅನ್ನು ಚೆನ್ನಾಗಿ ತೊಳೆದು, ಪ್ರೆಶರ್ ಕುಕ್ಕರ್‌ನಲ್ಲಿ ಸ್ವಲ್ಪ ಉಪ್ಪು ಮತ್ತು ನೀರು ಸೇರಿಸಿ ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ. ಚಿಕನ್ ತಣ್ಣಗಾದ ನಂತರ, ಮೂಳೆಗಳನ್ನು ಬೇರ್ಪಡಿಸಿ ಮಾಂಸವನ್ನು ಸಣ್ಣ ಸಣ್ಣ ತುಂಡುಗಳಾಗಿ (Shredded chicken) ಮಾಡಿಟ್ಟುಕೊಳ್ಳಿ.
ಇನ್ನೊಂದೆಡೆ, ಒಂದು ಪಾತ್ರೆಯಲ್ಲಿ ಮೊಟ್ಟೆಗಳನ್ನು ಒಡೆದು ಅದಕ್ಕೆ ಅರಿಶಿನ, ಉಪ್ಪು, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಮತ್ತು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಎಗ್ ಬೀಟ್ ಮಾಡಿಕೊಳ್ಳಿ.
ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಈರುಳ್ಳಿ ತಿಳಿ ಗುಲಾಬಿ ಬಣ್ಣಕ್ಕೆ ಬಂದಾಗ ಟೊಮೆಟೊ ಸೇರಿಸಿ ಮಿಕ್ಸ್ ಮಾಡಿ. ನಂತರ ಉರಿ ಕಡಿಮೆ ಮಾಡಿ ಮೊಟ್ಟೆಯ ಮಿಶ್ರಣವನ್ನು ಸುರಿದು ಸತತವಾಗಿ ಕೈಾಡಿಸುತ್ತಾ ಬುರ್ಜಿ ತಯಾರಿಸಿ. ಮೊಟ್ಟೆ ಅರ್ಧ ಬೆಂದಾಗ ಸಿದ್ಧಪಡಿಸಿದ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಮಿಶ್ರಣವು ಸಣ್ಣ ಸಣ್ಣ ತುಂಡುಗಳಂತಾದಾಗ ಒಲೆಯಿಂದ ಕೆಳಗಿಳಿಸಿ.
ಸ್ಯಾಂಡ್‌ವಿಚ್ ಸಿದ್ಧಪಡಿಸುವ ರೀತಿ: ಬ್ರೆಡ್ ಸ್ಲೈಸ್‌ಗಳ ಎರಡೂ ಬದಿಗಳಿಗೆ ಬೆಣ್ಣೆ ಸವರಿ ಟೋಸ್ಟರ್‌ನಲ್ಲಿ ಲಘುವಾಗಿ ಟೋಸ್ಟ್ ಮಾಡಿ. ನಂತರ ಒಂದು ಬ್ರೆಡ್ ಸ್ಲೈಸ್ ಮೇಲೆ ಮಯೋನೈಸ್ ಹಚ್ಚಿ, ಅದರ ಮೇಲೆ ಸಿದ್ಧಪಡಿಸಿದ ಚಿಕನ್ ಎಗ್ ಬುರ್ಜಿಯನ್ನು ಯಥೇಚ್ಛವಾಗಿ ಹರಡಿ. ಅದರ ಮೇಲೆ ಮತ್ತೊಂದು ಬ್ರೆಡ್ ಸ್ಲೈಸ್ ಇಟ್ಟು ಲಘುವಾಗಿ ಒತ್ತಿ. ಈಗ ಸ್ಯಾಂಡ್‌ವಿಚ್ ಅನ್ನು ಮಧ್ಯಕ್ಕೆ ಕತ್ತರಿಸಿದರೆ ರುಚಿಯಾದ ಮಸಾಲಾ ಚಿಕನ್ ಎಗ್ ಬುರ್ಜಿ ಸ್ಯಾಂಡ್‌ವಿಚ್ ಸವಿಯಲು ಸಿದ್ಧ.

