ಆನ್ಲೈನ್ನಲ್ಲಿ ಫುಡ್ನ್ನು ಬುಕ್ ಮಾಡಿ ಅದು ಯಾವಾಗ ಬರುತ್ತೆ ಅಂತಾ ಕಾಯೋದೇ ಒಂದು ಮಜಾ. ಆದರೆ ನೀವು ಆರ್ಡರ್ ಮಾಡಿದ ತಿಂಡಿಯನ್ನ ಯಾರೋ ಮಾರ್ಗ ಮಧ್ಯದಲ್ಲೇ ತಿಂದಿದ್ದಾರೆ ಅಂತಾ ಗೊತ್ತಾದ್ರೆ ಏನು ಅನಿಸಬೋದು ನಿಮಗೆ..?
ಇಂತಹದ್ದೇ ಒಂದು ಘಟನೆಗೆ 21 ವರ್ಷದ ಯುವತಿ ಇಲ್ಲಿ ಇಲಿಯಾಸ್ ಸಾಕ್ಷಿಯಾಗಿದ್ದಾರೆ. ಆನ್ಲೈನ್ ಅಪ್ಲಿಕೇಶನ್ ಮೂಲಕ ತಿಂಡಿ ಆರ್ಡರ್ ಮಾಡಿದ್ದ ಯುವತಿಗೆ ನಿಮ್ಮ ಆಹಾರವನ್ನ ನಾನೇ ತಿಂದೆ ಎಂಬ ಸಂದೇಶ ದೊರೆತಿದೆ.
ಕ್ಷಮಿಸಿ , ನಿಮ್ಮ ತಿಂಡಿಯನ್ನ ನಾನೇ ತಿಂದೆ ಎಂದು ಡೆಲಿವರಿ ಬಾಯ್ ಸಂದೇಶ ತಲುಪಿಸಿದ್ದಾನೆ.
ಇಲ್ಯಾಸ್, ಸರಿ ಸುಮಾರು 1456.47 ರೂಪಾಯಿ ಮೌಲ್ಯಕ್ಕೆ 2 ಬರ್ಗರ್, ಚಿಪ್ಸ್ ಹಾಗೂ ಚಿಕನ್ ತಿನಿಸನ್ನ ಬುಕ್ ಮಾಡಿದ್ದರು. ಉಬರ್ ಈಟ್ಸ್ ಅಪ್ಲಿಕೇಶನ್ ಮೂಲಕ ಯುವತಿ ಈ ಆಹಾರವನ್ನ ಬುಕ್ ಮಾಡಿದ್ದಳು ಎನ್ನಲಾಗಿದೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ನನಗೆ ಆಹಾರ ಬಂದು ತಲುಪುತ್ತದೆ ಎಂದು ಕಾದಿದ್ದ ಯುವತಿಗೆ ಅಪ್ಲಿಕೇಶನ್ನಲ್ಲೂ ಡೆಲಿವರಿ ಬಾಯ್ ನಿಮ್ಮ ಹತ್ತಿರಕ್ಕೆ ಬರುತ್ತಿದ್ದಾನೆ ಎಂಬ ಸಂದೇಶ ಕಾಣುತ್ತಾ ಇತ್ತು. ಹೀಗಾಗಿ ಇನ್ನೇನು ಕೆಲವೇ ನಿಮಿಷಗಳಲ್ಲಿ ಮನೆಯ ಬೆಲ್ ರಿಂಗಣಿಸುತ್ತದೆ ಎಂದು ಇಲ್ಯಾಸ್ ಎಂದುಕೊಂಡಿದ್ದಳು. ಆದರೆ ಆ ಪ್ರಾಮಾಣಿಕ ಡೆಲಿವರಿ ಬಾಯ್ ಮಾತ್ರ ಫುಡ್ ಕೊಡೋದನ್ನ ಬಿಟ್ಟು ನಿಮ್ಮ ಆರ್ಡರ್ನ್ನು ನಾನೇ ತಿಂದೆ ಎಂದು ಮೆಸೇಜ್ ಮಾಡಿದ್ದಾನೆ.
ಆದರೆ ಈ ವಿಚಾರ ತಿಳಿದ ಬಳಿಕ ಊಬರ್ ಈಟ್ಸ್ ಸಂಸ್ಥೆ ಈಕೆಗೆ ಉಚಿತವಾಗಿ ಫುಡ್ ಡೆಲಿವರಿ ಮಾಡಿದೆ. ಆದರೆ ಆಕೆ ಡೆಲಿವರಿ ಡ್ರೈವರ್ ವಿರುದ್ಧ ದೂರನ್ನ ನೀಡಲು ನಿರಾಕರಿಸಿದ್ದಾರೆ. ಬಹುಶಃ ಆತನಿಗೆ ಸಿಕ್ಕಾಪಟ್ಟೆ ಹಸಿವಾಗಿದ್ದಿರಬಹುದು. ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಯಾರದ್ದೋ ಉದ್ಯೋಗ ಹೋಗಲು ಕಾರಣೀಕರ್ತಳಾಗಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾಳೆ.