ನವದೆಹಲಿ: ರಾಜ್ಯಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸಿ, ಮುಂದಿನ 3 ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಸರ್ವೋಚ್ಛ ನ್ಯಾಯಾಲಯ ಸೂಚನೆ ನೀಡಿದೆ.
ಸೌಜನ್ಯ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ಪೀಠ, ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಅಧಿಕಾರಿಗಳನ್ನು ಹೊಸ ತನಿಖೆಯಲ್ಲಿ ಸೇರಿಸದಂತೆ ನಿರ್ದೇಶನ ನೀಡಿದ್ದು, ಹೊಸ ತಂಡದಿಂದ ಸ್ವತಂತ್ರವಾಗಿ ಮರು ತನಿಖೆ ನಡೆಸುವಂತೆ ಸೂಚಿಸಿದೆ.
ಪ್ರಕರಣದ ತನಿಖೆ ಮತ್ತು ಸಾಕ್ಷ್ಯಗಳ ಕುರಿತು ಈ ಹಿಂದೆ ಸುಪ್ರೀಂ ಕೋರ್ಟ್ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಸಂತೋಷ್ ರಾವ್ ನಿರಪರಾಧಿ, ಪ್ರಕರಣವನ್ನು ಬೇರೆ ಯಾರೋ ನಡೆಸಿದ್ದಾರೆ ಎಂಬುದು ಅರ್ಜಿದಾರರ ಪರ ವಕೀಲರ ವಾದವಾಗಿತ್ತು. 140–150 ಪುಟಗಳ ಸಾಕ್ಷ್ಯವನ್ನು ತೆಗೆದುಹಾಕಲಾಗಿದೆ ಎಂಬ ಆರೋಪವೂ ವಿಚಾರಣೆಯಲ್ಲಿ ಪ್ರಸ್ತಾಪವಾಗಿತ್ತು.
ಸಿಬಿಐ ತನಿಖೆಯು ಕಳಪೆಯಾಗಿದೆ ಎಂದು ಆರೋಪಿಸಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಸೌಜನ್ಯಾ ಪ್ರಕರಣದ ಮರುತನಿಖೆಗೆ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಉಜಿರೆ ಎಸ್ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ 17 ವರ್ಷದ ಸೌಜನ್ಯಾಳನ್ನು 2012 ರ ಅಕ್ಟೋಬರ್ನಲ್ಲಿ ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ ಕೆಲವು ದಿನಗಳ ನಂತರ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಮುಖ್ಯ ಆರೋಪಿಯನ್ನಾಗಿ ಬಂಧಿಸಿದ್ದರು. ಸಾರ್ವಜನಿಕರ ತೀವ್ರ ಆಕ್ರೋಶ ಮತ್ತು ಪ್ರತಿಭಟನೆಗಳ ಬಳಿಕ ಪ್ರಕರಣವನ್ನು ಮೊದಲು ಸಿಐಡಿ ಮತ್ತು ನಂತರ ಕೇಂದ್ರ ತನಿಖಾ ದಳ ಸಿಬಿಐಗೆ ವಹಿಸಲಾಗಿತ್ತು.
ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯವು ಆರೋಪಿ ಸಂತೋಷ್ ರಾವ್ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಕಾರಣ ಆತನನ್ನು ಖುಲಾಸೆಗೊಳಿಸಿತ್ತು.
ಸಿಬಿಐ ತನಿಖೆಯಲ್ಲಿ ಲೋಪದೋಷಗಳಿದ್ದು, ನೈಜ ಆರೋಪಿಗಳನ್ನು ರಕ್ಷಿಸಲಾಗಿದೆ ಎಂದು ಆರೋಪಿಸಿ ಸೌಜನ್ಯಾಳ ತಾಯಿ ಕುಸುಮಾವತಿ ಗೌಡ ಅವರು ಮರುತನಿಖೆಗೆ ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಹೈಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ತನಿಖಾ ಸಂಸ್ಥೆಯ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್, ಪ್ರಕರಣದ ಮರುತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದು, ಮೂರು ತಿಂಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಹೊಸ ತನಿಖಾ ತಂಡದಿಂದ ಪ್ರಕರಣದ ಮರು ತನಿಖೆ ಶೀಘ್ರದಲ್ಲೇ ಆರಂಭವಾಗಲಿದೆ.

