ದೀಪಾವಳಿ ಹಬ್ಬದ ಸಂಭ್ರಮವು ಮುಖ್ಯ ದಿನಕ್ಕಿಂತ ಮುಂಚಿತವಾಗಿ ಆರಂಭವಾಗುತ್ತದೆ. ಮನೆಗೆ ಬರುವ ಅತಿಥಿಗಳು, ಸ್ನೇಹಿತರ ಕೂಟ ಹಾಗೂ ಸಂಭ್ರಮದ ಪಾರ್ಟಿಗಳಲ್ಲಿ ರುಚಿಕರವಾದ ತಿಂಡಿ ತಿನಿಸುಗಳಿಲ್ಲದೆ ಹಬ್ಬದ ಮಜಾವೇ ಇರುವುದಿಲ್ಲ. ಅತಿಥಿಗಳನ್ನು ಸತ್ಕರಿಸಲು ಗಂಟೆಗಟ್ಟಲೆ ಅಡುಗೆಮನೆಯಲ್ಲಿ ಕಳೆಯುವ ಬದಲು, ಕೇವಲ ಮೂವತ್ತು ನಿಮಿಷಗಳಲ್ಲಿ ರುಚಿಕರವಾದ ಚಿಕನ್ ಸ್ನ್ಯಾಕ್ಸ್ ತಯಾರಿಸಿ ಎಲ್ಲರ ಮೆಚ್ಚುಗೆ ಗಳಿಸಬಹುದು.
ಹಬ್ಬದ ಕೂಟಗಳಿಗೆ ಹೇಳಿ ಮಾಡಿಸಿದಂತೆ ಇರುವ ಐದು ಸುಲಭ ಹಾಗೂ ಚುರುಕಾದ ಚಿಕನ್ ರೆಸಿಪಿಗಳ ವಿವರ ಇಲ್ಲಿದೆ:
ಮೊನೆಯದಾಗಿ, ಕ್ರಿಸ್ಪಿ ಚಿಕನ್ ಪಾಪ್‌ಕಾರ್ನ್. ಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಅನ್ನು ಮಸಾಲೆ ಹಿಟ್ಟಿನಲ್ಲಿ ಕವರ್ ಮಾಡಿ ಗೋಲ್ಡನ್ ಬಣ್ಣ ಬರುವವರೆಗೆ ಕರಿದರೆ ಬಾಯಲ್ಲಿ ನೀರೂರಿಸುವ ಸ್ನ್ಯಾಕ್ಸ್ ಸಿದ್ಧವಾಗುತ್ತದೆ. ಇದರೊಂದಿಗೆ ಖಾರದ ಮೇಯೊ ಅಥವಾ ಪುದೀನಾ ಚಟ್ನಿ ಬಳಸಿದರೆ ರುಚಿ ಇಮ್ಮಡಿಯಾಗುತ್ತದೆ.
ಎರಡನೆಯದಾಗಿ, ಚಿಕನ್ ಟಿಕ್ಕಾ ಬೈಟ್ಸ್. ಚಿಕನ್ ಟಿಕ್ಕಾ ತಯಾರಿಸಲು ದೀರ್ಘಕಾಲದ ಮ್ಯಾರಿನೇಷನ್ ಬೇಕಿಲ್ಲ. ಸಣ್ಣ ಗಾತ್ರದ ಚಿಕನ್ ತುಂಡುಗಳಿಗೆ ಮೊಸರು ಹಾಗೂ ಮಸಾಲೆಗಳನ್ನು ಸವರಿ ಏರ್ ಫ್ರೈಯರ್, ಓವನ್ ಅಥವಾ ಬಾಣಲೆಯಲ್ಲಿ ಬೇಯಿಸಿದರೆ ಹೊಗೆಯ ಪರಿಮಳದೊಂದಿಗೆ ರುಚಿಕರವಾದ ಟಿಕ್ಕಾ ಸಿದ್ಧಗೊಳ್ಳುತ್ತದೆ.
ಮೂರನೆಯದಾಗಿ, ಹನಿ ಚಿಲ್ಲಿ ಚಿಕನ್. ಅತಿಥಿಗಳಿಗೆ ಇಂಡೋ-ಚೈನೀಸ್ ರುಚಿ ಇಷ್ಟವಾದರೆ ಇದು ಅತ್ಯುತ್ತಮ ಆಯ್ಕೆ. ಜೇನುತುಪ್ಪ, ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯ ಸಮ್ಮಿಶ್ರಣದಲ್ಲಿ ತಯಾರಿಸಿದ ಸಿಹಿ ಮತ್ತು ಖಾರದ ಹದವಾದ ಮಿಶ್ರಣದಲ್ಲಿ ಕರಿದ ಚಿಕನ್ ಅನ್ನು ಬೆರೆಸಿ ಸವಿಯಲು ನೀಡಬಹುದು.
ನಾಲ್ಕನೆಯದಾಗಿ, ಚಿಕನ್ ಚೀಸ್ ಸ್ಯಾಂಡ್‌ವಿಚ್ ಪಾಕೆಟ್ಸ್. ನುಣ್ಣಗೆ ಬಿಡಿಸಿದ ಚಿಕನ್, ಚೀಸ್ ಹಾಗೂ ಸರಳ ಮಸಾಲೆಗಳನ್ನು ಬಳಸಿ ಗರಿಗರಿಯಾದ ಸ್ಯಾಂಡ್‌ವಿಚ್ ತಯಾರಿಸಬಹುದು. ಹೊರಗೆ ಗರಿಗರಿಯಾಗಿ ಮತ್ತು ಒಳಗೆ ಚೀಸ್ ನೊಂದಿಗೆ ಜ್ಯೂಸಿಯಾಗಿರುವ ಇದು ದೊಡ್ಡ ಗುಂಪಿನ ಅತಿಥಿಗಳಿಗೆ ಬಡಿಸಲು ತುಂಬಾ ಅನುಕೂಲಕರ.
ಐದನೆಯದಾಗಿ, ಚಿಕನ್ ಸೀಕ್ ಕಬಾಬ್. ನುಣ್ಣಗೆ ರುಬ್ಬಿದ ಚಿಕನ್ ಹಾಗೂ ಪರಿಮಳಯುಕ್ತ ಮಸಾಲೆಗಳನ್ನು ಬಳಸಿ ಕಡಿಮೆ ಸಮಯದಲ್ಲಿ ಗ್ರೀಲ್ ಪ್ಯಾನ್ ಅಥವಾ ಏರ್ ಫ್ರೈಯರ್ ನಲ್ಲಿ ರಸಭರಿತವಾದ ಕಬಾಬ್ ತಯಾರಿಸಬಹುದು. ಹಸಿರು ಚಟ್ನಿಯೊಂದಿಗೆ ಇದನ್ನು ಸವಿಯಲು ನೀಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ.

