ವಿವಾಹವಾದ ದಂಪತಿಗಳು ಸಂತಾನ ಭಾಗ್ಯ ಬಯಸುವುದು ಸಹಜ. ಆದರೆ ಮಗು ಜನನಕ್ಕೂ ಮುನ್ನವೇ ವ್ಯಕ್ತಿಯೊಬ್ಬ ಅಪರಾಧ ಕೃತ್ಯವೊಂದರಲ್ಲಿ ಜೈಲು ಪಾಲಾಗಿದ್ದು, ಇದೀಗ ಆತನ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಆಕೆಯನ್ನು ಗರ್ಭಿಣಿ ಮಾಡಲು 15 ದಿನಗಳ ಕಾಲ ಕೈದಿಗೆ ಪೆರೋಲ್ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಿದೆ.
ಇಂತಹದೊಂದು ಅಪರೂಪದ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ನ್ಯಾಯಾಲಯದಿಂದ ಶಿಕ್ಷೆಗೆ ಗುರಿಯಾಗಿದ್ದ 34 ವರ್ಷದ ನಂದಲಾಲ್ ಎಂಬ ಕೈದಿಯ ಪತ್ನಿ ರಾಜಸ್ಥಾನ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ತನ್ನ ʼಸಂತಾನದ ಹಕ್ಕುʼ ಪ್ರತಿಪಾದಿಸಿದ್ದರು.
ಇದನ್ನು ಆದ್ಯತೆಯ ಮೇಲೆ ಪರಿಗಣಿಸಿದ ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಹಾಗೂ ಫರ್ಜಂದ್ ಆಲಿ ಅವರಿದ್ದ ದ್ವಿಸದಸ್ಯ ಪೀಠ, ನಂದಲಾಲ್ ನನ್ನು 15 ದಿನಗಳ ಮಟ್ಟಿಗೆ ಪೆರೋಲ್ ಮೇಲೆ ಬಿಡುಗಡೆ ಮಾಡಲು ಆದೇಶಿಸಿದೆ.
ಅಲ್ಲದೇ ತೀರ್ಪಿನಲ್ಲಿ ನ್ಯಾಯಾಧೀಶರುಗಳು ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್ ಧರ್ಮದ ಸಿದ್ಧಾಂತಗಳನ್ನು ಉಲ್ಲೇಖಿಸಿದ್ದು, ಗರ್ಭಧರಿಸುವುದು ಮಹಿಳೆಯ ಮೊದಲ ಹಾಗೂ ಅತ್ಯಗತ್ಯ ಹಕ್ಕು ಎಂದು ಹೇಳಿದೆ.