ಸರ್ವಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಲ್ಲದೆ, ಹಲವು ದಿಗ್ಗಜ ನಾಯಕರ ಅಡಿಯಲ್ಲಿಯೂ ಆಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ರೆಡ್ಡಿಟ್ನಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ (Q&A Session) ಅಭಿಮಾನಿಯೊಬ್ಬರು ಸಚಿನ್ಗೆ ನೆಚ್ಚಿನ ನಾಯಕ ಯಾರು ಎಂದು ಪ್ರಶ್ನಿಸಿದ್ದು, ಅದಕ್ಕೆ ಸಚಿನ್ ನೀಡಿದ ಉತ್ತರ ಕ್ರೀಡಾಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸಂವಾದದ ವೇಳೆ ಅಭಿಮಾನಿಯೊಬ್ಬರು, “ಭಾರತ ಟೆಸ್ಟ್ ತಂಡದ ನಾಯಕತ್ವ ವಹಿಸಿದ ಅನುಭವ ಹೇಗಿತ್ತು? ಹಾಗೂ ಸೌತ್ ಆಫ್ರಿಕಾದ ಟೆಸ್ಟ್ ನಾಯಕ ತೆಂಬಾ ಬವುಮಾ ಅವರ ನಾಯಕತ್ವವನ್ನು ಹೇಗೆ ಮೌಲ್ಯಮಾಪನ ಮಾಡುತ್ತೀರಿ? ನಿಮ್ಮ ನೆಚ್ಚಿನ ನಾಯಕ ಯಾರು?” ಎಂದು ಪ್ರಶ್ನೆ ಕೇಳಿದ್ದರು.
ಈ ಪ್ರಶ್ನೆಗೆ ಉತ್ತರಿಸಿದ ಸಚಿನ್ ತೆಂಡೂಲ್ಕರ್, ತಮ್ಮ ನಾಯಕತ್ವದ ದಿನಗಳು ಹಾಗೂ ತಮಗೆ ಇಷ್ಟವಾದ ನಾಯಕರ ಬಗ್ಗೆ ಮನಬಿಚ್ಚಿ ಮಾತನಾಡಿದರು.
ಸಚಿನ್ ಅವರ ಉತ್ತರ ಹೀಗಿತ್ತು:
-
ನಾಯಕತ್ವದ ದಿನಗಳು: ಭಾರತ ತಂಡವನ್ನು ಮುನ್ನಡೆಸುವುದು ನನಗೆ ಸಿಕ್ಕ ದೊಡ್ಡ ಗೌರವ. ಆದರೆ, 90ರ ದಶಕದಲ್ಲಿ ಇಂದಿನ ಬಿಸಿಸಿಐನಂತೆ ಸಂಪೂರ್ಣ ವೃತ್ತಿಪರತೆ ಇರಲಿಲ್ಲ ಮತ್ತು ತಂಡ ಆಯ್ಕೆಯಲ್ಲಿ ನಾಯಕನಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ಕಠಿಣ ಹಂತವನ್ನು ಎದುರಿಸುತ್ತಿತ್ತು.
-
ತೆಂಬಾ ಬವುಮಾ ಬಗ್ಗೆ ಮೆಚ್ಚುಗೆ: ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ ಅವರ ಕ್ರೀಡಾಸ್ಪೂರ್ತಿಯನ್ನು ನಾನು ಗೌರವಿಸುತ್ತೇನೆ. ಅವರು ತಂಡವನ್ನು ಮುಂಚೂಣಿಯಲ್ಲಿ ನಿಂತು ಮುನ್ನಡೆಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಐಸಿಸಿ ಟ್ರೋಫಿ ಗೆಲ್ಲುವುದು ಜಾಗತಿಕ ಕ್ರಿಕೆಟ್ಗೆ ಒಳ್ಳೆಯ ಬೆಳವಣಿಗೆ.
-
ನೆಚ್ಚಿನ ನಾಯಕರು: ನನ್ನ ನೆಚ್ಚಿನ ನಾಯಕರ ವಿಚಾರಕ್ಕೆ ಬಂದರೆ, ಸೌರವ್ ಗಂಗೂಲಿ ಮತ್ತು ಎಂ.ಎಸ್. ಧೋನಿ ಖಂಡಿತವಾಗಿಯೂ ನನ್ನ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ!
ಸಚಿನ್ ತೆಂಡೂಲ್ಕರ್ ಅವರು 2003ರ ಏಕದಿನ ವಿಶ್ವಕಪ್ ಫೈನಲ್ ತಲುಪಿದ್ದು ಸೌರವ್ ಗಂಗೂಲಿ ಅವರ ನಾಯಕತ್ವದಲ್ಲಿ ಹಾಗೂ 2011ರಲ್ಲಿ ವಿಶ್ವಕಪ್ ಮುಡಿಗೇರಿಸಿಕೊಂಡಿದ್ದು ಎಂ.ಎಸ್. ಧೋನಿ ಅವರ ಸಾರಥ್ಯದಲ್ಲಿ ಎಂಬುದು ಗಮನಾರ್ಹ.
ಸಚಿನ್ ಸ್ವತಃ 1996 ರಿಂದ 2000 ರವರೆಗೆ ಎರಡು ಅವಧಿಗಳಲ್ಲಿ ಒಟ್ಟು 25 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆದರೆ 2000ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ನಾಯಕತ್ವದಿಂದ ಕೆಳಗಿಳಿದಿದ್ದರು. ನಂತರ 2007ರಲ್ಲಿ ಮತ್ತೆ ಟೆಸ್ಟ್ ನಾಯಕತ್ವ ಆಫರ್ ಬಂದಾಗ ಅದನ್ನು ನಿರಾಕರಿಸಿದರು. ಆ ಬಳಿಕ ಬಿಸಿಸಿಐ ಧೋನಿ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ಹಸ್ತಾಂತರಿಸಿತ್ತು.

