ಇಡ್ಲಿ ಮತ್ತು ಸಾಂಬಾರ್ ಅಥವಾ ಚಟ್ನಿ ಕಾಂಬಿನೇಷನ್ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಪ್ರತಿದಿನ ಒಂದೇ ರೀತಿಯ ಚಟ್ನಿ ಸೇವಿಸಿ ಬೇಸರವಾಗಿದ್ದರೆ, ತೆಂಗಿನಕಾಯಿ ಸಾಸ್ ಜೊತೆ ಈ ವಿಶಿಷ್ಟ ಇಡ್ಲಿ ರೆಸಿಪಿಯನ್ನು ಒಮ್ಮೆ ಪ್ರಯತ್ನಿಸಬಹುದು. ಅತ್ಯಂತ ಸುಲಭವಾಗಿ ಹಾಗೂ ಕಡಿಮೆ ಅವಧಿಯಲ್ಲಿ ತಯಾರಿಸಬಹುದಾದ ಈ ತಿಂಡಿ ಬೆಳಗಿನ ಉಪಾಹಾರಕ್ಕಾಗಲಿ ಅಥವಾ ಮಧ್ಯಾಹ್ನದ ಊಟಕ್ಕಾಗಲಿ ಹೇಳಿಮಾಡಿಸಿದಂತಿದೆ.
ಬೇಕಾಗುವ ಸಾಮಗ್ರಿಗಳು:
-
ಇಡ್ಲಿ ಮಾಡಲು: 2 ಕಪ್ ಇಡ್ಲಿ ಅಕ್ಕಿ, 1 ಕಪ್ ಉದ್ದಿನಬೇಳೆ, 1 ಟೀಸ್ಪೂನ್ ಮೆಂತ್ಯ ಕಾಳು ಮತ್ತು ರುಚಿಗೆ ತಕ್ಕಷ್ಟು ಉಪ್ಪು.
-
ತೆಂಗಿನಕಾಯಿ ಸಾಸ್ಗೆ: 1 ಕಪ್ ತುರಿದ ತೆಂಗಿನಕಾಯಿ, 2 ಹಸಿರು ಮೆಣಸಿನಕಾಯಿ, ಅರ್ಧ ಇಂಚು ಶುಂಟಿ, ಅರ್ಧ ಟೀಸ್ಪೂನ್ ಸಾಸಿವೆ, ಅರ್ಧ ಟೀಸ್ಪೂನ್ ಉದ್ದಿನಬೇಳೆ, 8-10 ಕರಿಬೇವು, 1 ಟೇಬಲ್ ಸ್ಪೂನ್ ಎಣ್ಣೆ ಹಾಗೂ ಅಗತ್ಯಕ್ಕೆ ತಕ್ಕಷ್ಟು ನೀರು ಮತ್ತು ಉಪ್ಪು.
ತಯಾರಿಸುವ ವಿಧಾನ:
-
ಇಡ್ಲಿ ತಯಾರಿಕೆ: ಅಕ್ಕಿ ಮತ್ತು ಉದ್ದಿನಬೇಳೆಯನ್ನು (ಮೆಂತ್ಯ ಕಾಳಿನೊಂದಿಗೆ) ಪ್ರತ್ಯೇಕವಾಗಿ ನೀರು ಹಾಕಿ 4 ರಿಂದ 6 ಗಂಟೆಗಳ ಕಾಲ ನೆನೆಸಿಡಿ. ನಂತರ ಉದ್ದಿನಬೇಳೆಯನ್ನು ನಯವಾಗಿ ಹಾಗೂ ಅಕ್ಕಿಯನ್ನು ರವೆಯಂತೆ ತರಿತರಿಯಾಗಿ ರುಬ್ಬಿಕೊಂಡು ಒಂದಾಗಿ ಮಿಕ್ಸ್ ಮಾಡಿ, ಉಪ್ಪು ಸೇರಿಸಿ 8 ಗಂಟೆಗಳ ಕಾಲ ಹುಳಿ ಬರಲು (ಫರ್ಮೆಂಟೇಶನ್) ಬಿಡಿ. ಹಿಟ್ಟು ಉಬ್ಬಿ ಬಂದ ಮೇಲೆ ಇಡ್ಲಿ ಪಾತ್ರೆಯ ತಟ್ಟೆಗೆ ಎಣ್ಣೆ ಸವರಿ, ಹಿಟ್ಟು ಹೊಯ್ದು 10-12 ನಿಮಿಷ ಹಾವಿಯಲ್ಲಿ ಬೇಯಿಸಿದರೆ ಮೆದುವಾದ ಇಡ್ಲಿ ಸಿದ್ಧವಾಗುತ್ತದೆ.
-
ತೆಂಗಿನಕಾಯಿ ಸಾಸ್ ಹಾಗೂ ಸರ್ವಿಂಗ್: ಮಿಕ್ಸಿ ಜಾರ್ಗೆ ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಶುಂಟಿ, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿಕೊಳ್ಳಿ. ನಂತರ ಒಂದು ಸಣ್ಣ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಉದ್ದಿನಬೇಳೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಮಾಡಿ, ರುಬ್ಬಿದ ತೆಂಗಿನಕಾಯಿ ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಬಿಸಿಯಾದ ಇಡ್ಲಿಗಳನ್ನು ಪ್ಲೇಟ್ನಲ್ಲಿಟ್ಟು, ಅದರ ಮೇಲೆ ಈ ಘಮಘಮಿಸುವ ತೆಂಗಿನಕಾಯಿ ಸಾಸ್ ಹೊಯ್ದು ಸವಿಯಲು ನೀಡಬಹುದು.

