ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 6ರಂದು ಕರ್ನಾಟಕ ಬಜೆಟ್-2026 ಮಂಡನೆ ಮಾಡಿದರು. ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಸಾಲದ ಕುರಿತು ಪ್ರಶ್ನೆ ಮಾಡಿದ್ದರು.
ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಕುಮಾರಸ್ವಾಮಿ, “ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಏನಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ” ಎಂದು ಟೀಕಿಸಿದ್ದರು.
“ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ” ಎಂದು ಆರೋಪಿಸಿದ್ದರು.
ನಿಗಮ/ ಮಂಡಳಿಗಳ ಅಧ್ಯಕ್ಷರುಗಳಿಗೆ ಕರ್ನಾಟಕ ಸರ್ಕಾರ ಸಂಪುಟ ದರ್ಜೆ ಸ್ಥಾನಮಾನ ನೀಡಿದೆ. ಈ ಸ್ಥಾನಮಾನ ಪಡೆದ ನಿಗಮ/ ಮಂಡಳಿಗಳ ಅಧ್ಯಕ್ಷರುಗಳಿಗೆ ಸಿಗುವ ಸೌಲಭ್ಯಗಳು ಏನು? ಎಂಬ ಮಾಹಿತಿ ಇಲ್ಲಿದೆ.
ನಿಗಮ/ ಮಂಡಳಿಗಳ ಅಧ್ಯಕ್ಷರುಗಳಿಗೆ ಸಿಗುವ ಸ್ಥಾನಮಾನದ ಕುರಿತು ಮಾಹಿತಿ ಇಲ್ಲಿದೆ. ವೇತನ, ಭತ್ಯೆ ಸೇರಿ ಒಟ್ಟು 14 ಅಂಶಗಳನ್ನು ಉಲ್ಲೇಖಿಸಲಾಗಿದೆ. ನಿಗಮ/ ಮಂಡಳಿಗಳಿಗೆ ತಮ್ಮ ಬೆಂಬಲಿಗರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸರ್ಕಾರ ಜನರ ತೆರಿಗೆ ಹಣದಲ್ಲಿ ಅವರಿಗೆ ವಿವಿಧ ಸೌಲಭ್ಯಗಳನ್ನು ನೀಡುತ್ತದೆ.
ನಿಗಮ/ ಮಂಡಳಿಗಳ ಅಧ್ಯಕ್ಷರುಗಳಿಗೆ ಸಿಗುವ ಸೌಲಭ್ಯಗಳ ಪಟ್ಟಿ
- ವೇತನ – ರೂ.1,25,000 (ಮಾಸಿಕ)
- ಆತಿಥ್ಯ ಭತ್ಯ – ರೂ. 5 ಲಕ್ಷಗಳು (ವಾರ್ಷಿಕ)
- ಮನೆ ಬಾಡಿಗೆ – HRA ರೂ. 2.50 ಲಕ್ಷ, ಖಾಸಗಿ ಮನೆಯನ್ನು ಬಾಡಿಗೆಗೆ ಪಡೆದು ನೀಡಿದಲ್ಲಿ ರೂ. 2.50 ಲಕ್ಷ.
- ಇಂಧನ ಭತ್ಯೆ – 2 ಸಾವಿರ ಲೀ.
- ಪ್ರಯಾಣ ಭತ್ಯೆ – ಪ್ರತಿ ಕಿ.ಮೀ.ಗೆ ರೂ. 40
- ನೀರು/ ವಿದ್ಯುತ್ ಸೌಲಭ್ಯ – ರೂ. 2000 ಗಳನ್ನು ವೇತನದಲ್ಲಿ ಕಟಾಯಿಸಿ ಇನ್ನುಳಿದ ಬಿಲ್ಲುಗಳನ್ನು ಸರ್ಕಾರವು ಆಪ್ತ ಶಾಖೆಯಿಂದ ಪಾವತಿಸುವುದು
- ಪೀಠೋಪಕರಣಗಳು – ರೂ. 10 ಲಕ್ಷ ಮಿತಿಯಲ್ಲಿ ಗೃಹಪಯೋಗಿ ವಸ್ತುಗಳನ್ನು ಹಾಗೂ ಪೀಠೋಪಕರಣಗಳನ್ನು ಖರೀದಿಸುವುದು.
- ವಾಹನ ಸೌಕರ್ಯ – ರೂ. 30 ಲಕ್ಷದ ಮಿತಿಗೆ ಒಳಪಟ್ಟು
- ದೂರವಾಣಿ ಸೌಲಭ್ಯ – ಮನೆ ಹಾಗೂ ಕಚೇರಿಗೆ ಉಚಿತ ದೂರವಾಣಿ ಸೌಲಭ್ಯ
- ಕಚೇರಿ ಸ್ಥಳಾವಕಾಶ – ವಿಧಾನಸೌಧ/ ವಿಕಾಸಸೌಧದಲ್ಲಿ ಕಚೇರಿಗಾಗಿ ಸ್ಥಳಾವಕಾಶ ಒದಗಿಸುವುದು
- ಆದ್ಯಾತಾ ಪಟ್ಟಿಯಲ್ಲಿ ಆದ್ಯತೆ – ಆದ್ಯತಾ ಪಟ್ಟಿಯಲ್ಲಿ 15ನೇ ಸ್ಥಾನವನ್ನು ನೀಡಲಾಗುವುದು
- ಪ್ರವಾಸ ಭತ್ಯೆ ಮತ್ತು ದಿನ ಭತ್ಯೆ – ರಾಜ್ಯ ಪ್ರವಾಸದಲ್ಲಿ ಪ್ರತಿ ದಿನಕ್ಕೆ ರೂ. 2,500, ಹೊರ ರಾಜ್ಯ ಪ್ರವಾಸಕ್ಕೆ ಪ್ರತಿ ದಿನಕ್ಕೆ ರೂ. 3000
- ವೈದ್ಯಕೀಯ ಭತ್ಯೆ – ನಿಯಮಾನುಸಾರ ಸಚಿವರಿಗೆ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಮರುಪಾವತಿಯನ್ನು ನೀಡಲಾಗುವುದು
- ಶಿಷ್ಟಾಚಾರ ವ್ಯವಸ್ಥೆ – ಹೊರ ರಾಜ್ಯ ಮತ್ತು ರಾಜ್ಯದಲ್ಲಿ ಶಿಷ್ಟಾಚಾರದ ವ್ಯವಸ್ಥೆಯನ್ನು ಒದಗಿಸುವುದು.

