ಗಡಿಯಲ್ಲಿ ಶತ್ರುಗಳ ವಿರುದ್ಧ ಹೋರಾಡುವುದಷ್ಟೇ ಅಲ್ಲ, ಸಂಕಷ್ಟದಲ್ಲಿರುವ ದೇಶದ ಜನರ ರಕ್ಷಣೆಗೆ ನಿಲ್ಲುವುದರಲ್ಲೂ ಭಾರತೀಯ ಸೇನೆ ಯಾವಾಗಲೂ ಮುಂಚೂಣಿಯಲ್ಲಿರುತ್ತದೆ. ಇದಕ್ಕೆ ಸಾಕ್ಷಿಯಾಗಿ ಮಥುರಾ ರೈಲ್ವೆ ನಿಲ್ದಾಣದಲ್ಲಿ ನಡೆದ ಹೃದಯಸ್ಪರ್ಶಿ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಘಟನೆಯ ಹಿನ್ನೆಲೆ ರೂಪ್ ಎಂಬ ಯುವತಿ ಹೋಳಿ ಹಬ್ಬ ಮುಗಿಸಿ ಮಥುರಾದಿಂದ ದೆಹಲಿಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಆಕೆಯ ಫೋನ್ ಚಾರ್ಜ್ ಕೇವಲ ಶೇ. 2 ರಷ್ಟಿತ್ತು. ದೆಹಲಿಗೆ ಹೋಗುವ ರೈಲು ರಾತ್ರಿ 8:45ಕ್ಕೆ ಬರಬೇಕಿತ್ತು. ಇತ್ತ ಮಗಳ ಸುರಕ್ಷತೆಯ ಬಗ್ಗೆ ಆತಂಕದಲ್ಲಿದ್ದ ಪೋಷಕರು ಆಕೆಯ ಲೈವ್ ಲೊಕೇಶನ್ (Live Location) ಅಪ್‌ಡೇಟ್‌ಗಾಗಿ ಕಾಯುತ್ತಿದ್ದರು. ದುರದೃಷ್ಟವಶಾತ್, ಆಕೆಯ ಪವರ್ ಬ್ಯಾಂಕ್ ಹೋಳಿ ಸಂಭ್ರಮದ ವೇಳೆ ನೀರಿನಲ್ಲಿ ಬಿದ್ದು ಹಾಳಾಗಿತ್ತು.
ನೆರವಿಗೆ ಬಾರದ ಅಂಗಡಿಗಳು ತನ್ನ ಪರಿಸ್ಥಿತಿಯನ್ನು ವಿವರಿಸಿ ಕೇವಲ 5 ನಿಮಿಷ ಚಾರ್ಜ್ ಮಾಡಲು ಅವಕಾಶ ನೀಡುವಂತೆ ರೂಪಾ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿದ್ದ ಮೂರು ಪ್ರತ್ಯೇಕ ಮಳಿಗೆಗಳನ್ನು (Stalls) ಕೇಳಿಕೊಂಡರು. ಆದರೆ ಯಾರೊಬ್ಬರೂ ಆಕೆಗೆ ಸಹಾಯ ಮಾಡಲು ಮುಂದೆ ಬರಲಿಲ್ಲ. ಕಂಗಾಲಾದ ಆಕೆಗೆ ವೇಟಿಂಗ್ ರೂಮ್‌ಗೆ ಹೋಗಲು ಸಮಯವಿರಲಿಲ್ಲ.
ಸೈನಿಕನ ನಿಷ್ಕಲ್ಮಶ ಸೇವೆ ಅದೇ ಸಮಯದಲ್ಲಿ ಪ್ಲಾಟ್‌ಫಾರ್ಮ್ 6ರ ಪಕ್ಕದಲ್ಲಿ ಮಿಲಿಟರಿ ರೈಲೊಂದು ಬಂದು ನಿಂತಿತು. ಅಲ್ಲಿ ಸೈನಿಕರೊಬ್ಬರು ತಮ್ಮ ಫೋನ್ ಚಾರ್ಜ್ ಮಾಡುತ್ತಿರುವುದನ್ನು ಕಂಡ ರೂಪಾ, ತನಗೂ ಸ್ವಲ್ಪ ಸಹಾಯ ಮಾಡುವಂತೆ ಕೇಳಿಕೊಂಡರು. “ಯಾರೂ ಸಹಾಯ ಮಾಡದಿದ್ದಾಗ ಆ ಭಾರತೀಯ ಸೈನಿಕ ತಕ್ಷಣ ಸ್ಪಂದಿಸಿದರು. ಅವರು ಕ್ಷಣಮಾತ್ರವೂ ಯೋಚಿಸದೆ ತಮ್ಮ ಫೋನ್ ತೆಗೆದು ಪವರ್ ಬ್ಯಾಂಕ್ ಅನ್ನು ನನ್ನ ಕೈಗೆ ನೀಡಿದರು. ಆ ಒಂದು ಸಣ್ಣ ಸಹಾಯ ನನ್ನ ಪೋಷಕರಿಗೆ ನಾನು ಸುರಕ್ಷಿತವಾಗಿದ್ದೇನೆ ಎಂಬ ಮಾಹಿತಿ ನೀಡಲು ಸಾಧ್ಯವಾಯಿತು” ಎಂದು ರೂಪಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ಆದ ವೀಡಿಯೊ ಈ ಘಟನೆಯ ಬಗ್ಗೆ ರೂಪಾ ಹಂಚಿಕೊಂಡ ವೀಡಿಯೊ ಈಗಾಗಲೇ 30 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. “ಸರ್, ಮಥುರಾ ಜಂಕ್ಷನ್‌ನಲ್ಲಿ ನೀವು ಮಾಡಿದ ಆ ಸಹಾಯ ನಿಮಗೆ ನೆನಪಿಲ್ಲದಿರಬಹುದು, ಆದರೆ ನಾನು ಅದನ್ನು ಎಂದಿಗೂ ಮರೆಯುವುದಿಲ್ಲ. ನಿಮಗೆ ಧನ್ಯವಾದಗಳು” ಎಂದು ಅವರು ಭಾವುಕರಾಗಿ ಬರೆದುಕೊಂಡಿದ್ದಾರೆ. ಭಾರತೀಯ ಸೇನೆಯು ಕೇವಲ ಶೌರ್ಯಕ್ಕೆ ಮಾತ್ರವಲ್ಲ, ಮಾನವೀಯತೆಗೂ ಹೆಸರಾಗಿದೆ ಎಂಬುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.

