HomeUncategorizedಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ಘೋಷಣೆಗೆ ಕ್ರಮ: ಪಶ್ಚಿಮ ಘಟ್ಟ ಟಾಸ್ಕ್ ಫೋರ್ಸ್ ಅಧ್ಯಕ್ಷ...

ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಮುಕ್ತ ವಲಯ ಘೋಷಣೆಗೆ ಕ್ರಮ: ಪಶ್ಚಿಮ ಘಟ್ಟ ಟಾಸ್ಕ್ ಫೋರ್ಸ್ ಅಧ್ಯಕ್ಷ ಮೊಹ್ಮದ್ ತಬ್ರೇಝ ಆಲಂ ಷರೀಫ್

ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಊಟಿಯ ಮಾದರಿಯಲ್ಲಿ ಪ್ಲಾಸ್ಟಿಕ್ ಮುಕ್ತ ವಲಯವೆಂದು ಘೋಷಿಸಲು ಅನುಕೂಲವಾಗುವಂತೆ ಹಾಗೂ ಎಲ್ಲೆಂದರಲ್ಲಿ ಕಸ ಹಾಕುವುದನ್ನು ನಿಯಂತ್ರಿಸಲು ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ಎಲ್ಲಾ ಪ್ರವಾಸಿ ರೆಸಾರ್ಟ್‌ಗಳೊಂದಿಗೆ ಸೇರಿ ಜಾಗೃತಿ ಅಭಿಯಾನ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಮೊಹ್ಮದ್‌ ತಬ್ರೇಝ ಆಲಂ ಷರೀಫ್‌ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಗಳಿಗೆ ಸೂಚಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಏರ್ಪಡಿಸಲಾಗಿದ್ದ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಈವರೆಗೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನೀಡಿರುವ ಕ್ವಾರಿ ಪರವಾನಗಿಗಳ ವಿವರವಾದ ವರದಿ ನೀಡಬೇಕು. ಜೋಗ ಮತ್ತು ಪಶ್ಚಿಮ ಘಟ್ಟ ಅನುಭವ ಕೇಂದ್ರ ಸ್ಥಾಪಿಸಲು ಸಾಗರ ಶಾಸಕರು ಮತ್ತು ಪ್ರವಾಸೋದ್ಯಮ ಇಲಾಖೆ ಸಮನ್ವಯ ಸಾಧಿಸಿ ಕೈಗೊಂಡ ಕ್ರಮಗಳ ಬಗ್ಗೆ ತ್ವರಿತವಾಗಿ ಲಿಖಿತ ವರದಿ ನೀಡುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶಿವಮೊಗ್ಗದ ಪಶ್ಚಿಮ ಘಟ್ಟ ಪ್ರದೇಶದಲ್ಲಿರುವ ಎಲ್ಲಾ ದರ್ಗಾಗಳಿಗೆ ಸಂಬಂಧಿಸಿದಂತೆ ವಿಸ್ತೃತ ವರದಿ ನೀಡುವಂತೆ ಜಿಲ್ಲಾ ವಕ್ಫ್ ಅಧಿಕಾರಿಗೆ ಸೂಚಿಸಿದ ಅವರು, ಹೊಸನಗರ ತಾಲೂಕು ಹೆದ್ದಾರಿಪುರದ ವಿವಾದಿತ ಕೈಗಾರಿಕಾ ಜಮೀನಿನ ಬಗ್ಗೆಯೂ ವಿವರವಾದ ವರದಿ ನೀಡಬೇಕು. ಅಲ್ಲದೇ ವಿವಾದಿತ ಸ್ಥಳದ ಖುದ್ದು ಭೇಟಿಗೆ ದಿನಾಂಕ ನಿಗದಿಪಡಿಸುವಂತೆ ಸಾಗರದ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು.

ಸಾಗರ ತಾಲೂಕಿನ ಚೌಡೇಶ್ವರಿ ದೇವಸ್ಥಾನದ ಜಮೀನಿನ ಹಕ್ಕುಪತ್ರ ಬಹಳ ದಿನಗಳಿಂದ ಬಾಕಿ ಇರುವ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನಿಸಲಾಗಿ, ಅರಣ್ಯ ಇಲಾಖೆ(FC) ಮತ್ತು ವನ್ಯಜೀವಿ ಅನುಮತಿ ಸಿಕ್ಕ ನಂತರ ಹಕ್ಕುಪತ್ರ ವಿತರಿಸುವ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದ ಅವರು. ಅನುಮತಿ ಪ್ರಕ್ರಿಯೆ ಬಗ್ಗೆ ಲಿಖಿತ ವರದಿ ನೀಡುವಂತೆ ಅಧ್ಯಕ್ಷರು ಸೂಚಿಸಿದರು. ಈ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ ಬಾಕಿ ಇರುವ ಕೇಸ್‌ಗಳ ವಿವರ, ಅರ್ಜಿದಾರರ ಹೆಸರು ಮತ್ತು ಕಾಲಮಿತಿ ಬಗ್ಗೆ ವರದಿ ನೀಡುವಂತೆಯೂ ಮುಜರಾಯಿ ತಹಶೀಲ್ದಾರ್‌ಗೆ ಸೂಚಿಸಿದರು.

ತೀರ್ಥಹಳ್ಳಿ ತಾಲೂಕು ಮಲೆಶಂಕರ ದೇವಸ್ಥಾನದ ಆವರಣದಲ್ಲಿ ಭೂಗತ ಕೇಬಲ್ ಅಳವಡಿಸಬೇಕು. ಪಶ್ಚಿಮ ಘಟ್ಟಗಳ ಶ್ರೀಮಂತ ಪರಂಪರೆಯನ್ನು ಬಿಂಬಿಸುವ ವೋಲ್ವೋ ಬಸ್‌ನಲ್ಲಿ ಸಂಚಾರಿ ವಸ್ತುಸಂಗ್ರಹಾಲಯ (Mobile Museum) ಸ್ಥಾಪನೆ ಮತ್ತು ಪಶ್ಚಿಮಘಟ್ಟ ಗೀತೆ(Anthem)ಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲಿ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

ಪಶ್ಚಿಮ ಘಟ್ಟ ಟಾಸ್ಕ್ ಫೋರ್ಸ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಡಿಎಫ್‌ಒ ಅಜ್ಜಯ್ಯ, ವನ್ಯಜೀವಿ ಡಿಎಫ್‌ಒ ಪ್ರಸನ್ನ ಪಟಗಾರ್, ಸಾಗರ ಡಿಎಫ್‌ಒ ಫಯಾಜ್, ಜಿ.ಪಂ. ಉಪಕಾರ್ಯದರ್ಶಿ ಅನ್ನಪೂರ್ಣ, ಸಾಗರ ಉಪವಿಭಾಗಾಧಿಕಾರಿ ವೀರೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular