HomeIndiaಸಿನಿಮಾ ಆಗಲಿದೆ ಸೋನಿಯಾ ಗಾಂಧಿವರ ಅತ್ಮಚರಿತ್ರೆ: ನಿರ್ಮಾಣಕ್ಕೆ 2 ಕೋಟಿ ಹಣದ ಕೊಡುಗೆ ಘೋಷಿಸಿದ...

ಸಿನಿಮಾ ಆಗಲಿದೆ ಸೋನಿಯಾ ಗಾಂಧಿವರ ಅತ್ಮಚರಿತ್ರೆ: ನಿರ್ಮಾಣಕ್ಕೆ 2 ಕೋಟಿ ಹಣದ ಕೊಡುಗೆ ಘೋಷಿಸಿದ ಆಂಜನೇಯಲು

ಹೈದರಾಬಾದ್: ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಇತ್ತೀಚೆಗಷ್ಟೆ ಬಿಡುಗಡೆಯಾಗಿದೆ. ಸೋನಿಯಾ ಅವರ ಈ ನೆನಪಿನ ಚರಿತ್ರೆ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದೀಗ ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಾಣ ಮಾಡುವ ಯೋಜನೆಯನ್ನು ತೆಲಂಗಾಣ ಕಾಂಗ್ರೆಸ್ ಘೋಷಿಸಿದೆ.

ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಗಾರೆಡ್ಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಜಗ್ಗಾ ರೆಡ್ಡಿ ಈ ಘೋಷಣೆ ಮಾಡಿದ್ದು, ಚಿತ್ರದ ನಿರ್ಮಾಣಕ್ಕೆ ಮುಂದೆ ಬಂದು ಕೊಡುಗೆ ನೀಡುವಂತೆ ಸಂಗಾರೆಡ್ಡಿ ಕ್ಷೇತ್ರದ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ಮಾತನಾಡಿದ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂತಿ ಆಂಜನೇಯಲು, ಸೋನಿಯಾ ಗಾಂಧಿ ಅವರ ಜೀವನ ಕುರಿತಾದ ಸಿನಿಮಾ ನಿರ್ಮಾಣಕ್ಕಾಗಿ 2 ಕೋಟಿ ಹಣದ ಕೊಡುಗೆಯನ್ನು ನೀಡುವುದಾಗಿ ಘೋಷಣೆ ಮಾಡಿದರು.

ಚಿತ್ರ ನಿರ್ಮಾಣವನ್ನು ಪ್ರಾರಂಭಿಸಲು 50 ಸದಸ್ಯರ ಸಮಿತಿಯನ್ನು ರಚಿಸುವಂತೆ ಜಗ್ಗಾ ರೆಡ್ಡಿ ಸಲಹೆ ನೀಡಿದರು. ಈ ಸಮಿತಿಯ ಉಸ್ತುವಾರಿಯನ್ನು ಗಾಂಧಿ ಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರಿಪ್ರಸಾದ್ ವಹಿಸಿಕೊಳ್ಳಲಿದ್ದಾರೆ. ನಾಯಕರು ನಿಧಿ ಸಂಗ್ರಹಿಸುವಂತೆ ಕರೆ ನೀಡಿದ ಅವರು, ‘ನೀವು ಚುನಾವಣೆಗಳಿಗಾಗಿ ಖರ್ಚು ಮಾಡುತ್ತೀರಿ ಅಲ್ಲವೇ? ಇದನ್ನು ಅಂಥದ್ದೇ ಒಂದು ಖರ್ಚು ಎಂದು ಪರಿಗಣಿಸಿ. ಬಜೆಟ್ ಅನ್ನು ಒಟ್ಟುಗೂಡಿಸೋಣ ಮತ್ತು ಒಬ್ಬ ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡೋಣ’ ಎಂದು ಕಾರ್ಯಕರ್ತರಿಗೆ ಹೇಳಿದರು.

ಸಿದ್ಧತೆಗಳು ಪೂರ್ಣಗೊಂಡ ಬಳಿಕ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ನೀಡಲು ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸುವುದಾಗಿ ಅವರು ತಿಳಿಸಿದರು. ಸೋನಿಯಾ ಗಾಂಧಿ ಅವರ ಆತ್ಮಚರಿತೆಯ ಪ್ರತಿಗಳನ್ನು ತರಿಸಿ ಪಕ್ಷದ ಕಾರ್ಯಕರ್ತರಿಗೆ ಹಂಚಲಾಗುವುದು, ಇದರಿಂದ ಅವರ ಜೀವನ ಮತ್ತು ಅನುಭವಗಳನ್ನು ಕಾರ್ಯಕರ್ತರು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ ಎಂದೂ ಜಗ್ಗಾ ರೆಡ್ಡಿ ಹೇಳಿದರು.

ಇಂದಿರಾ ಗಾಂಧಿಯವರ ಸೊಸೆಯಾಗಿ, ರಾಜೀವ್ ಗಾಂಧಿಯವರ ಪತ್ನಿಯಾಗಿ ಮತ್ತು ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿಯವರ ತಾಯಿಯಾಗಿ ಸೋನಿಯಾ ಗಾಂಧಿ ಅವರ ಜೀವನದ ವಿವಿಧ ಮಜಲುಗಳನ್ನು ಈ ಚಿತ್ರವು ಚಿತ್ರೀಕರಿಸಲಿದೆ. ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿಯವರ ಹತ್ಯೆಗಳ ನಂತರ ಆ ಕುಟುಂಬ ಎದುರಿಸಿದ ದುರಂತಗಳು, ಆ ಬಳಿಕ ಸೋನಿಯಾ ಗಾಂಧಿ ಅನುಭವಿಸಿದ ಕಷ್ಟಗಳು, ಅವರು ರಾಹುಲ್ ಮತ್ತು ಪ್ರಿಯಾಂಕರನ್ನು ಬೆಳೆಸಿದ ರೀತಿ ಹಾಗೂ ಅವರ ರಾಜಕೀಯ ಪ್ರಯಾಣವನ್ನು ಈ ಚಿತ್ರವು ಪ್ರೇಕ್ಷಕರ ಮುಂದೆ ತರಲಿದೆ ಎಂದು ಅವರು ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular