ಶಾಲೆಗೆ ಹೋಗುವ ಸಮಯ ಬಂದರೆ ಹೊಟ್ಟೆನೋವು ಎಂದು ಹೇಳುವ ಮಗು, ರಾತ್ರಿ ಒಬ್ಬಂಟಿಯಾಗಿ ಮಲಗಲು ಹೆದರುವ ಮಕ್ಕಳು, ಸಣ್ಣಪುಟ್ಟ ವಿಚಾರಗಳಿಗೂ ಕೋಪ ಮಾಡಿಕೊಂಡು ಅಳುವ ಮಕ್ಕಳು ನಿಮ್ಮ ಮನೆಯಲ್ಲೂ ಇದ್ದಾರೆಯೇ? ಸಾಮಾನ್ಯವಾಗಿ ಇಂತಹ ವರ್ತನೆಯನ್ನು ಮಕ್ಕಳು ಮಾಡುವ ಹಠ, ತುಂಟಾಟ ಅಥವಾ ಶಾಲೆಗೆ ಹೋಗಲು ತೋರುವ ಸೋಮಾರಿತನ ಎಂದು ಪೋಷಕರು ಭಾವಿಸುತ್ತಾರೆ. ಆದರೆ ಇದರ ಹಿಂದೆ ಒಂದು ಗಂಭೀರ ಕಾರಣವಿರಬಹುದು. ಅದುವೇ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಆತಂಕ.
ಹೌದು, ಮಕ್ಕಳಿಗೆ ಯಾವುದೇ ಚಿಂತೆ ಇರುವುದಿಲ್ಲ, ಅವರು ಸದಾ ಸಂತೋಷವಾಗಿರುತ್ತಾರೆ ಎಂಬುದು ನಮ್ಮ ಸಾಮಾನ್ಯ ನಂಬಿಕೆ. ಆದರೆ ದೊಡ್ಡವರಂತೆಯೇ ಮಕ್ಕಳೂ ಭಯ, ಆತಂಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ವ್ಯತ್ಯಾಸವೆಂದರೆ ತಮ್ಮ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದನ್ನು ವಿವರಿಸುವಷ್ಟು ತಿಳಿವಳಿಕೆ ಅಥವಾ ಪದಗಳು ಅವರಿಗೆ ಇರುವುದಿಲ್ಲ. ಹೀಗಾಗಿ ತಮ್ಮ ಆತಂಕವನ್ನು ಮಾತಿನ ಬದಲು ದೈಹಿಕ ಸಮಸ್ಯೆಗಳು ಮತ್ತು ನಡವಳಿಕೆಯ ಮೂಲಕ ವ್ಯಕ್ತಪಡಿಸುತ್ತಾರೆ.
ಗೇಟ್‌ವೇ ಆಫ್ ಹೀಲಿಂಗ್‌ನ ಸಂಸ್ಥಾಪಕಿ ಹಾಗೂ ನಿರ್ದೇಶಕಿ, ಸೈಕೋಥೆರಪಿಸ್ಟ್ ಡಾ. ಚಾಂದಿನಿ ತುಘ್ನೈಟ್ ಅವರು ಮಕ್ಕಳಲ್ಲಿ ಆತಂಕ ಕಾಣಿಸಿಕೊಳ್ಳುವ ಲಕ್ಷಣಗಳು ಮತ್ತು ಪೋಷಕರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಮಗುವಿನ ಹೊಟ್ಟೆನೋವಿನ ಹಿಂದೆ ಇರಬಹುದೇ ಆತಂಕ?
ನಿಮ್ಮ ಮಗು ಶಾಲೆಗೆ ಹೋಗುವ ಮುನ್ನ ಪದೇಪದೆ ಹೊಟ್ಟೆನೋವು ಎಂದು ಹೇಳುತ್ತಿದೆಯೇ? ಭಾನುವಾರ ರಾತ್ರಿ ತಲೆನೋವು ಎಂದು ದೂರುತ್ತಿದೆಯೇ? ಹಾಗಿದ್ದರೆ ಮಗು ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನೆಪ ಹೇಳುತ್ತಿದೆ ಎಂದು ನಿರ್ಧರಿಸಬೇಡಿ.
ಏಕೆಂದರೆ ಕೆಲವು ಮಕ್ಕಳಲ್ಲಿ ಆತಂಕ ಮೊದಲು ದೈಹಿಕ ಸಮಸ್ಯೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ತಮ್ಮ ಮನಸ್ಸಿನಲ್ಲಿರುವ ಭಯ ಅಥವಾ ಒತ್ತಡವನ್ನು ಗುರುತಿಸಲು ಸಾಧ್ಯವಾಗದ ಮಕ್ಕಳು ಹೊಟ್ಟೆನೋವು, ತಲೆನೋವಿನಂತಹ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಾರೆ. ಹೀಗಾಗಿ ಇಂತಹ ದೂರುಗಳನ್ನು ನಿರ್ಲಕ್ಷಿಸದೆ ಗಮನಿಸುವುದು ಮುಖ್ಯ.
ಸಣ್ಣ ವಿಚಾರಕ್ಕೂ ಕೋಪ, ಹಠ ಮಾಡುತ್ತಿದೆಯೇ?
ಹಿಂದೆ ಸಂತೋಷದಿಂದ ಆಟವಾಡುತ್ತಿದ್ದ ಮಗು ಏಕಾಏಕಿ ಎಲ್ಲದಕ್ಕೂ ಕೋಪ ಮಾಡಿಕೊಳ್ಳಲು ಶುರುಮಾಡಿದೆಯೇ? ರಾತ್ರಿ ಒಬ್ಬಂಟಿಯಾಗಿ ಮಲಗಲು ನಿರಾಕರಿಸುತ್ತಿದೆಯೇ? ಪೋಷಕರನ್ನು ಬಿಟ್ಟು ಇರಲು ಇಷ್ಟಪಡುತ್ತಿಲ್ಲವೇ?
ಇವೆಲ್ಲವೂ ಮಕ್ಕಳಲ್ಲಿ ಆತಂಕ ಕಾಣಿಸಿಕೊಳ್ಳುವ ಸೂಚನೆಗಳಾಗಿರಬಹುದು. ಕೆಲವು ಮಕ್ಕಳು ಸಣ್ಣಪುಟ್ಟ ವಿಚಾರಗಳಿಗೂ ಹಠ ಮಾಡಬಹುದು. ಇನ್ನು ಕೆಲವು ಮಕ್ಕಳು ನಿದ್ರೆ ಮಾಡಲು ಕಷ್ಟಪಡಬಹುದು ಅಥವಾ ತಮಗೆ ಇಷ್ಟವಾದ ಚಟುವಟಿಕೆಗಳಿಂದ ದೂರ ಉಳಿಯಬಹುದು.
ಇಂತಹ ಬದಲಾವಣೆಗಳನ್ನು ಕೇವಲ ಕೆಟ್ಟ ನಡವಳಿಕೆ ಎಂದು ಪರಿಗಣಿಸದೆ, ಮಗುವಿನ ಮನಸ್ಸಿನಲ್ಲಿ ಏನಾದರೂ ತೊಂದರೆ ಇದೆಯೇ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು.
ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಮೇಲೆ ಹೆಚ್ಚಾಗುತ್ತಿದೆಯೇ ಒತ್ತಡ?
ಇಂದಿನ ಮಕ್ಕಳ ದಿನಚರಿ ಹಿಂದಿನ ಕಾಲಕ್ಕಿಂತ ಸಾಕಷ್ಟು ಬದಲಾಗಿದೆ. ಚಿಕ್ಕ ವಯಸ್ಸಿನಿಂದಲೇ ಶಾಲೆ, ಪಾಠ, ಹೋಮ್‌ವರ್ಕ್, ಪರೀಕ್ಷೆ, ಪೋಷಕರ ನಿರೀಕ್ಷೆಗಳು ಹೀಗೆ ಹಲವು ಒತ್ತಡಗಳನ್ನು ಮಕ್ಕಳು ಎದುರಿಸುತ್ತಿದ್ದಾರೆ.
ಇದರ ಜೊತೆಗೆ ಮೊಬೈಲ್ ಮತ್ತು ಇಂಟರ್‌ನೆಟ್ ಮೂಲಕ ತಮ್ಮ ವಯಸ್ಸಿಗೆ ಮೀರಿದ ವಿಷಯಗಳನ್ನೂ ನೋಡುತ್ತಿದ್ದಾರೆ. ಮನೆಯಲ್ಲಿರುವ ದೊಡ್ಡವರ ಒತ್ತಡ, ಜಗಳ ಮತ್ತು ಆತಂಕಗಳೂ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಪೋಷಕರು ತಮ್ಮ ಸಮಸ್ಯೆಗಳನ್ನು ಮಕ್ಕಳಿಂದ ಮರೆಮಾಚುತ್ತಿದ್ದರೂ ಮನೆಯ ವಾತಾವರಣದಲ್ಲಿನ ಬದಲಾವಣೆಗಳನ್ನು ಮಕ್ಕಳು ಗ್ರಹಿಸಬಹುದು.
ಮಕ್ಕಳ ಆತಂಕ ದೂರ ಮಾಡಲು ಪೋಷಕರು ಏನು ಮಾಡಬೇಕು?
ಮಕ್ಕಳು ಆತಂಕಕ್ಕೆ ಒಳಗಾದಾಗ ಅವರನ್ನು ಬೈಯುವುದು ಅಥವಾ ಅವರ ಭಾವನೆಗಳನ್ನು ನಿರ್ಲಕ್ಷಿಸುವುದು ಸಮಸ್ಯೆಯನ್ನು ಹೆಚ್ಚಿಸಬಹುದು. ಬದಲಾಗಿ ಪೋಷಕರು ಮಕ್ಕಳಿಗೆ ಪ್ರೀತಿ, ತಾಳ್ಮೆ ಮತ್ತು ಭದ್ರತೆಯ ಭಾವನೆ ಮೂಡಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
1. ಮಕ್ಕಳ ಭಾವನೆಗಳನ್ನು ಅರ್ಥಮಾಡಿಕೊಳ್ಳಿ: ಮಗು ಯಾಕೆ ಬೇಸರವಾಗಿದೆ ಎಂದು ಪದೇಪದೆ ಪ್ರಶ್ನಿಸುವ ಬದಲು, ಭಯ, ಗಾಬರಿ ಅಥವಾ ಆತಂಕದಂತಹ ಸರಳ ಪದಗಳ ಮೂಲಕ ಅದರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡಿ.
2. ಪ್ರತಿದಿನ ಸ್ವಲ್ಪ ಸಮಯ ಮೀಸಲಿಡಿ: ಮೊಬೈಲ್, ಟಿವಿ ಮತ್ತು ಇತರ ಅಡಚಣೆಗಳನ್ನು ಬದಿಗಿಟ್ಟು ಮಕ್ಕಳೊಂದಿಗೆ ಪ್ರತಿದಿನ ಸ್ವಲ್ಪ ಸಮಯ ಕಳೆಯಿರಿ. ಅವರ ಮಾತುಗಳನ್ನು ಗಮನವಿಟ್ಟು ಆಲಿಸಿ.
3. ದಿನಚರಿಯನ್ನು ನಿಯಮಿತವಾಗಿಡಿ: ಮಕ್ಕಳ ನಿದ್ರೆ, ಊಟ, ಆಟ ಮತ್ತು ಓದಿಗೆ ನಿಗದಿತ ಸಮಯ ಇರಲಿ. ನಿಯಮಿತ ದಿನಚರಿ ಮಕ್ಕಳಲ್ಲಿ ಭದ್ರತೆಯ ಭಾವನೆ ಮೂಡಿಸಲು ಸಹಾಯ ಮಾಡುತ್ತದೆ.
4. ಪದೇಪದೆ ಪ್ರಶ್ನೆ ಕೇಳಿದರೂ ಕೋಪಗೊಳ್ಳಬೇಡಿ: ಮಕ್ಕಳು ಒಂದೇ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಬಹುದು. ಅಂತಹ ಸಂದರ್ಭದಲ್ಲಿ ತಾಳ್ಮೆಯಿಂದ ಉತ್ತರಿಸಿ. ಅವರ ಆತಂಕವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.
5. ಮನಸ್ಸಿನ ಮಾತು ಹೇಳಲು ಅವಕಾಶ ನೀಡಿ: ಮಕ್ಕಳು ತಮ್ಮ ಭಯ, ಬೇಸರ ಮತ್ತು ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಹ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಿ.
ಮಕ್ಕಳ ನಗುವಿನ ಹಿಂದೆ ನೋವಿದೆಯೇ? ಪೋಷಕರೇ ಗಮನಿಸಿ!
ಮಕ್ಕಳು ಸದಾ ನಗುತ್ತಾ ಆಟವಾಡುತ್ತಿದ್ದಾರೆ ಎಂದ ಮಾತ್ರಕ್ಕೆ ಅವರ ಮನಸ್ಸಿನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದರ್ಥವಲ್ಲ. ಕೆಲವೊಮ್ಮೆ ಅವರು ಅನುಭವಿಸುತ್ತಿರುವ ಭಯ, ಒತ್ತಡ ಮತ್ತು ಆತಂಕವನ್ನು ಹೇಳಿಕೊಳ್ಳಲು ಸಾಧ್ಯವಾಗದೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸಬಹುದು.
ಹೀಗಾಗಿ ಮಕ್ಕಳ ಸಣ್ಣಪುಟ್ಟ ವರ್ತನೆಯ ಬದಲಾವಣೆಗಳನ್ನೂ ಗಮನಿಸಿ. ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಆತಂಕದ ಲಕ್ಷಣಗಳು ನಿರಂತರವಾಗಿ ಕಂಡುಬಂದರೆ ಮಕ್ಕಳ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರ ಸಲಹೆ ಪಡೆಯಿರಿ. ಏಕೆಂದರೆ ಮಕ್ಕಳಿಗೆ ದುಬಾರಿ ಉಡುಗೊರೆಗಳಿಗಿಂತ ಪೋಷಕರ ಪ್ರೀತಿ, ಸಮಯ, ತಾಳ್ಮೆ ಮತ್ತು ಮಾನಸಿಕ ಬೆಂಬಲವೇ ಹೆಚ್ಚು ಮುಖ್ಯ.
Disclaimer: ಈ ಲೇಖನವು ಆರೋಗ್ಯ ಜಾಗೃತಿ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಮಕ್ಕಳಲ್ಲಿ ಆತಂಕದ ಲಕ್ಷಣಗಳು ಕಂಡುಬಂದರೆ ಅರ್ಹ ವೈದ್ಯರು ಅಥವಾ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.

