ಬೆಂಗಳೂರು: ವೆಬ್ ಕಾಸ್ಟಿಂಗ್ ಮತ್ತು ಮುಖ ಚಹರೆ ಪತ್ತೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಅತ್ಯಂತ ಪಾರದರ್ಶಕವಾಗಿ ವಿವಿಧ ಪರೀಕ್ಷೆಗಳನ್ನು ನಡೆಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಚೇರಿಗೆ ಭಾರತ ಸರ್ಕಾರದ ಉಪ ಕಾರ್ಯದರ್ಶಿ ದರ್ಜೆಯ ಇಬ್ಬರು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆದರು.
ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳ ನಿಯೋಗ ಬುಧವಾರ ಭೇಟಿ ನೀಡಿದ್ದು, ಪಾರದರ್ಶಕ ಪರೀಕ್ಷೆ ವ್ಯವಸ್ಥೆ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದೆ. ಕೇಂದ್ರದ ಅಧಿಕಾರಿಗಳಾದ ರಮಣ್ ಕುಮಾರ್ ಮತ್ತು ಕೆ. ಮನೋಜ್ ಅವರ ನಿಯೋಗ ಜೊತೆಗೆ ಚಿತ್ರದುರ್ಗ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆಕಾಶ್ ಕೂಡ ಹಾಜರಿದ್ದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಪರೀಕ್ಷಾ ಅಕ್ರಮಗಳಿಗೆ ಹೇಗೆ ಕಡಿವಾಣ ಹಾಕಿದೆ ಎಂಬುದರ ಬಗ್ಗೆ ನಿಯೋಗಕ್ಕೆ ಪ್ರಾಧಿಕಾರದ ಆಡಳಿತ ಅಧಿಕಾರಿ ಇಸ್ಲಾವುದ್ದೀನ್ ಗದ್ಯಾಳ್ ಅವರು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದ್ದಾರೆ. ಪ್ರಾಧಿಕಾರದ ವತಿಯಿಂದ ಅಳವಡಿಸಿಕೊಂಡಿರುವ ಆಧುನಿಕ ಪರೀಕ್ಷಾ ವಿಧಾನಗಳ ಕುರಿತಾಗಿ ಮಾಹಿತಿ ಪಡೆದ ನಿಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.

