ಬೀದರ್ : ಜಿಲ್ಲೆಯ ಚಿಟಗುಪ್ಪ ತಾಲೂಕಿನ ಭೆಮಳಖೇಡ ಗ್ರಾಮದಲ್ಲಿ ಅತ್ಯಂತ ನೋವಿನ ಘಟನೆಯೊಂದು ನಡೆದಿದೆ. ಸಹಪಾಠಿಯೊಬ್ಬನ ಕಿರುಕುಳವನ್ನು ತಾಳಲಾರದೆ 16 ವರ್ಷದ ಶಾಲಾ ಬಾಲಕಿಯೊಬ್ಬಳು ಶಾಲಾ ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಮದಿಯಾ ನಶೀರ್ ಪಾಷಾ (16 ) ಎಂದು ಗುರುತಿಸಲಾಗಿದೆ.ಮೃತ ಬಾಲಕಿಯ ಚಿಕ್ಕಪ್ಪ ಎಂ.ಡಿ. ಯೂಸುಫ್ ಅವರು ಆರೋಪಿಸಿರುವಂತೆ, ಆಕೆಯ ಸಹಪಾಠಿಯೊಬ್ಬ ಮದಿಯಾಗೆ ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ. ಆತನ ಮಾನಸಿಕ ಕಿರುಕುಳವೇ ಬಾಲಕಿ ಈ ತೀವ್ರ ನಿರ್ಧಾರ ತೆಗೆದುಕೊಳ್ಳಲು ಕಾರಣ ಎನ್ನಲಾಗಿದೆ.ಶಾಲೆಯ ಆವರಣದಲ್ಲಿ ಸಹಪಾಠಿ ವಿದ್ಯಾರ್ಥಿಯು ಬಾಲಕಿಗೆ ಚುಡಾಯಿಸುತ್ತಿದ್ದ ದೃಶ್ಯಗಳು ಅಲ್ಲಿನ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿವೆ ಎಂದು ವರದಿಯಾಗಿದೆ.
ಪೊಲೀಸ್ ಕ್ರಮ: ಘಟನಾ ಸ್ಥಳಕ್ಕೆ ಭೆಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

