ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮುಂಬರುವ ಐಪಿಎಲ್ ಆವೃತ್ತಿಗೂ ಮುನ್ನ ದೊಡ್ಡ ಬದಲಾವಣೆಗೆ ಮುಂದಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಹಾಗೂ ಕಳೆದ ಎರಡು ಸೀಸನ್‌ಗಳ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಟ್ರೇಡ್ ಮಾಡಿಕೊಳ್ಳಲಾಗಿದ್ದು, ಪ್ರತಿಯಾಗಿ ಭಾರತದ ಸ್ಟಾರ್ ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಮುಂಬೈ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಈ ದಿಢೀರ್ ಬೆಳವಣಿಗೆಯಿಂದಾಗಿ ಐದು ಬಾರಿಯ ಚಾಂಪಿಯನ್ಸ್ ಶಿಬಿರದಲ್ಲಿ ಸಾರಥ್ಯದ ಪ್ರಶ್ನೆ ಎದ್ದಿದ್ದು, ಹೊಸ ನಾಯಕನ ಆಯ್ಕೆಗಾಗಿ ಯಾವುದೇ ಯದ್ವಾತದ್ವಾ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ನವೆಂಬರ್ 17 ರಂದು ನಡೆಯಲಿರುವ ಆಟಗಾರರ ಉಳಿಸಿಕೊಳ್ಳುವಿಕೆ ಪ್ರಕ್ರಿಯೆ ಹಾಗೂ ಡಿಸೆಂಬರ್ 16 ರಂದು ಗೋವಾದಲ್ಲಿ ನಡೆಯಲಿರುವ ಮಿನಿ ಹರಾಜಿಗೂ ಮುನ್ನ ನಾಯಕನ ವಿಚಾರದಲ್ಲಿ ಗಂಭೀರ ಚಿಂತನೆ ನಡೆಸುವುದಾಗಿ ತಂಡದ ಮ್ಯಾನೇಜ್‌ಮೆಂಟ್ ತಿಳಿಸಿದೆ. ಮುಂಬರುವ ದಿನಗಳಲ್ಲಿ ಸೂಕ್ತ ಸಮಯದಲ್ಲಿ ಹೊಸ ನಾಯಕನ ಹೆಸರನ್ನು ಅಧಿಕೃತವಾಗಿ ಪ್ರಕಟಿಸುವುದಾಗಿ ಫ್ರಾಂಚೈಸಿ ವರದಿ ತಿಳಿಸಿದೆ.
ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದೊಂದಿಗೆ ಸುದೀರ್ಘ ಹಾಗೂ ಸ್ಮರಣೀಯ ಒಡನಾಟವನ್ನು ಹೊಂದಿದ್ದರು. 2015 ರಲ್ಲಿ ಯುವ ಆಟಗಾರನಾಗಿ ತಂಡ ಪ್ರವೇಶಿಸಿದ್ದ ಅವರು, ನಾಲ್ಕು ಐಪಿಎಲ್ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಗುಜರಾತ್ ಟೈಟಾನ್ಸ್ ತಂಡ ಸೇರಿ ಯಶಸ್ಸು ಕಂಡಿದ್ದ ಅವರು, 2024 ರಲ್ಲಿ ಮರಳಿ ಮುಂಬೈ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಈ ಹೊಸ ಒಪ್ಪಂದದ ಪ್ರಕಾರ ಹಾರ್ದಿಕ್ ಪಾಂಡ್ಯ ಅವರ ಸಂಭಾವನೆ 18 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಮತ್ತೊಂದೆಡೆ, ಕಳೆದ ಎಂಟು ಸೀಸನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದ ಎಡಗೈ ವೇಗಿ ಅರ್ಷದೀಪ್ ಸಿಂಗ್ ಈಗ ಮುಂಬೈ ಇಂಡಿಯನ್ಸ್ ಪಾಳಯಕ್ಕೆ ಕಾಲಿಟ್ಟಿದ್ದಾರೆ. ಪಂಜಾಬ್ ಪರ 96 ಪಂದ್ಯಗಳಿಂದ 111 ವಿಕೆಟ್ ಕಬಳಿಸಿ ಸಾರ್ವಕಾಲಿಕ ಗರಿಷ್ಠ ವಿಕೆಟ್ ಟೇಕರ್ ಎನಿಸಿರುವ ಅವರು, 18 ಕೋಟಿ ರೂ. ಮೊತ್ತಕ್ಕೆ ಮುಂಬೈ ತಂಡಕ್ಕೆ ವರ್ಗಾವಣೆಗೊಂಡಿದ್ದಾರೆ. ಜಸ್ಪ್ರಿತ್ ಬುಮ್ರಾ ಜತೆಗೆ ಅರ್ಷದೀಪ್ ಸಿಂಗ್ ಸಾಥ್ ನೀಡಲಿದ್ದು, ಮುಂಬೈ ತಂಡದ ವೇಗದ ಬೌಲಿಂಗ್ ದಳ ಇನ್ನಷ್ಟು ಬಲಗೊಳ್ಳಲಿದೆ.

